ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಸಂಬಂಧಿಯಿಂದ 18.67 ಲಕ್ಷ ವಶ

Update: 2020-10-27 04:15 GMT

ತೆಲಂಗಾಣ, ಅ.27: ರಾಜ್ಯ ವಿಧಾನಸಭೆಯ ದುಬ್ಬಕ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸಂಬಂಧಿ ಎಸ್.ಅಂಜನ್ ರಾವ್ ಎಂಬುವವರಿಂದ ಅಧಿಕಾರಿಗಳು ಸೋಮವಾರ 18.67 ಲಕ್ಷ ರೂ. ಅಕ್ರಮ ಹಣ ವಶಪಡಿಸಿಕೊಂಡಿದ್ದಾರೆ. ಇದರಿಂದ ಸಿದ್ದಿಪೇಟೆಯ ಲೆಕ್ಚರರ್ಸ್‌ ಕಾಲನಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಈ ಪ್ರಕರಣ ಭಾರಿ ರಾಜಕೀಯ ಪ್ರಹಸನಕ್ಕೆ ಕಾರಣವಾಗಿದೆ.

ನವೆಂಬರ್ 3ರಂದು ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಭಾರಿ ಮೊತ್ತದ ಹಣ ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಹಣ ವಶಪಡಿಸಿಕೊಂಡು ಇನ್ನೇನು ಸ್ಥಳದಿಂದ ಹೊರಡಬೇಕು ಎನ್ನುವಷ್ಟರಲ್ಲಿ ಬಿಜೆಪಿ ಅಭ್ಯರ್ಥಿ ರಘುನಂದನ ರಾವ್ ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದರು. ಆಗ ಬಿಜೆಪಿ ಮುಖಂಡ, ಆತನ ಬೆಂಬಲಿಗರು ಹಾಗೂ ಪೊಲೀಸ್ ಸಿಬ್ಬಂದಿಯ ನಡುವೆ ವಾಗ್ವಾದ ಆರಂಭವಾಯಿತು.

ಈ ಮಧ್ಯೆ ವಶಪಡಿಸಿಕೊಂಡ ಹಣ ಹಿಡಿದುಕೊಂಡಿದ್ದ ಪೊಲೀಸ್‌ ಪೇದೆಯಿಂದ ಬಿಜೆಪಿ ಬೆಂಬಲಿಗರು ಹಣ ಇದ್ದ ಚೀಲ ಕಿತ್ತುಕೊಂಡರು. ಬಿಜೆಪಿ ಅಭ್ಯರ್ಥಿ ಹಣ ಹಂಚುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಲು ಈ ಪ್ರಕರಣ ಹೆಣೆಯಲಾಗಿದೆ ಎಂದು ಬೆಂಬಲಿಗರು ದೂರಿದರು. ರಘುನಂದನ ರಾವ್ ಅವರ ಬೆಂಬಲಕ್ಕಾಗಿ ಕರೀಂ ನಗರದಿಂದ ಸಿದ್ದಿಪೇಟೆಗೆ ಆಗಮಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದರು. ಈ ನಡುವೆ ಬಿಜೆಪಿ ಮುಖಂಡರನ್ನು ಪೊಲೀಸರು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕೃಷ್ಣನ್ ರೆಡ್ಡಿ ಸೋಮವಾರ ರಾತ್ರಿ ಸಿದ್ದಿಪೇಟೆಗೆ ಧಾವಿಸಿದ್ದಾರೆ. ಅಮಾನುಷವಾಗಿ ಹಲ್ಲೆ ನಡೆಯುತ್ತಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಮತ್ತು ಅಗೌರವ ಎಂದು ಅವರು ಟ್ವೀಟ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘಟನೆ ಬಗ್ಗೆ ರಾಜ್ಯದ ಮುಖಂಡರಲ್ಲಿ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ.

ದುಬ್ಬಕ ಉಪಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಹಣ ಬಳಕೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಸಿದ್ದಿಪೇಟೆ ಪುರಸಭೆ ಅಧ್ಯಕ್ಷ ರಾಜನರಸು, ಮವ ರಘುನಂದನ ರಾವ್, ಎಸ್.ರಾಮಗೋಪಾಲ ರಾವ್ ಮತ್ತು ಎಸ್.ಅಂಜನರಾವ್ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತ ಜೊಯೆಲ್ ಡೇವಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News