ಕಾಡುಹುಲಿ ಮತ್ತು ಬಂಡೆ ನಡುವಿನ ಒಳಜಗಳದಿಂದ ಕಾಂಗ್ರೆಸ್ಸಿಗರು ಬೇಸತ್ತಿದ್ದಾರೆ: ನಳೀನ್ ಕುಮಾರ್ ಕಟೀಲು

Update: 2020-10-24 16:15 GMT

ಮಡಿಕೇರಿ, ಅ.24 : ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ, ಕಾಡುಹುಲಿ ಮತ್ತು ಬಂಡೆ ನಡುವಿನ ಒಳಜಗಳದಿಂದ ಬೇಸತ್ತಿರುವ ಅನೇಕ ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆಗೊಳ್ಳಲು ಒಲವು ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತನ್ನನ್ನು ಕಾಡು ಮನುಷ್ಯ ಎಂದು ಟೀಕಿಸಿರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿ ಕಾಡು ಪ್ರಾಣಿಗಿಂತ ಕಾಡು ಮನುಷ್ಯನೇ ವಾಸಿ ಎಂದರು. 

ಕಾಡು ಮನುಷ್ಯ ಯಾರಿಗೂ ಹಾನಿಯುಂಟು ಮಾಡುವುದಿಲ್ಲ, ಕಾಡು ಮನುಷ್ಯ ಪರೋಪಕಾರಿ ಆಗಿದ್ದರಿಂದಲೇ ದಕ್ಷಿಣ ಕನ್ನಡದಲ್ಲಿ ಕಳೆದ ಚುನಾವಣೆಯಲ್ಲಿ 2.50 ಲಕ್ಷ ಮತಗಳ ಅಂತರದ ಗೆಲುವು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್‍ನಲ್ಲಿ ಒಳಜಗಳ ಹೆಚ್ಚಾಗುತ್ತಲೇ ಇರುವುದರಿಂದ ಅನೇಕ ಶಾಸಕರು ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರೆ ಎಂದು ಕಟೀಲು ಹೇಳಿದರು.

ಡಿ.ಜೆ.ಹಳ್ಳಿ ಗಲಭೆಗೆ ಸಿದ್ದರಾಮಯ್ಯ ಬಣದಲ್ಲಿನ ಅಖಂಡ ಶ್ರೀನಿವಾಸ್ ಮತ್ತು ಡಿ.ಕೆ.ಶಿವಕುಮಾರ್ ಬಣದಲ್ಲಿರುವ ಸಂಪತ್ ರಾಜ್ ಜಗಳವೇ ಕಾರಣ ಎಂಬುದು ಪೊಲೀಸ್ ವರದಿಯಿಂದಲೇ ಸ್ಪಷ್ಟವಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿ ಸಂಪೂರ್ಣ ಹಾನಿ ಮಾಡಿದರೂ ಕಾಂಗ್ರೆಸ್ ಮುಖಂಡರು ಘಟನೆಗೆ ಕಾರಣನಾಗಿರುವ ಸಂಪತ್ ರಾಜ್ ಬಗ್ಗೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದ ಕಟೀಲು, ಇದರಿಂದಾಗಿಯೇ ಕಾಂಗ್ರೆಸ್ ಒಡೆದ ಮನೆಯಂತಾಗಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೂಡ ಡ್ರಗ್ ಮಾಫಿಯಾವಿತ್ತು, ಇದರಿಂದಾಗಿ ಕಾಂಗ್ರೆಸ್ ಸರ್ಕಾರ ಮಾದಕ ಜಾಲವನ್ನು ಮಟ್ಟ ಹಾಕಲು ಮುಂದಾಗಲೇ ಇಲ್ಲ ಎಂದು ಆರೋಪಿಸಿದ ನಳೀನ್ ಕುಮಾರ್ ಕಟೀಲು, ಬಿಜೆಪಿ ಸರ್ಕಾರ ಡ್ರಗ್ಸ್ ಜಾಲವನ್ನು ನಿಯಂತ್ರಿಸಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದರು.

ಹಿಂದೂ ಮತ್ತು ಮುಸಲ್ಮಾನರನ್ನು ದೂರ ಮಾಡಲೆಂದೇ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಜಾರಿಗೆ ತಂದರು. ಹಾಗೇ ಲಿಂಗಾಯಿತ, ವೀರಶೈವ ಎಂಬ ಗೊಂದಲ ಸೃಷ್ಟಿಸಿ ಲಿಂಗಾಯತರ ಸಮುದಾಯವನ್ನೂ ಒಡೆದ ಕುಖ್ಯಾತಿ ಸಿದ್ದರಾಮಯ್ಯ ಅವರಿಗೇ ಸಲ್ಲಬೇಕೆಂದು ಕಟೀಲು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಬೆಂಬಲ ನೀಡಿದ 17 ಶಾಸಕರಿಗೂ ಕೊಟ್ಟ ಮಾತಿನಂತೆ ಸೂಕ್ತ ಹುದ್ದೆ ನೀಡಲಾಗಿದೆ. ಇದು ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಎಂಬುದಕ್ಕೆ ನಿದರ್ಶನವಾಗಿದೆ. ಬಿಜೆಪಿಯ ಮುಂದಿನ ಗುರಿ ಜಿಲ್ಲಾ ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಅಧಿಕಾರ ಹಿಡಿಯುವುದಾಗಿದೆ. ಕೊಡಗು ಜಿಲ್ಲೆಯಲ್ಲಿ ಶೇ.80 ರಷ್ಟು ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯವ ವಿಶ್ವಾಸ ವ್ಯಕ್ತಪಡಿಸಿದರು. ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್ ಸಂದರ್ಭ ಜಿಲ್ಲೆಯ ಜನಪ್ರತಿನಿಧಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಅಭಿನಂದನೆ ಸಲ್ಲಿಸುವುದಾಗಿ ನಳಿನ್ ಕುಮಾರ್ ಕಟೀಲು ತಿಳಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗು ಜಿಲ್ಲೆಯ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ಸರಕಾರ ಸೂಕ್ತ ರೀತಿಯ ಸ್ಪಂದನೆ ತೋರಿದೆ. ಹೀಗಾಗಿ ಜನರು ಕೂಡ ಬಿಜೆಪಿಯ ಬಗ್ಗೆ ವಿಶ್ವಾಸ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಯ ಜಮ್ಮಾಬಾಣೆ ಸಮಸ್ಯೆಯನ್ನು ಮೊದಲು ಪರಿಹರಿಸಿದ್ದರು. ಕಂದಾಯ ಸಚಿವರು ಅ.17ರ ಪವಿತ್ರ ದಿನದಂದು ಪೌತಿ ಖಾತೆ ಸಮಸ್ಯೆಗಳನ್ನು ಕೂಡ ಪರಿಹರಿಸುವ ಕುರಿತು ಹೊಸ ಆದೇಶ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಪೌತಿ ಖಾತೆಗಳನ್ನು ಆಯಾ ವಾರಸುದಾರರ ಹೆಸರಿಗೆ ಮಾಡಿಕೊಡಬೇಕಿದೆ. ಈ ಬಗ್ಗೆ ಕರಪತ್ರವನ್ನು ಹೊರಡಿಸುವ ಮೂಲಕ ಜನರನ್ನು ಜಾಗೃತಿಗೊಳಿಸಲಾಗುತ್ತದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. 

ಡಾ.ಕಸ್ತೂರಿ ರಂಗನ್ ವರದಿಗೆ ವಿರೋಧ
ಡಾ.ಕಸ್ತೂರಿ ರಂಗನ್ ವರದಿಯನ್ನು ಡಿಸೆಂಬರ್ ಒಳಗೆ ಅನುಷ್ಟಾನಕ್ಕೆ ತರುವಂತೆ ಸುಪ್ರಿಂಕೋರ್ಟ್‍ನ ಹಸಿರು ನ್ಯಾಯಾಪೀಠ ಹೇಳಿದೆ. ಈಗಾಗಲೇ ಕೆಲವು ಶಾಸಕರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದಕ್ಕೆ ಆಕ್ಷೇಪ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಜಾರಿಯಾದಲ್ಲಿ ಕೊಡಗು ಮಲೆನಾಡು ಭಾಗಗಳಲ್ಲಿ ಜನರು ಬದುಕಲು ಸಾಧ್ಯವಿಲ್ಲ. ಹೀಗಾಗಿ ಈ ವರದಿಯನ್ನು ಯಥಾಸ್ಥಿತಿಯಲ್ಲಿ ತರಲು ಬಿಡುವುದಿಲ್ಲ ಎಂದು ಬೋಪಯ್ಯ ಹೇಳಿದರು. 

ಜಿಲ್ಲೆಯಲ್ಲಿ ನಕ್ಸಲರು ಮತ್ತು ಉಗ್ರಗ್ರಾಮಿಗಳು ಬೇರೂರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಸೂಚ್ಯವಾಗಿ ಹೇಳೀದೆ. ಹೀಗಾಗಿ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ಜಾಗೃತಿ ವಹಿಸಬೇಕು. ಇಲ್ಲವಾದಲ್ಲಿ ದೊಡ್ಡ ಅನಾಹುತ ನಡೆಯುವ ಸಾಧ್ಯತೆಯಿದೆ ಎಂದು ಬೋಪಯ್ಯ ಎಚ್ಚರಿಸಿದರು.

ಜಿ.ಪಂ, ತಾ.ಪಂ, ಸಹಕಾರ ಸಂಘಗಳು ಬಿಜೆಪಿ ಪಾಲಾಗಿದೆ. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಪಂಚಾಯತ್ ಗಳು ಬಿಜೆಪಿ ಪಾಲಾಗುವಂತೆ ಮಾಡಲು ಪಕ್ಷದ ಕಾರ್ಯಕರ್ತರು ಪ್ರಯತ್ನಿಸಬೇಕೆಂದು ಬೋಪಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೇಂದ್ರದ ನರೇಂದ್ರಮೋದಿ ನೇತೃತ್ವದ ಸರ್ಕಾರ ವಿಶ್ವವನ್ನೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಇದನ್ನು ದೇಶದ ಪ್ರತಿಯೊಬ್ಬರು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ನುಡಿದರು. ಶಿರಾ ಹಾಗೂ ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಬಂಡೆ ಪುಡಿಯಾಗಿ ಹುಲಿ ಕಾಡು ಪಾಲಾಗಲಿದೆ ಎಂದರು. ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರಕಾರದ ಸಾಧನೆಗಳನ್ನು ವಿವರಿಸಬೇಕು. ಎಲ್ಲಾ ಗ್ರಾಮ ಪಂಚಾಯತ್ ಗಳು ಕೂಡ ಬಿಜೆಪಿ ಪಂಚಾಯತನ್ನಾಗಿ ಮಾಡಲು ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಅಪ್ಪಚ್ಚು ರಂಜನ್ ಹೇಳಿದರು. 

ಸಭೆಯ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕೋವಿಡ್ ಸಂದರ್ಭ ಪಕ್ಷ ವಹಿಸಿದ್ದ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತಂದ ವರದಿಯನ್ನು ಅಂಕಿ ಅಂಶಗಳ ಸಹಿತ ವಿವರಿಸಿದರು.

ಈ ಸಂದರ್ಭ ಜಿಲ್ಲೆಗೆ ಎರಡನೇ ಬಾರಿಗೆ ಆಗಮಿಸಿದ ನಳೀನ್ ಕುಮಾರ್ ಕಟೀಲು ಅವರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಕೊಡಗಿನ ಸಾಂಪ್ರದಾಯಿಕ ಪೇಟ ತೊಡಿಸಿ, ಶಾಲು ಹೊದಿಸಿ ಗೌರವಿಸಲಾಯಿತು. ಹೊರ ಜಿಲ್ಲೆಗಳಿಗೆ ಪ್ರಭಾರಿಗಳಾಗಿ ನೇಮಕವಾದ ಜಿಲ್ಲಾ ಬಿಜೆಪಿ ಮುಖಂಡರುಗಳಾದ ಭಾರತೀಶ್, ರೀನಾ ಪ್ರಕಾಶ್, ರಾಜೇಂದ್ರ, ರವಿ ಕುಶಾಲಪ್ಪ ಅವರನ್ನು ಇದೇ ಸಂದರ್ಭ ಗಣ್ಯರು ಸನ್ಮಾನಿಸಿ ಗೌರವಿಸಿದರು. ಸಭೆಗೂ ಮುನ್ನ ಅಗಲಿದ ಹಿರಿಯ ಮುಖಂಡರಿಗೆ ಪಕ್ಷದ ವತಿಯಿಂದ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು. 

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ಕೊಡಗು ಜಿಲ್ಲಾ ಪ್ರಭಾರಿ ರಾಜೇಂದ್ರ, ಮಂಗಳೂರು ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಗೋಪಾಲ ಕೃಷ್ಣ ಹೇರಳೆ, ದಕ್ಷಿಣ ಕನ್ನಡ ಪ್ರಭಾರಿ ಪ್ರಶಾಂತ್, ಮಹೇಶ್ ಜೈನಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News