ದೇಶದಲ್ಲಿ 80 ಲಕ್ಷದ ಸನಿಹ ಕೋವಿಡ್-19 ಪ್ರಕರಣ

Update: 2020-10-28 04:18 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 80 ಲಕ್ಷದ ಗಡಿ ದಾಟಲು ಕೆಲವು ಸಾವಿರ ಪ್ರಕರಣ ಮಾತ್ರ ಬಾಕಿ ಇದೆ. ಆದರೆ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಾಧಾನಕರ ಅಂಶ. ಗುರುವಾರ ದೇಶದಲ್ಲಿ 42,704 ಪ್ರಕರಣಗಳು ವರದಿಯಾಗಿದ್ದು, ಜುಲೈ 21ರಂದು ದಾಖಲಾದ 38,444 ಪ್ರಕರಣಗಳ ಬಳಿಕ ಇದು ಎರಡನೇ ಕನಿಷ್ಠ ಸಂಖ್ಯೆಯಾಗಿದೆ.

ಒಂದು ದಿನ ಮೊದಲು ಅಂದರೆ ಸೋಮವಾರ ದೇಶದಲ್ಲಿ 101 ದಿನಗಳಲ್ಲೇ ಕನಿಷ್ಠ ಅಂದರೆ 36,604 ಪ್ರಕರಣಗಳು ದಾಖಲಾಗಿದ್ದವು.

ಹಿಂದಿನ ದಿನಕ್ಕೆ ಹೋಲಿಸಿದರೆ ಮಂಗಳವಾರ ದಾಖಲಾದ ಪ್ರಕರಣಗಳ ಸಂಖ್ಯೆ 6 ಸಾವಿರದಷ್ಟು ಅಧಿಕ. ಆದರೆ ಕಳೆದ ಮೂರು ತಿಂಗಳಲ್ಲೇ ಮೊದಲ ಬಾರಿಗೆ ಸೋಮವಾರಗಳನ್ನು ಹೊರತುಪಡಿಸಿದರೆ ದಾಖಲಾದ ಕನಿಷ್ಠ ಸಂಖ್ಯೆ ಇದಾಗಿದೆ. ರವಿವಾರ ಪರೀಕ್ಷೆ ಕಡಿಮೆ ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ.

ಮಂಗಳವಾರ ದೇಶದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 79,89,356ಕ್ಕೇರಿದೆ. ಕಳೆದ 10 ಲಕ್ಷ ಪ್ರಕರಣಗಳು 18 ದಿನಗಳಲ್ಲಿ ಸೇರ್ಪಡೆಯಾಗಿವೆ. ಇದಕ್ಕೂ ಮುನ್ನ 60 ಲಕ್ಷದಿಂದ 70 ಲಕ್ಷ ತಲುಪಲು ಕೇವಲ 13 ದಿನಗಳಾಗಿದ್ದವು. ಇದರಿಂದಾಗಿ ಸೋಂಕು ಹರಡುವಿಕೆ ನಿಧಾನವಾಗುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ.

ಸತತ ಎರಡು ದಿನಗಳ ಕಾಲ 500ಕ್ಕಿಂತ ಕಡಿಮೆ ಇದ್ದ ಕೊರೋನ ಸಾವಿನ ಸಂಖ್ಯೆ ಮಂಗಳವಾರ 509ಕ್ಕೇರಿದೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,20,005ಕ್ಕೇರಿದೆ. ರವಿವಾರ (489) ಮತ್ತು ಸೋಮವಾರ (490) ಹೊರತುಪಡಿಸಿದರೆ ಜುಲೈ 12ರಂದು ದಾಖಲಾದ 492 ಸಾವಿನ ಪ್ರಕರಣಗಳ ಬಳಿಕ ಇದು ಕನಿಷ್ಠ ಸಂಖ್ಯೆಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,14,197 ಆಗಿದೆ.

ಸೋಮವಾರ 4000ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾದ ಮಹಾರಾಷ್ಟ್ರದಲ್ಲಿ ಮತ್ತೆ ಸೋಂಕಿನ ಸಂಖ್ಯೆ 5363ಕ್ಕೇರಿದೆ. 100ಕ್ಕಿಂತ ಕಡಿಮೆ ಸಾವು ಸೋಮವಾರ ಸಂಭವಿಸಿದ್ದರೆ, ಮಂಗಳವಾರ ಈ ಸಂಖ್ಯೆ 115ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News