ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪರ ಬೆದರಿಕೆಗಳಿಗೆ ಪಕ್ಷ ಹೆದರಲ್ಲ: ಬಿಜೆಪಿ ವಕ್ತಾರೆ ಕವಿತಾ ಶೇಖರ್

Update: 2020-10-24 16:48 GMT

ಚಿಕ್ಕಮಗಳೂರು, ಅ.24: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದೇವೆಯೇ ಹೊರತು ಒತ್ತಾಯ ಪೂರ್ವಕವಾಗಿ ಕೇಳಿಲ್ಲ, ಬೆದರಿಕೆಯನ್ನೂ ಹಾಕಿಲ್ಲ, ಕಿರುಕುಳವನ್ನೂ ನೀಡಿಲ್ಲ, ಆದರೆ ಅವರ ಪರ ವಕಾಲತ್ತು ವಹಿಸಿರುವ ಕೆಲವರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಪಕ್ಷ ಮಣಿಯುವುದಿಲ್ಲ ಎಂದು ಬಿಜೆಪಿ ವಕ್ತಾರೆ ಹಾಗೂ ನಗರಸಭೆ ಮಾಜಿ ಸದಸ್ಯೆ ಕವಿತಾ ಶೇಖರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ ಅವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಮುಂಡಾಳ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾನವ್ ಹೇಳಿಕೆ ನೀಡಿದ್ದು, ಇದನ್ನು ಗಮನಿಸಿದರೆ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಪರೋಕ್ಷವಾಗಿ ಪಕ್ಷಕ್ಕೆ ಬೆದರಿಕೆ ಹಾಕಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆಲ್ಲ ಪಕ್ಷ ಹೆದರುವುದಿಲ್ಲ, ಕಲ್ಮುರಡಪ್ಪ ಅವರು ಪಕ್ಷದ ಕೋರ್ ಕಮಿಟಿಯಲ್ಲಿ ನಿರ್ಣಯಿಸಿದ ವಿಷಯವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದ್ದಾರೆಯೇ ಹೊರತು ಅವರ ವೈಯಕ್ತಿಕ ಹಿತಾಸಕ್ತಿಯಲ್ಲ, ರಾಷ್ಟ್ರ, ರಾಜ್ಯ, ಬೂತ್‍ಮಟ್ಟದವರೆಗೂ ಪಕ್ಷದ ತೀರ್ಮಾನವೇ ಅಂತಿಮ. ಅದನ್ನು ಒಪ್ಪಲೇ ಬೇಕು ಎಂದರು.

ಸುಜಾತಾ ಕೃಷ್ಣಪ್ಪ ಅವರು ತಳ ಸಮುದಾಯಕ್ಕೆ ಸೇರಿದವರು ಎಂದು ಗುರುತಿಸಿ ಅವರಿಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹುದ್ದೆ ನೀಡಿಲ್ಲ, ಬಿಜೆಪಿ ಕಾರ್ಯಕರ್ತೆಯೆಂದು ಗುರುತಿಸಿ ಪಕ್ಷ ಟಿಕೆಟ್ ನೀಡಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿಸಲಾಗಿದೆ. ಪಕ್ಷದ ಅವರನ್ನು ಜಿಪಂ ಅಧ್ಯಕ್ಷೆಯನ್ನಾಗಿ ಮಾಡಿದೆ. ಇದನ್ನು ಅವರು ಅರಿತುಕೊಳ್ಳಬೇಕು ಎಂದರು.

ಪಕ್ಷದ ಕಾರ್ಯಕರ್ತ ಪಕ್ಷದ ಆದೇಶವನ್ನು ಉಲ್ಲಂಘಿಸಬಾರದು, ಉಲ್ಲಂಘಿಸಿದರೆ ಎಷ್ಟೇ ದೊಡ್ಡವರಾದರೂ ಪಕ್ಷ ಸಹಿಸುವುದಿಲ್ಲ, ಮುಂಡಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಜಾನವ್ ಅವರು ಸುಜಾತಾ ಕೃಷ್ಣಪ್ಪ ಅವರನ್ನು ತಾಲೂಕು ಪಂಚಾಯತ್ ಚುನಾವಣೆ ಅಥವಾ ಜಿಪಂ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಯನ್ನು ಶಿಫಾರಸು ಮಾಡಿಲ್ಲ. ಪಕ್ಷ ಸುಜಾತ ಕೃಷ್ಣಪ್ಪ ಅವರನ್ನು ಗುರುತಿಸಿ ತಾಲೂಕು ಪಂಚಾಯತ್, ಜಿಪಂ ಅಧ್ಯಕ್ಷರನ್ನಾಗಿ ಮಾಡಿತ್ತು. ಆಗ ಸುಜಾತಾ ಪರ ಎಲ್ಲೂ ಕಾಣಿಸಿಕೊಳ್ಳದ ಮುಂಡಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಜಾನವ್ ಈಗ ಎಲ್ಲಿಂದ, ಏಕೆ ಬಂದರೆಂದು ಅವರು ಪ್ರಶ್ನಿಸಿದರು.

ಇದೆಲ್ಲವನ್ನು ಮರೆತು ಸುಜಾತ ಕೃಷ್ಣಪ್ಪ ಅವರು ನಾಟಕ ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರು ಪಕ್ಷದ ಸಿಪಾಯಿ ಎಂದು ಹೇಳಿಕೊಳ್ಳುವ ಮೊದಲು ಪಕ್ಷದ ನಿರ್ದೇಶನವನ್ನು ಪಾಲಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಂತರ ಪಕ್ಷದ ವೇದಿಕೆಯಲ್ಲಿ ಈ ಸಂಬಂಧ ಚರ್ಚಿಸಲಿ. ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಟ್ಟು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಘನತೆ ಉಳಿಸಬೇಕೆಂದರು.

ಜಿಪಂ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇಖರ್ ಮಾತನಾಡಿ, ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರ ಏಕಪಕ್ಷೀಯ ನಿರ್ಧಾರದಿಂದ ಬೇಸತ್ತು ಜಿಲ್ಲಾ ಪಂಚಾಯತ್ ಸರ್ವ ಸದಸ್ಯರ ಸಭೆಯನ್ನು ಎಲ್ಲಾ ಸದಸ್ಯರು ಬಹಿಷ್ಕರಿಸಿದ್ದಾರೆ. ಜಿಲ್ಲಾ ಪಂಚಾಯತ್ ಮುಂದಿನ ಯೋಜನೆಗಳಿಗೆ ಘಟನೋತ್ತರ ಮಂಜುರಾತಿಯನ್ನು ಪಡೆದುಕೊಳ್ಳಲಾಗಿದೆ. ಪಕ್ಷದ ಕೋರ್ ಕಮಿಟಿ ತೀರ್ಮಾನದಂತೆ ಅಧ್ಯಕ್ಷರ ರಾಜೀನಾಮೆ ಕೇಳಿದ್ದೇವೆ. ಅವರಿಗೆ ಯಾವ ಬೆದರಿಕೆಯನ್ನೂ ಹಾಕಿಲ್ಲ ಎಂದರು.

ಜಿಲ್ಲೆಯಲ್ಲಿ ಅನೇಕ ಜ್ವಾಲಂತ ಸಮಸ್ಯೆಗಳಿವೆ. ಸಾರ್ವಜನಿಕ ಸಮಸ್ಯೆ ಇತ್ಯರ್ಥಪಡಿಸುವುದು ಮುಖ್ಯವೋ? ಪಕ್ಷ ಮುಖ್ಯವೋ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡರು ಪಕ್ಷವೇ ಮುಖ್ಯವೆಂದು ಹೇಳುವ ಮೂಲಕ ಸುದ್ದಿಗೋಷ್ಠಿಯಲ್ಲಿ ಮುಜುಗರಕ್ಕೆ ಒಳಗಾದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇಖರ್, ಸದಸ್ಯೆ ಜಸಿಂತಾ ಅನಿಲ್‍ಕುಮಾರ್, ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್, ಸಚಿನ್, ವರಸಿದ್ದಿವೇಣುಗೋಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News