ಸಿದ್ದರಾಮಯ್ಯ ಸಾಲಭಾಗ್ಯ ನೀಡಿದ ಅನಭಿಷಕ್ತ ದೊರೆ: ಬಿಜೆಪಿ ಟೀಕೆ

Update: 2020-10-24 16:16 GMT

ಬೆಂಗಳೂರು, ಅ.24: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆಡಳಿತರೂಢ ಬಿಜೆಪಿ ನಡುವಿನ ಟ್ವೀಟ್ ಸಮರ ಮುಂದುವರಿದಿದ್ದು, ಶನಿವಾರ ಸಿದ್ದರಾಮಯ್ಯ ವಿರುದ್ಧ ‘ಉತ್ತರ ಕೊಡಿ ಸಿದ್ದರಾಮಯ್ಯನವರೇ’ ಎಂಬ ಅಡಿಬರಹದಲ್ಲಿ ಸರಣಿ ಟ್ವೀಟ್‍ಗಳನ್ನು ಮಾಡಿರುವ ಬಿಜೆಪಿ, ಅವರನ್ನು ‘ಸಾಲಭಾಗ್ಯ’ ನೀಡಿದ ಅನಭಿಷಕ್ತ ದೊರೆ ಎಂದು ಟೀಕಿಸಿದೆ.

ಸಿದ್ದರಾಮಯ್ಯ ಕೇವಲ ‘ಮಜಾವಾದಿ’ ಅಲ್ಲ, ಸಾಲಭಾಗ್ಯ ನೀಡಿದ ಅನಭಿಷಿಕ್ತ ದೊರೆಯೂ ಹೌದು. 2013ರಲ್ಲಿ 20 ಸಾವಿರ ಕೋಟಿ ರೂ., 2014ರಲ್ಲಿ 21 ಸಾವಿರ ಕೋಟಿ ರೂ., 2015ರಲ್ಲಿ 21 ಸಾವಿರ ಕೋಟಿ ರೂ., 2016ರಲ್ಲಿ 28 ಸಾವಿರ ಕೋಟಿ ರೂ. ಹಾಗೂ 2017ರಲ್ಲಿ 35 ಸಾವಿರ ಕೋಟಿ ರೂ., ಕನ್ನಡಿಗರನ್ನು ಸಾಲವೆಂಬ ಶೂಲಕ್ಕೆ ಏರಿಸಿದ್ದೆ ನೀವಲ್ಲವೇ ಸಿದ್ದರಾಮಯ್ಯನವರೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ, ನೀವು ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕರುಣಿಸಿದ್ದೀರಿ. ಧರ್ಮ ಆಧಾರಿತವಾಗಿ ಶಾದಿ ಭಾಗ್ಯ, ಜಾತಿ ಆಧಾರಿತವಾಗಿ ಮಕ್ಕಳಿಗೆ ಪ್ರವಾಸ ಭಾಗ್ಯ, ಜಾತಿ ಆಧಾರಿತವಾಗಿ ಮೊಟ್ಟೆ ಭಾಗ್ಯ. ಬಹುಮುಖ್ಯವಾಗಿದ್ದು ಸಾಲಭಾಗ್ಯ ಇದನ್ನು ಮಾತ್ರ ರಾಜ್ಯದ ಎಲ್ಲರ ಮೇಲೆ ಹೊರಿಸಿದ್ದೀರಿ, ಅಲ್ಲವೇ? ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ, ನಿಮ್ಮ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ 44,769 ರೂ. ಸಾಲದ ಹೊರೆ ಹೊರೆಸಿದ ‘ಸಾಲರಾಮಯ್ಯ’ ನೀವಲ್ಲವೇ? ನೀವು ಮಾಡಿದ ಸಾಲದ ಅಸಲು ಮತ್ತು ಬಡ್ಡಿ ತೀರಿಸುತ್ತಾ ಕರ್ನಾಟಕ ದಿವಾಳಿ ಆಗಿದೆ. ಈ ನಿಮ್ಮ ಮಹಾನ್ ಸಾಧನೆಯನ್ನು ಜನರಿಗೆ ತಿಳಿಸುವ ‘ಧಮ್’ ನಿಮಗಿಲ್ಲವೇ? ಎಂದು ಬಿಜೆಪಿ ಸವಾಲು ಹಾಕಿದೆ.

ಸಿದ್ದರಾಮಯ್ಯ ಅವರೇ, ಹಲವು ಭಾಗ್ಯಗಳನ್ನು ನೀಡಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು, ಕನ್ನಡಿಗರಿಗೆ ಸಾಲಭಾಗ್ಯ ನೀಡಿದ್ದರ ಬಗ್ಗೆ ಹೇಳಿಕೊಳ್ಳುವುದಿಲ್ಲವೇಕೆ? ಮುಖ್ಯಮಂತ್ರಿಯಾದ ಕೇವಲ 22 ತಿಂಗಳಲ್ಲಿಯೇ 39,161 ಕೋಟಿ ರೂ.ಸಾಲ ಮಾಡಿ ದುಂದು ವೆಚ್ಚ ಮಾಡಿದ್ದೆ ನಿಮ್ಮ ಸಾಧನೆ ಅಲ್ಲವೇ ಸಿದ್ದರಾಮಯ್ಯನವರೇ? ಎಂದು ಬಿಜೆಪಿ ಆರೋಪಿಸಿದೆ.

ಸಿದ್ದರಾಮಯ್ಯ, ಸಮಾಜವಾದಿ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೇರಿದಿರಿ. ಅಧಿಕಾರಕ್ಕೇರಿದವರೇ, ಹ್ಯೂಬ್ಲೊಟ್ ವಾಚ್ ಕಟ್ಟಿಕೊಂಡಿರಿ, ಸೋಪ್ ಬಾಕ್ಸ್ ಮತ್ತು ರೂಂ ಫ್ರೆಶ್‍ನರ್ 1 ಲಕ್ಷಕ್ಕೂ ಅಧಿಕ ಖರ್ಚು, ಪೇಪರ್ ಕಪ್‍ಗಳಿಗೆ 1,87,950 ರೂ.ಖರ್ಚು. ರಾಜ್ಯದ ಜನತೆಯ ತಲೆಮೇಲೆ ಮಾತ್ರ ಸಾಲಭಾಗ್ಯ ಅಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News