ಬೋಧನೆ ಸಂದರ್ಭ ವೇಮುಲ, ದಾಭೋಲ್ಕರ್, ಕಲ್ಬುರ್ಗಿ ಹೆಸರು ಉಲ್ಲೇಖಿಸಿದ ಉಪನ್ಯಾಸಕಿಗೆ ಎಬಿವಿಪಿ ಎಚ್ಚರಿಕೆ

Update: 2020-10-24 17:41 GMT

ಹೊಸದಿಲ್ಲಿ, ಅ.24: ಗೋವಾದ ಮಹಿಳಾ ಪ್ರೊಫೆಸರ್ ಒಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ರೋಹಿತ್ ವೇಮುಲಾ, ದಾಭೋಲ್ಕರ್, ಎಂಎಂ ಕಲ್ಬುರ್ಗಿಯ ಹೆಸರನ್ನು ಉಲ್ಲೇಖಿಸುವ ಮೂಲಕ ಧಾರ್ಮಿಕ ವಿರೋಧಿ ಉಪನ್ಯಾಸ ನೀಡಿದ್ದಾರೆ ಎಂದು ಆರೋಪಿಸಿರುವ ಎಬಿವಿಪಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಗೋವಾದ ವಿಎಂ ಸಲಗಾವ್ಕರ್ ಕಾನೂನು ಕಾಲೇಜಿನಲ್ಲಿ ರಾಜನೀತಿ ವಿಜ್ಞಾನ(ಪೊಲಿಟಿಕಲ್ ಸೈಯನ್ಸ್)ದ ಉಪನ್ಯಾಸಕಿ ಶಿಲ್ಪಾ ಸಿಂಗ್ ಪಾಠ ಮಾಡುವ ಸಂದರ್ಭ ‘ನಿರ್ದಿಷ್ಟ ಸಮುದಾಯ, ಧರ್ಮ ಮತ್ತು ಪಂಗಡದ ಜನರ ಬಗ್ಗೆ ಸಾಮಾಜಿಕವಾಗಿ ದ್ವೇಷಿಸುವ ಭಾವನೆಗಳನ್ನು ಉತ್ತೇಜಿಸುತ್ತಿದ್ದು’ ಅವರ ವಿರುದ್ಧ 24 ಗಂಟೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಲ್ಲದೆ ಪೊಲೀಸರಲ್ಲಿ ದೂರು ನೀಡುತ್ತೇವೆ ಎಂದು ಎಬಿವಿಪಿ ಕೊಂಕಣ್ ಘಟಕದ ಕಾರ್ಯದರ್ಶಿ ಪ್ರಭಾ ನಾಕ್ ಕಾಲೇಜಿನ ಆಡಳಿತ ವರ್ಗಕ್ಕೆ ಪತ್ರ ಬರೆದಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್ ’ ವರದಿ ಮಾಡಿದೆ.

ಪಾಠ ಮಾಡುವಾಗ ನಾನು ವೇಮುಲ, ಎಂಎಂ ಕಲ್ಬುರ್ಗಿ ಮತ್ತು ದಾಭೋಲ್ಕರ್ ಹೆಸರು ಉಲ್ಲೇಖಿಸಿರುವ ಬಗ್ಗೆ ಎಬಿವಿಪಿ ಸದಸ್ಯರು ತನ್ನಲ್ಲಿ ಆಕ್ಷೇಪ ಎತ್ತಿದ್ದಾರೆ. ದನದ ಮಾಂಸದ ಬಗ್ಗೆ ಕೇಳಿದ ವಿವರಣೆಯೊಂದಕ್ಕೆ ತಾನು ಶೇರ್ ಮಾಡಿಕೊಂಡಿದ್ದ ಪ್ರತಿಕ್ರಿಯೆಯ ಬಗ್ಗೆಯೂ ಅವರು ಅಸಮಾಧಾನಗೊಂಡಿರಬಹುದು ಎಂದು ಶಿಲ್ಪಾ ಸಿಂಗ್ ಹೇಳಿದ್ದಾರೆ. ಈ ಮಧ್ಯೆ ಕಾಲೇಜಿನ ಅಧ್ಯಾಪಕ ವೃಂದದವರು ಶಿಲ್ಪಾ ಸಿಂಗ್ ನೆರವಿಗೆ ನಿಂತಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಕಾಲೇಜು ಆಡಳಿತ ಮಂಡಳಿ ಸಮಿತಿಯೊಂದನ್ನು ರಚಿಸಿದೆ.

    ಪ್ರೊಫೆಸರ್ ಅವರ ಉಪನ್ಯಾಸದಲ್ಲಿ ಯಾವ ಅಂಶ ‘ಧಾರ್ಮಿಕ ವಿರೋಧಿ’ಯಾಗಿದೆ ಎಂಬ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ. ಇಂತಹ ದೂರಿಗೆ ನಾವು ಮಹತ್ವ ನೀಡುವುದಿಲ್ಲ ಎಂದು ಸಮಿತಿಯ ಸದಸ್ಯ ಎಂಆರ್‌ಕೆ ಪ್ರಸಾದ್ ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News