ಕೊರೋನ ಕರಿನೆರಳು: ನ.11ರಿಂದ 13ರವರಗೆ ಸರಳ ಕೃಷಿಮೇಳ ಆಚರಣೆ

Update: 2020-10-24 17:03 GMT

ಬೆಂಗಳೂರು, ಅ.24: ಕೊರೋನ ಕರಿನೆರಳು ಎಲ್ಲ ಕ್ಷೇತ್ರದ ಮೇಲೂ ವ್ಯಾಪಿಸಿರುವಂತೆ ಈ ಬಾರಿಯ ಕೃಷಿ ಮೇಳದ ಮೇಲೂ ಪರಿಣಾಮ ಬೀರಿದೆ. ಕೊರೋನ ಭೀತಿಯ ಹಿನ್ನಲೆ ಕೃಷಿ ವಿಶ್ವವಿದ್ಯಾಲಯವು ಕೃಷಿ ಮೇಳ 2020 ಅನ್ನು ನ.11 ರಿಂದ 13 ರವರೆಗೆ ಮೂರು ದಿನಗಳ ಕಾಲ ಸರಳವಾಗಿ ಆಚರಿಸಲು ತೀರ್ಮಾನಿಸಿದೆ.

ಈ ಕುರಿತು ಕೃಷಿ ವಿವಿ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಪತ್ರಿಕಾ ಪ್ರಕಟನೆ ನೀಡಿದ್ದು, ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನೂತನ ಕೃಷಿ ತಂತ್ರಜ್ಞಾನಗಳಿಗೆ ಒತ್ತು ನೀಡಿ ನ.6 ರಿಂದ 8ರವರೆಗೆ ಕೃಷಿ ಮೇಳವನ್ನು ನಡೆಸಲು ತೀರ್ಮಾನಿಸಲಾಗಿತ್ತು.

ಆದರೆ ಕೊರೋನ ಹಾಗೂ ಪ್ರವಾಹದಿಂದ ಕಂಗೆಟ್ಟಿರುವ ರೈತರಿಗೆ ಕೃಷಿ ಮೇಳಕ್ಕೆ ಬರಲು ಸಾಧ್ಯವಾಗುವುದಿಲ್ಲ. ಭೀಕರ ಮಳೆ, ಪ್ರವಾಹದಿಂದ ನಲುಗಿರುವ ರೈತರಿಗೆ ಕೃಷಿ ಮೇಳದ ಮಾಹಿತಿ ದೊರೆಯಬೇಕಿದೆ. ಈ ಹಿನ್ನೆಲೆ ಒಂದು ವಾರಗಳ ಕಾಲ ಮುಂದೂಡಿ ನ.11 ರಿಂದ ಆಯೋಜಿಸಲಾಗುತ್ತದೆ. ಕೊರೋನ ಹಿನ್ನೆಲೆ ಆನ್‍ಲೈನ್ ಮೂಲಕ ಕೃಷಿ ಮೇಳವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೃಷಿ ಮೇಳಕ್ಕೆ ಆಗಮಿಸಲು ನಿಗದಿತ ಸಂಖ್ಯೆಯ ರೈತರು ಮತ್ತು ಸಾರ್ವಜನಿಕರಿಗೆ ಅವಕಾಶವಿದೆ. ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ಕೃಷಿಕರು ಮತ್ತು ಸಾರ್ವಜನಿಕರು ಕೃಷಿ ಮೇಳವನ್ನು ವೀಕ್ಷಿಸಲು ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News