ಆಲ್ದೂರು ಠಾಣೆಯೆದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ, ಠಾಣೆಗೆ ಮುತ್ತಿಗೆ

Update: 2020-10-27 07:30 GMT

ಚಿಕ್ಕಮಗಳೂರು, ಅ.27: ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಮಾಯಕ ದಲಿತ ಯುವಕರನ್ನು ಬಂಧಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಆಲ್ದೂರು ಪೊಲೀಸ್ ಠಾಣೆ ಎದುರು ವಿವಿಧ ದಲಿತ ಸಂಘಟನಗಳು ಮಂಗಳವಾರ ಪ್ರತಿಭಟನೆ ನಡೆಸಿದವು.

ತಾಲೂಕಿನ ಹಲಸುಮನೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗಂಧದ ಮರಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದ ಮೂವರು ದಲಿತ ಯುವಕರನ್ನು ಆಲ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮಾಯಕರಾಗಿರುವ ಈ ಮೂವರನ್ನು ಪ್ರಭಾವಿಗಳ ಕುಮ್ಮಕ್ಕಿನ ಮೇರೆಗೆ ಬಂಧಿಸಿದಲ್ಲದೇ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಅಲ್ಲದೆ ಬಂಧನಕ್ಕೊಳಗಾದವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಮೂರು ದಿನಗಳ ಕಾಲ ಠಾಣೆಯಲ್ಲೇ ಇರಿಸಿ ಆರೋಪವನ್ನು ಒಪ್ಪಿಕೊಳ್ಳಲು ಬಲವಂತಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪೊಲೀಸ್ ಠಾಣೆಯ ಎದುರು ಜಮಾಯಿಸಿದ ವಿವಿಧ ದಲಿತಪರ ಸಂಘಟನೆಗಳು ಆಲ್ದೂರು ಎಸ್ಸೈ ಶಂಭುಲಿಂಗಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಮಾಯಕ ದಲಿತ ಯುವಕರ ಮೇಲೆ ಗೂಂಡಾ ವರ್ತನೆ ಮಾಡಿರುವ ಎಸ್ಸೈಯನ್ನು ಕೂಡಲೇ ಅಮಾನತು ಮಾಡಬೇಕೆಂದು ಪ್ರತಿಭಟನಾಕಾರರು  ಆಗ್ರಹಿಸಿದರು. 

ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು.

ದಲಿತ ಸಂಘಟನೆಗಳ ಪ್ರತಿಭಟನೆ ಮುಂದುವರಿದಿದ್ದು, ಅಮಾಯಕರನ್ನು ಬಿಡುಗಡೆ ಮಾಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಚಿಕ್ಕಮಗಳೂರು ವೃತ್ತದ ಡಿವೈಎಸ್ಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬಿಗಿ ಪೊಲೀಸ್ ಭದ್ರತೆ  ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News