ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ: ಸಿಎಂ ಯಡಿಯೂರಪ್ಪ

Update: 2020-10-24 17:24 GMT

ತುಮಕೂರು: ಮಲ್ಲಿಕಾರ್ಜುನಯ್ಯ ಅವರು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರ ಯಾವುದೇ ಕಾರಣಕ್ಕೂ ಬಿಜೆಪಿ ಕೈ ತಪ್ಪದಂತೆ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ನಗರದ ಸಿದ್ಧಿವಿನಾಯಕ ಸಭಾಂಗಣದಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ಕರೆ ತಂದು ಮೊದಲ ಪ್ರಾಶಸ್ತ್ಯ ದ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸಬ್ ಕಾ ಸಾಥ್ ಸಬ್ ವಿಕಾಸ್ ಘೋಷಣೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಮೋದಿ ಅವರೇ ಮತ್ತೆ ಲೋಕಸಭಾ ಚುನಾವಣೆ ಎದುರಿಸಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರನೇ ವೇತನ ಆಯೋಗ, ಯುಜಿಸಿ ವೇತನ ಶ್ರೇಣಿ ಅಂತರ ಕಡಿಮೆ ಮಾಡಿದ್ದೇನೆ. ಕೊರೋನ ಸಂಕಷ್ಟದಲ್ಲಿಯೂ ಶಿಕ್ಷಕರ ವೇತನವನ್ನು ಕಡಿತಗೊಳಿಸದೆ ನೀಡಿದ್ದ ಸರ್ಕಾರ ನಮ್ಮದು ಮಾತ್ರ. ಅನೇಕ ಅಭಿವೃದ್ಧಿಯನ್ನು ಕೊರೋನ ಸಂಕಷ್ಟದಲ್ಲಿಯೂ ನಿರ್ವಹಿಸಿದ್ದೇನೆ ಎಂದು ಹೇಳಿದರು.

ವಿಪಕ್ಷಗಳು ಏನೇ ಹೇಳಿದರೂ ಲೋಕಸಭೆಯಲ್ಲಿ 26 ಸ್ಥಾನ ಗೆದ್ದಿದ್ದೇವೆ. ವಿಚಾರವಂತರು, ಪ್ರಜ್ಞಾವಂತರು ಇಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದೊಂದಿಗೆ ಇದ್ದಾರೆ. ಚುನಾವಣೆ ಹತ್ತಿರದಲ್ಲಿದೆ. ಬಿಜೆಪಿ ಕಾರ್ಯಕರ್ತರೇ ಅಭ್ಯರ್ಥಿಗಳು ಎನ್ನುವಂತೆ ಕಾರ್ಯನಿರ್ವಹಿಸಬೇಕಿದೆ. ಶಿರಾ, ಆರ್.ಆರ್.ನಗರ ಹಾಗೂ ವಿಧಾನ ಪರಿಷತ್ ಸ್ಥಾನಗಳನ್ನು ಗೆಲ್ಲುತ್ತೇವೆ. ಗೆಲ್ಲುವ ಮೂಲಕ ತಿರುಗೇಟು ನೀಡಬೇಕಿದೆ ಎಂದು ಹೇಳಿದರು.

ಮುಂದಿನ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಮುಂದಿನ ಬಾರಿ ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದ ಅವರು, ಶಿಕ್ಷಕ ಹಾಗೂ ಪದವೀಧರರ ಸಮಸ್ಯೆ ಬಗೆಹರಿಸಲು ಸಿದ್ಧ ಇರುವುದಾಗಿ ಭರವಸೆ ನೀಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ವರ್ಷದ ಹಿಂದೆ ಯಡಿಯೂರಪ್ಪ ಅವರು ಒಬ್ಬರೇ ಮುಖ್ಯಮಂತ್ರಿಯಾಗಿ ಭೀಕರ ಬರ ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನು ಕಂಡಿದ್ದೇವೆ. ಇಂದು ಬೆಂಗಳೂರಿನಲ್ಲಿ ಮಳೆಯಿಂದ ಬಾಧಿತರಾದವರನ್ನು ಭೇಟಿ ಮಾಡಿ, ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ. ಇದು ಅವರ ಬದ್ಧತೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರಿಗೆ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿರಬೇಕು ಎನ್ನುವ ಮುಂದಾಲೋಚನೆಯಿಂದ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಲಿದ್ದು, ಮುಂದಿನ ವರ್ಷದಿಂದ ಅನುಷ್ಠಾನಗೊಳ್ಳಲಿರುವ ಶಿಕ್ಷಣ ನೀತಿಗೆ ಪೂರಕವಾಗಿ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಅವರು ನಾಲ್ಕೂವರೆ ವರ್ಷ ಶ್ರಮವಹಿಸಿ ಸಿದ್ಧಪಡಿಸಿರುವ ನೂತನ ಶಿಕ್ಷಣ ನೀತಿ ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿದಾನಂದಗೌಡ ಅವರಂತವರು ವಿಧಾನಸೌಧದಲ್ಲಿರುವುದು ಅವಶ್ಯಕ. ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆ, ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತದಾರರು ಯಾವಾಗಲೂ ಬೆಂಬಲಿಸಿದ್ದಾರೆ. ಮೋದಿ ಅವರು ಅಧಿಕಾರದಲ್ಲಿ ನೀಡಿರುವ ಕೊಡುಗೆ, ಬಿಎಸ್ ವೈ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಅವರು ಮಾತನಾಡಿ, ಚುನಾವಣೆಯಲ್ಲಿ ನಾನು ನೆಪ ಮಾತ್ರ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರ್ಶೀವಾದದಿಂದ ಸ್ಪರ್ಧಿಸಿದ್ದು, ಕಳೆದ ಎರಡು ವರ್ಷದಿಂದ ಮತದಾರರ ನೋಂದಣಿ ಮಾಡಿಸಿದ್ದು, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವರಾದ ಸೊಗಡು ಶಿವಣ್ಣ, ಸುನೀಲ್ ವಲ್ಯಾಉಪುರೆ, ಶಾಸಕರಾದ ನಾಗೇಶ್, ಜ್ಯೋತಿ ಗಣೇಶ್, ಮಸಾಲೆ ಜಯರಾಂ, ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಹುಲಿನಾಯ್ಕರ್, ರೈತ ಮೋರ್ಚಾದ ಶಿವಪ್ರಸಾದ್, ನಂದೀಶ್, ಜಿ.ಪಂ.ಉಪಾಧ್ಯಕ್ಷೆ ಶಾರಾದ ನರಸಿಂಹಮೂರ್ತಿ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News