ಸಾಲಗಾರರಿಗೆ ಹಬ್ಬದ ಉಡುಗೊರೆ: 2 ಕೋಟಿ ರೂ.ವರೆಗಿನ ಸಾಲದ ಚಕ್ರಬಡ್ಡಿ ಮನ್ನಾ

Update: 2020-10-24 17:14 GMT

ಹೊಸದಿಲ್ಲಿ,ಅ.24: ಕೋವಿಡ್-19, ಲಾಕ್‌ಡೌನ್‌ನಿಂದಾಗಿ ಕಂಗೆಟ್ಟಿರುವ ಸಾಲಗಾರರಿಗೆ ಕೇಂದ್ರ ಸರಕಾರ ದೀಪಾವಳಿ ಹಬ್ಬದ ಉಡುಗೊರೆ ನೀಡಿದ್ದು 2 ಕೋಟಿ ರೂ.ವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ಘೋಷಿಸಿದೆ.

 ಕೊರೋನ ಲಾಕ್‌ಡೌನ್ ವೇಳೆ ಸಾಲ ಮರುಪಾವತಿಗೆ ನೀಡಲಾಗಿದ್ದ ಆರು ತಿಂಗಳ ರಿಯಾಯ್ತಿ ಅವಧಿಯ (ಮೊರಾಟೋರಿಯಂ) ಕಂತುಗಳ ಮೇಲಿನ ಸಾಲದ ಚಕ್ರಬಡ್ಡಿಯನ್ನು ತಾನೇ ಭರಿಸುವುದಾಗಿಯೂ ಕೇಂದ್ರ ಸರಕಾರ ತಿಳಿಸಿದೆ.

ಕಳೆದ ಬುಧವಾರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ ಬಳಿಕ ಕೇಂದ್ರ ವಿತ್ತ ಸಚಿವಾಲಯವು ಈ ಬಗ್ಗೆ ಶುಕ್ರವಾರ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಈ ಯೋಜನೆಯ ಪ್ರಯೋಜನವು ಮೊರಾಟೋರಿಯಂನ ಸೌಲಭ್ಯವನ್ನು ಪಡೆದುಕೊಂಡಿರುವವರು ಅಥವಾ ಭಾಗಶಃ ಬಳಸಿಕೊಂಡಿರುವವರು ಹಾಗೂ ಬಳಸಿಕೊಳ್ಳದೆ ಇರುವವರಿಗೂ ದೊರೆಯಲಿದೆ.

 2020ರ ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಮೊರಾಟೋರಿಯಂ ಅವಧಿಯ ಸಾಲಗಳಿಗೆ ಈ ಯೋಜನೆ ಅನ್ವಯವಾಗಲಿದೆ.

6 ತಿಂಗಳ ಮೊರಾಟೋರಿಯಂ ಅವಧಿಯಲ್ಲಿನ ಸಾಲದ ಮೇಲಿನ ಚಕ್ರಬಡ್ಡಿ ಹಾಗೂ ಸರಳಬಡ್ಡಿಯ ನಡುವಿನ ವ್ಯತ್ಯಾಸದ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸಲಿದೆ. ಅತಿಸಣ್ಣ, ಕಿರು, ಮಧ್ಯಮ ಕೈಗಾರಿಕೆಗಳು, ಶೈಕ್ಷಣಿಕ ಸಾಲಗಳು, ಗ್ರಾಹಕ ಬಳಕೆ, ವೈಯಕ್ತಿಕ ಸಾಲ, ಅಟೊಮೊಬೈಲ್ ಸಾಲಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದೆ.

ಚಕ್ರ ಬಡ್ಡಿ ಮನ್ನಾ ಯೋಜನೆಯಿಂದಾಗಿ ಕೇಂದ್ರ ಸರಕಾರದ ಬೊಕ್ಕಸಕ್ಕೆ 6,500 ಕೋಟಿ ರೂ. ಹೊರೆ ಬೀಳುವ ನಿರೀಕ್ಷೆಯಿದೆ.

2020ರ ಫೆಬ್ರವರಿ 29ರಂದು 2 ಕೋಟಿ ರೂ.ವರೆಗೆ ಸಾಲವನ್ನು ಹೊಂದಿರುವ ಸಾಲಗಾರರಿಗೆ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆಂದು ಸರಕಾರದ ಹೇಳಿಕೆ ತಿಳಿಸಿದೆ.

  ಸುಪ್ರೀಂಕೋರ್ಟ್ ಆಗಸ್ಟ್ 14ರಂದು ನೀಡಿದ ಆದೇಶವೊಂದರಲ್ಲಿ, ಕೋವಿಡ್-19, ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಕ್ರಬಡ್ಡಿಯನ್ನು ಮನ್ನಾಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು ಹಾಗೂ ನವೆಂಬರ್ 2ರೊಳಗೆ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸೂಚಿಸಿತ್ತು. ಮೊರಾಟೋರಿಯಂ ಅವಧಿಯಲ್ಲಿನ ಚಕ್ರಬಡ್ಡಿ ಹಾಗೂ ಸರಳಬಡ್ಡಿಯ ನಡುವಿನ ವ್ಯತ್ಯಾಸದ ಮೊತ್ತವನ್ನು ಮಾತ್ರ ಕೇಂದ್ರ ಸರಕಾರ ಭರಿಸಲಿದೆ. ಆದರೆ ಸಾಲಗಾರರು ತಮ್ಮ ಇಎಂಐ ಅವಧಿ ಸಾಲದ ಬಡ್ಡಿಯನ್ನು ಪಾವತಿಸಲೇಬೇಕಾಗುತ್ತದೆ.ಅವರಿಗೆ ಬಡ್ಡಿಯ ಮೇಲಿನ ಬಡ್ಡಿಯ ಹೊರೆ ಮಾತ್ರವೇ ಬೀಳುವುದಿಲ್ಲವೆಂದು ಮಾರ್ಗಸೂಚಿ ತಿಳಿಸಿದೆ.

 ವಿತ್ತ ಸಚಿವಾಲಯದ ಬ್ಯಾಂಕಿಂಗ್ ಇಲಾಖೆಯು ಈ ಮಾರ್ಗಸೂಚಿಯನ್ನು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳು, ಅಖಿಲ ಭಾರತ ಮಟ್ಟದ ಹಣಕಾಸು ಇಲಾಖೆಗಳು, ಬ್ಯಾಂಕಿಂಗ್ ಕಂಪೆನಿಗಳು, ನಗರ ಸಹಕಾರಿ ಬ್ಯಾಂಕ್‌ಗಳು, ರಾಜ್ಯ ಸಹಕಾರಿ ಬ್ಯಾಂಕುಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳಿಗೆ ಕಳುಹಿಸಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News