ಶಾಲಾ ಆವರಣದ ಗುಂಡಿಯಲ್ಲಿ ಮುಳುಗಿ ಮೂವರು ಮಕ್ಕಳು ಮೃತ್ಯು

Update: 2020-10-24 16:45 GMT

ಬ್ಯಾಡಗಿ, ಅ.24: ಶಾಲಾ ಕಟ್ಟಡ ಕಾಮಗಾರಿಯ ಅಡಿಪಾಯಕ್ಕೆ ತೋಡಿದ್ದ ಗುಂಡಿಯಲ್ಲಿ ಮುಳುಗಿ ಮೂವರು ಮಕ್ಕಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶನಿವಾರ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಅಕ್ಮಲ್‌ (8) ಆಶ್ಫಕ್‌‌ (10) ಹಾಗೂ ಜಾಫರ್‌ (10) ಎಂದು ಗುರುತಿಸಲಾಗಿದೆ.

ಪಟ್ಟಣದ ಸಂತೆ ಮೈದಾನದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆಂದು ಅಡಿಪಾಯ ತೆಗೆಯಲಾಗಿತ್ತು. ಭಾರೀ ಮಳೆಯ ಕಾರಣದಿಂದ ಗುಂಡಿಯಲ್ಲಿ ನೀರು ತುಂಬಿದ್ದು, ಶನಿವಾರ ಮೂವರು ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ.

ಮೂವರು ಮಕ್ಕಳು ಆಟವಾಡಲು ಶಾಲಾ ಮೈದಾನಕ್ಕೆ ತೆರಳಿದ್ದರು. ಈ ವೇಳೆ ನೀರು ತುಂಬಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆ ಸಂಬಂಧ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನ ಕೊಠಡಿ ನಿರ್ಮಾಣಕ್ಕಾಗಿ ತೋಡಿದ್ದ ಗುಂಡಿಯ ನೀರಿನಲ್ಲಿ ಬಿದ್ದು ಮೂರು ಮಕ್ಕಳು ಮುಳಗಿ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ. ಹಾಗೂ ಈ ಘಟನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಮೃತ ಮಕ್ಕಳ ಪೋಷಕರಿಗೆ ತಲಾ 5 ಲಕ್ಷ ರೂ. ಗಳ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿ ದುರ್ಘಟನೆಗಳು ನಡೆಯದಂತೆ ಜಾಗೃತೆ ವಹಿಸಲು ತಿಳಿಸಿದ್ದೇನೆ

- ಬಸವರಾಜ ಬೊಮ್ಮಾಯಿ, ಗೃಹ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News