ಶರೀಫ್ ಗಡಿಪಾರಿಗೆ ಬ್ರಿಟನ್ ಪ್ರಧಾನಿ ಜೊತೆ ಮಾತುಕತೆಗೂ ಸಿದ್ಧ : ಪಾಕ್ ಪ್ರಧಾನಿ ಇಮ್ರಾನ್ ಖಾನ್

Update: 2020-10-24 16:12 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಅ. 24: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಮ್‌ಎಲ್-ಎನ್‌) ಪಕ್ಷದ ಮುಖ್ಯಸ್ಥ ನವಾಝ್ ಶರೀಫ್‌ರನ್ನು ಲಂಡನ್‌ನಿಂದ ಗಡಿಪಾರು ಮಾಡಿಸುವುದಕ್ಕಾಗಿ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್‌ರೊಂದಿಗೆ ಮಾತುಕತೆ ನಡೆಸಲು ಕೂಡ ಸಿದ್ಧನಿರುವುದಾಗಿ ದೇಶದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

 ‘‘ನವಾಝ್ ಶರೀಫ್‌ರನ್ನು ಗಡಿಪಾರು ಮಾಡಿಸಿಕೊಳ್ಳಲು ಕಾನೂನು ಪ್ರಕ್ರಿಯೆಯ ಮೊರೆ ಹೋದರೆ, ಅದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಿಂತ ಅಲ್ಲಿನ ಸರಕಾರದೊಂದಿಗೆ ನೇರ ಮಾತುಕತೆ ನಡೆಸಿದರೆ, ಗಡಿಪಾರು ತಕ್ಷಣ ಸಂಭವಿಸುತ್ತದೆ’’ ಎಂದು ‘ಎಆರ್‌ವೈ ನ್ಯೂಸ್’ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಹೇಳಿದ್ದಾರೆ. ಸಂದರ್ಶನ ಶುಕ್ರವಾರ ಪ್ರಸಾರಗೊಂಡಿದೆ.

‘‘ಬ್ರಿಟನ್‌ನ ಅಧಿಕಾರಿಗಳೊಂದಿಗೆ ನಾವು ನಿಯಮಿತ ಸಂಪರ್ಕದಲ್ಲಿದ್ದೇವೆ. ಅವರನ್ನು ಗಡಿಪಾರು ಮಾಡಿಸಿಕೊಳ್ಳಲು ನಾವು ಸಂಪೂರ್ಣ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’’ ಎಂದು ಪಾಕ್ ಪ್ರಧಾನಿ ಹೇಳಿದರು.

‘‘ಇದಕ್ಕಾಗಿ ನಾನು ಬ್ರಿಟನ್‌ಗೆ ಹೋಗಬೇಕಾಗಿದೆ, ಅಲ್ಲಿ ಹೋಗಿ ಪ್ರಧಾನಿ ಬೊರಿಸ್ ಜಾನ್ಸನ್ ಜೊತೆಗೆ ಮಾತುಕತೆ ನಡೆಸುತ್ತೇನೆ’’ ಎಂದು ಅವರು ಹೇಳಿದರು.

 ‘‘ಪಾಕಿಸ್ತಾನದ ಆಂತರಿಕ ರಾಜಕೀಯದಲ್ಲಿ ನಾವು ಭಾಗಿಯಾಗುವುದಿಲ್ಲ’’ ಎಂಬುದಾಗಿ ಬ್ರಿಟಿಶ್ ಸರಕಾರ ಪಾಕಿಸ್ತಾನಿ ಅಧಿಕಾರಿಗಳಿಗೆ ಹೇಳಿದ ವಾರಗಳ ಬಳಿಕ ಪಾಕ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಕಾಯಿಲೆಗೆ ಚಿಕಿತ್ಸೆ ಪಡೆಯುವುದಕ್ಕಾಗಿ ನ್ಯಾಯಾಲಯದ ಆದೇಶದಂತೆ ಕಳೆದ ವರ್ಷದ ನವೆಂಬರ್‌ನಲ್ಲಿ ನವಾಝ್ ಶರೀಫ್ ಲಂಡನ್‌ಗೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News