ಬೆಳಗಾವಿಯಲ್ಲಿ ಶೇ.94 ಕೋವಿಡ್ ಸೋಂಕಿತರು ಗುಣಮುಖ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

Update: 2020-10-24 17:15 GMT

ಬೆಳಗಾವಿ, ಅ.24: ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಪೈಕಿ ಶೇ.94ರಷ್ಟು ಜನರು ಗುಣಮುಖರಾಗಿದ್ದು, ಕಳೆದ ಹದಿನೈದು ದಿನಗಳಲ್ಲಿ ಮರಣ ಪ್ರಮಾಣ ಶೇ.0.4ಕ್ಕೆ ಇಳಿಮುಖಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ 24,039 ಜನರಿಗೆ ಕೋವಿಡ್-19 ಸೋಂಕು ತಗುಲಿದೆ. ಒಟ್ಟು ಸೋಂಕಿತರ ಪೈಕಿ 23,020 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ 961 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ..

ಜಿಲ್ಲೆಯಲ್ಲಿ ಒಟ್ಟು 328 ಜನರು ಸೋಂಕಿನಿಂದ ಮರಣ ಹೊಂದಿದ್ದು, ಮರಣ ಪ್ರಮಾಣವು ಕಳೆದ ಹದಿನೈದು ದಿನಗಳಲ್ಲಿ ಶೇ.0.4 ಹಾಗೂ ಇತ್ತೀಚಿನ ಏಳು ದಿನಗಳಲ್ಲಿ ಶೇ.0.5 ರಷ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸೋಂಕಿತರ ಪ್ರಮಾಣ ಶೇ.5.4: ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ 2300 ಜನರನ್ನು ಕೋವಿಡ್-19 ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕಿತರ ಪ್ರಮಾಣ ಶೇ.5.4 ರಷ್ಟಿದೆ. ಆದರೆ ಕಳೆದ ಮೂರು ದಿನಗಳಲ್ಲಿ ಇದು ಶೇ.3.7 ಗೆ ಇಳಿಕೆಯಾಗಿದೆ ಎಂದು ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕೆಲವು ಕೋವಿಡ್ ಆಸ್ಪತ್ರೆಗಳು ಕೂಡ ಸ್ಥಗಿತಗೊಂಡಿದ್ದು, ಆಕ್ಸಿಜನ್ ಬೇಡಿಕೆಯು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಕೋವಿಡ್-19 ಪ್ರಮಾಣ ಇಳಿಮುಖವಾಗುತ್ತಿದ್ದರೂ ಸಾರ್ವಜನಿಕರು ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜತೆಗೆ ನಿಯಮಿತವಾಗಿ ಸ್ಯಾನಿಟೈಸರ್ ಬಳಕೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News