ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯ

Update: 2020-10-24 17:05 GMT

ಬೆಂಗಳೂರು, ಅ.24: ಕೋವಿಡ್ ಲಾಕ್‍ಡೌನ್‍ನಿಂದಾಗಿ ಸಮಸ್ಯೆಗೆ ಸಿಲುಕಿರುವ ಖಾಸಗಿ ಶಾಲೆಗಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷÀಕೇತರ ಸಿಬ್ಬಂದಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಕೋವಿಡ್ ಪರಿಣಾಮವಾಗಿ ಖಾಸಗಿ ಶಾಲೆಗಳು ಒಂದೊಂದಾಗಿ ಮುಚ್ಚುವ ಹಂತಕ್ಕೆ ಬರುತ್ತಿವೆ. ಹಾಗೂ ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕೇತರರು ಉದ್ಯೋಗವಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸರಕಾರಕ್ಕೆ ಹಲವು ಸಲ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಸೆ.5 ಮಕ್ಕಳ ದಾಖಲಾತಿಗಳಿಗೆ ಕಡೆಯ ದಿನವೆಂದು ನಿಗದಿ ಪಡಿಸಿ ಆದೇಶಿಸಿದ್ದರೂ ಪೋಷಕರು ತಮ್ಮ ಮಕ್ಕಳನ್ನು ದಾಖಲಾತಿಗೆ ಮುಂದಾಗುತ್ತಿಲ್ಲ. ಹೀಗಾಗಿ ಸಣ್ಣ ಪ್ರಮಾಣದ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈಗ ಖಾಸಗಿ ಶಾಲೆಗಳನ್ನು ಉಳಿಸಬೇಕಾಗಿರುವ ಹೊಣೆ ಸರಕಾರದ ಮೇಲಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಆರ್‍ಟಿಇ ಶುಲ್ಕದ ಶೇ.25ರಷ್ಟು ಮರುಪಾವತಿ ಬಿಡುಗಡೆ ಮಾಡುವಂತೆ ಹಲವು ಸಲ ಮನವಿ ಮಾಡುತ್ತಾ ಬಂದಿದ್ದೇವೆ. ಕೇವಲ ಅಲ್ಪಹಣ ಬಿಡುಗಡೆ ಮಾಡಿ, ಆ ಹಣ ಶಿಕ್ಷಕರ ಸಂಬಳಕ್ಕೆ ಆದ್ಯತೆ ಆಗಬೇಕೆಂದು ಆದೇಶಿಸಲಾಗಿದೆ. ಇದರಿಂದ ಖಾಸಗಿ ಶಾಲಾ ಆಡಳಿತ ಮಂಡಳಿಗೆ ಸರಕಾರದಿಂದ ಇಲ್ಲಿಯವರೆಗೆ ಯಾವುದೇ ನೆರವು ಸಿಗುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯಿಂದಾಗಿ, ಆ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಶಾಲೆಗಳನ್ನು ತೊರೆಯುತ್ತಿದ್ದಾರೆ. ರಾಜ್ಯಾದ್ಯಂತ ಲಕ್ಷಾಂತರ ಶಿಕ್ಷಕರು ದಿನಕಳೆದಂತೆ ನಿರುದ್ಯೋಗಿಗಳಾಗುತ್ತಿದ್ದಾರೆ. ಹೀಗಾಗಿ ರಾಜ್ಯ ಸರಕಾರ ವಿಶೇಷ ಆದ್ಯತೆ ಮೇರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಮುಂದಿನ 15 ದಿನದೊಳಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸದಿದ್ದರೆ ನವೆಂಬರ್ ಎರಡನೇ ವಾರದಲ್ಲಿ ತುಮಕೂರಿನಿಂದ ಬೆಂಗಳೂರಿನವರೆಗೆ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಲಕ್ಷಾಂತರ ಶಿಕ್ಷಕರು ಈ ಜಾಥಾದಲ್ಲಿ ಜೊತೆಗೂಡಲಿದ್ದಾರೆ.

-ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News