​ನ. 5ರಂದು ಹೊಸ ಕೃಷಿ ಕಾನೂನು ವಿರುದ್ಧ ದೇಶಾದ್ಯಂತ ರಸ್ತೆ ತಡೆ

Update: 2020-10-28 04:27 GMT
ಫೈಲ್ ಫೋಟೊ

ಚಂಡೀಗಢ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ವಿವಿಧ ರೈತ ಸಂಘಟನೆಗಳು ನವೆಂಬರ್ 5ರಂದು ದೇಶಾದ್ಯಂತ ರಸ್ತೆ ತಡೆ ಚಳವಳಿ ನಡೆಸುವುದಾಗಿ ಘೋಷಿಸಿವೆ.

ಈ ರೈತವಿರೋಧಿ, ಜನವಿರೋಧಿ ಕೃಷಿ ಕಾನೂನುಗಳ ವಿರುದ್ಧ ಮತ್ತು ಕೇಂದ್ರದ ಉದ್ದೇಶಿತ ವಿದ್ಯತ್ (ತಿದ್ದುಪಡಿ) ಮಸೂದೆ-2020ರ ವಿರುದ್ಧ ಹೋರಾಟವನ್ನು ದೇಶಾದ್ಯಂತ ನಡೆಸುವ ನಿಟ್ಟಿನಲ್ಲಿ ವಿವಿಧ ಕೃಷಿಕ ಸಂಘಟನೆಗಳು ಸಂಪೂರ್ಣ ಸಮನ್ವಯದಿಂದ ಕಾರ್ಯ ನಿರ್ವಹಿಸು ವಂತೆಯೂ ಹೊಸದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಇಡೀ ಕೃಷಿ ಕಾರ್ಮಿಕ ಸಮುದಾಯ ಹಾಗೂ 500ಕ್ಕೂ ಅಧಿಕ ರೈತ ಸಂಘಟನೆಗಳನ್ನು ಒಳಗೊಂಡ ಪ್ರಮುಖ ಕೃಷಿ ಒಕ್ಕೂಟವಾದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಮತ್ತು ರೈತ ಮುಖಂಡ ಬಲಬೀರ್ ಸಿಂಗ್ ರಾಜೇವಾಲ್, ಹರ್ಯಾಣ ಬಿಕೆಯು ಮುಖ್ಯಸ್ಥ ಗುರ್ನಂ ಸಿಂಗ್ ಮತ್ತಿತರ ಮುಖಂಡರು ಹೊಸದಿಲ್ಲಿಯಲ್ಲಿ ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಎಐಕೆಎಸ್‌ಸಿಸಿ ಪ್ರಕಟಣೆ ಹೇಳಿದೆ.

ದೇಶಾದ್ಯಂತ ನವೆಂಬರ್ 5ರಂದು ರಸ್ತೆ ತಡೆ ಚಳವಳಿ ನಡೆಸಲು ಮತ್ತು ನವೆಂಬರ್ 26-27ರಂದು ದೆಹಲಿ ಚಲೋ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

"ಇತ್ತೀಚೆಗೆ ಆಂಗೀಕರಿಸಲಾದ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಉದ್ದೇಶಿತ ವಿದ್ಯುತ್ ಮಸೂದೆ-2020ನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಲಾಗುವುದು. ಈ ಪ್ರತಿಭಟನೆಯಲ್ಲಿ ರಾಜ್ಯವಾರು/ ಪ್ರದೇಶವಾರು ದೊಡ್ಡ ಸಂಖ್ಯೆಯಲ್ಲಿ ರೈತರು ಸೇರಿ ಈ ಬೇಡಿಕೆಗಳಿಗೆ ಆಗ್ರಹಿಸುವರು" ಎಂದು ವಿವರಿಸಲಾಗಿದೆ.

ಹೊಸದಾಗಿ ರಚಿಸಲಾದ ಸಮನ್ವಯ ಸಮಿತಿ ಪ್ರತಿಭಟನೆಯ ನೇತೃತ್ವ ವಹಿಸಲಿದೆ. ಈ ಸಮಿತಿಯಲ್ಲಿ ಎಂ.ವಿ.ಸಿಂಗ್, ಬಲಬೀರ್ ಸಿಂಗ್ ರಾಜೇವಾಲ್, ಗುರ್ನಂ ಸಿಂಗ್, ರಾಜು ಶೆಟ್ಟಿ ಮತ್ತು ಯೋಗೇಂದ್ರ ಯಾದವ್ ಇರುತ್ತಾರೆ ಎಂದು ಪ್ರಕಟಣೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News