ದ.ಕ., ಉಡುಪಿ ಜಿಲ್ಲೆಯ ತಲಾ ಮೂವರು ಸೇರಿ ಒಟ್ಟು 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Update: 2020-10-28 11:27 GMT

ಬೆಂಗಳೂರು, ಅ. 28: ಕನ್ನಡ ನಾಡು-ನುಡಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ ವಲೇರಿಯನ್ ಡಿಸೋಜ(ವಲ್ಲಿವಗ್ಗ), ಕೋಲಾರ ಜಿಲ್ಲೆಯ ವಿ.ಮುನಿವೆಂಕಟಪ್ಪ, ಸಾಹಿತಿ ಪ್ರೊ.ಸಿ.ಪಿ.ಸಿದ್ದಾಶ್ರಮ, ಗಾಯಕ ಗುರುರಾಜ ಹೊಸಕೋಟೆ, ಸಂಗೀತ ವಿದ್ವಾಂಸ ಹಂಬಯ್ಯ ನೂಲಿ, ಕ್ರೀಡಾಪಟು ಉಷಾರಾಣಿ ಸೇರಿದಂತೆ ಒಟ್ಟು 65 ಮಂದಿ ಗಣ್ಯರಿಗೆ ಪ್ರಸಕ್ತ ಸಾಲಿನ `ರಾಜ್ಯೋತ್ಸವ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನವೆಂಬರ್ 1ರ ಬದಲಿಗೆ ನ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪುರಸ್ಕೃತರಿಗೆ 1ಲಕ್ಷ ರೂ.ನಗದು, 25 ಗ್ರಾಂ ಬಂಗಾರದ ಪದಕ ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ತಿಳಿಸಿದರು.

ಆರೆಸ್ಸೆಸ್ ಹಿನ್ನೆಲೆ ಸಂಸ್ಥೆಗೆ ಪ್ರಶಸ್ತಿ: ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಆರೆಸ್ಸೆಸ್ ಹಿನ್ನೆಲೆಯ 'ಯುವ ಬ್ರಿಗೇಡ್' ಸಂಸ್ಥೆಗೆ ಪ್ರಶಸ್ತಿ ಪ್ರಕಟಿಸಲಾಗಿದೆ. `ಆರೆಸ್ಸೆಸ್ ಸೇರಿದಂತೆ ಯಾವ ಸಂಘ-ಸಂಸ್ಥೆಗೂ ಪ್ರಶಸ್ತಿ ನೀಡಬಾರದೆಂಬ ನಿಯಮಗಳಿಲ್ಲ. ಆರೆಸ್ಸೆಸ್ ಕೂಡ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಯುವ ಬ್ರಿಗೇಡ್ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಗೆ ನೀಡಲಾಗಿದೆ' ಎಂದು ಸಚಿವ ಸಿ.ಟಿ.ರವಿ ಇದೇ ವೇಳೆ ಸ್ಪಷ್ಟನೆ ನೀಡಿದರು.

ಪ್ರಸಕ್ತ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ 1,788 ಅರ್ಜಿಗಳು ಬಂದಿದ್ದು, ತನ್ನ ನೇತೃತ್ವದ 25 ತಜ್ಞರನ್ನು ಒಳಗೊಂಡ ಸಲಹಾ ಸಮಿತಿ ಈ ಅರ್ಜಿಗಳನ್ನು ಪರಿಶೀಲಿಸಿ, ಅಂತಿಮವಾಗಿ 130 ಸಾಧಕರ ಪಟ್ಟಿಯನ್ನು ಸಿದ್ಧಗೊಳಿಸಿ ಸಿಎಂ ಅಧ್ಯಕ್ಷತೆಯ ಆಯ್ಕೆ ಸಮಿತಿಗೆ ಕಳುಹಿಸಲಾಯಿತು. ಸಿಎಂ ಯಡಿಯೂರಪ್ಪ ನೇತೃತ್ವದ ಐವರ ಆಯ್ಕೆ ಸಮಿತಿ ಗಣನೀಯ ಸೇವೆ ಸಲ್ಲಿಸಿದ 65 ಮಂದಿ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದರು.

ಪ್ರಾದೇಶಿಕತೆ, ಸಾಮಾಜಿಕ ನ್ಯಾಯ, ಎಲೆಮರೆಯಲ್ಲಿದ್ದ ಅಪ್ರತಿಮ ಸಾಧನೆಗೈದ ಮಹನೀಯರನ್ನು ಹಾಗೂ ಸಂಘ-ಸಂಸ್ಥೆಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಮಾಜಿಕ ಮತ್ತು ಪ್ರಾದೇಶಿಕವಾಗಿ ನ್ಯಾಯ ಸಲ್ಲಿಸಬಹುದಾದ ಕೆಲವು ಸಾಧಕರಿಗೆ ಪ್ರಶಸ್ತಿ ಸಿಗದಿರಬಹುದು. ಸಾಮಾಜಿಕ ನ್ಯಾಯದಡಿ ಸಮಾಜದಲ್ಲಿರುವ ಭಾಗಶಃ ಎಲ್ಲ ಸಮುದಾಯದ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಪ್ರೊ.ದೊಡ್ಡರಂಗೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಡಾ.ವಾಮನಾಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಶ್ಮಿ, ಇಲಾಖೆಯ ನಿರ್ದೇಶಕ ರಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರ ಪಟ್ಟಿ: ಸಾಹಿತ್ಯ-ವಲೇರಿಯನ್ ಡಿಸೋಜ(ವಲ್ಲಿವಗ್ಗ)-ದಕ್ಷಿಣ ಕನ್ನಡ ಜಿಲ್ಲೆ, ಪ್ರೊ.ಸಿ.ಪಿ.ಸಿದ್ಧಾಶ್ರಮ-ಧಾರವಾಡ, ವಿ.ಮುನಿವೆಂಕಟಪ್ಪ-ಕೋಲಾರ, ರಾಮಣ್ಣ ಬ್ಯಾಟಿ-ವಿಶೇಷ ಚೇತನ-ಗದಗ, ಡಿ.ಎನ್.ಅಕ್ಕಿ-ಯಾದಗಿರಿ ಇವರು ಆಯ್ಕೆಯಾಗಿದ್ದಾರೆ.

ಸಂಗೀತ: ಕೆ.ಲಿಂಗಪ್ಪ ಶೇರಿಗಾರ ಕಟೀಲು-ದಕ್ಷಿಣ ಕನ್ನಡ, ಹಂಬಯ್ಯ ನೂಲಿ-ರಾಯಚೂರು, ಅನಂತ ತೇರದಾಳ-ಬೆಳಗಾವಿ, ಬಿ.ವಿ.ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ-ಬೆಂಗಳೂರು ನಗರ.

ನ್ಯಾಯಾಂಗ: ಕೆ.ಎನ್.ಭಟ್-ಬೆಂಗಳೂರು, ಎಂ.ಕೆ.ವಿಜಯ ಕುಮಾರ-ಉಡುಪಿ.

ಮಾಧ್ಯಮ: ಸಿ.ಮಹೇಶ್ವರನ್-ಮೈಸೂರು, ಟಿ.ವೆಂಕಟೇಶ್-ಬೆಂಗಳೂರು ನಗರ.

ಯೋಗ: ಡಾ.ಎ.ಎಸ್.ಚಂದ್ರಶೇಖರ-ಮೈಸೂರು.

ಶಿಕ್ಷಣ: ಎಂ.ಎನ್.ಷಡಕ್ಷರಿ-ಚಿಕ್ಕಮಗಳೂರು, ಡಾ.ಆರ್.ರಾಮಕೃಷ್ಣ-ಚಾಮರಾಜನಗರ, ಡಾ.ಎಂ.ಜಿ.ಈಶ್ವರಪ್ಪ-ದಾವಣಗೆರೆ, ಡಾ.ಪುಟ್ಟಸಿದ್ದಯ್ಯ-ಮೈಸೂರು, ಅಶೋಕ್ ಶೆಟ್ಟರ್-ಬೆಳಗಾವಿ, ಡಿ.ಎಸ್.ದಂಡಿನ್-ಗದಗ.

ಹೊರನಾಡು ಕನ್ನಡಿಗ: ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ- ದಕ್ಷಿಣ ಕನ್ನಡ, ವಿದ್ಯಾ ಸಿಂಹಾಚಾರ್ಯ ಮಾಹುಲಿ ಮಹಾರಾಷ್ಟ್ರ ಮುಲುಂಡ ಮುಂಬೈ.

ಕ್ರೀಡೆ: ಎಚ್.ಬಿ.ನಂಜೇಗೌಡ-ತುಮಕೂರು ಹಾಗೂ ಉಷಾರಾಣಿ-ಬೆಂಗಳೂರು.

ಸಂಕೀರ್ಣ: ಡಾಕೆ.ವಿ.ರಾಜು-ಕೋಲಾರ, ನಂ.ವೆಂಕೋಬರಾವ್-ಹಾಸನ, ಡಾ.ಕೆ.ಎಸ್.ರಾಜಣ್ಣ-ಮಂಡ್ಯ, ವಿ.ಲಕ್ಷ್ಮಿನಾರಾಯಣ-ಮಂಡ್ಯ.

ಸಂಘ-ಸಂಸ್ಥೆ: ಯೂತ್ ಫಾರ್ ಸೇವಾ-ಬೆಂಗಳೂರು ನಗರ, ದೇವದಾಸಿ ಸ್ವಾವಲಂಬನ ಕೇಂದ್ರ-ಬಳ್ಳಾರಿ, ಯುವ ಬ್ರಿಗೇಡ್ -ಬೆಂಗಳೂರು ಗ್ರಾಮಾಂತರ, ಧರ್ಮೋತ್ಥಾನ ಟ್ರಸ್ಟ್-ಧರ್ಮಸ್ಥಳ, ದಕ್ಷಿಣ ಕನ್ನಡ.

ಸಮಾಜ ಸೇವೆ: ಎನ್.ಎಸ್.ಕುಂದರಗಿ ಹೆಗಡೆ-ಉತ್ತರ ಕನ್ನಡ, ಪ್ರೇಮಾ ಕೋದಂಡರಾಮ ಶ್ರೇಷ್ಠಿ ಹಾಗೂ ಮೋಹಿನಿ ಸಿದ್ದೇಗೌಡ-ಚಿಕ್ಕಮಗಳೂರು, ಮಣೆಗಾರ್ ಮಿರಾನ್ ಸಾಹೇಬ್-ಉಡುಪಿ.

ವೈದ್ಯಕೀಯ: ಡಾ.ಅಶೋಕ್ ಸೊನ್ನದ್-ಬಾಗಲಕೋಟೆ, ಡಾ.ಬಿ.ಎಸ್.ಶ್ರೀನಾಥ-ಶಿವಮೊಗ್ಗ, ಡಾ.ಎ.ನಾಗರತ್ನ-ಬಳ್ಳಾರಿ, ಡಾ. ವೆಂಕಟಪ್ಪ-ರಾಮನಗರ.

ಕೃಷಿ-ಪರಿಸರ: ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್-ಬೀದರ್, ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ-ಚಿತ್ರದುರ್ಗ, ಡಾ.ಸಿದ್ರಾಮಪ್ಪ ಬಸವಂತರಾವ್ ಪಾಟೀಲ್-ಕಲಬುರಗಿ. ಅಮರನಾರಾಯಣ-ಚಿಕ್ಕಬಳ್ಳಾಪುರ, ಎನ್.ಡಿ.ಪಾಟೀಲ್-ವಿಜಯಪುರ.

ವಿಜ್ಞಾನ-ತಂತ್ರಜ್ಞಾನ: ಪ್ರೊ.ಉಡುಪಿ ಶ್ರೀನಿವಾಸ-ಉಡುಪಿ, ಡಾ.ಚಿಂದಿ ವಾಸುದೇವಪ್ಪ-ಶಿವಮೊಗ್ಗ. ಸಹಕಾರ-ಡಾ.ಸಿ.ಎನ್. ಮಂಚೇಗೌಡ-ಬೆಂಗಳೂರು. ಬಯಲಾಟ-ಕೆಂಪವ್ವ ಹರಿಜನ-ಬೆಳಗಾವಿ, ಚೆನ್ನಬಸಪ್ಪ ಬೆಂಡಿಗೇರಿ-ಹಾವೇರಿ.

ಯಕ್ಷಗಾನ: ಬಂಗಾರ್ ಆಚಾರಿ-ಚಾಮರಾಜನಗರ, ಎಂ.ಕೆ.ರಮೇಶ್ ಆಚಾರ್ಯ-ಶಿವಮೊಗ್ಗ.

ರಂಗಭೂಮಿ: ಅನಸೂಯಮ್ಮ-ಹಾಸನ, ಎಚ್.ಷಡಕ್ಷರಪ್ಪ-ದಾವಣಗೆರೆ, ತಿಪ್ಪೇಸ್ವಾಮಿ-ಚಿತ್ರದುರ್ಗ.

ಚಲನಚಿತ್ರ/ಚಿತ್ರಕಲೆ: ಬಿ.ಎಸ್.ಬಸವರಾಜ್-ತುಮಕೂರು, ಆಪಾಢಾಂಡ ತಿಮ್ಮಯ್ಯ ರಘು-ಕೊಡಗು. ಎಂ.ಜೆ.ವಾಚೇದ್‍ಮಠ -ಧಾರವಾಡ.

ಜಾನಪದ/ಶಿಲ್ಪಕಲೆ/ನೃತ್ಯ: ಗುರುರಾಜ ಹೊಸಕೋಟೆ-ಬಾಗಲಕೋಟೆ, ಡಾ.ಹಂಪನಹಳ್ಳಿ ತಿಮ್ಮೇಗೌಡ-ಹಾಸನ. ಎನ್.ಎಸ್. ಜನಾರ್ದನಮೂರ್ತಿ-ಮೈಸೂರು, ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್,

ಜಾನಪದ/ತೊಗಲು ಗೊಂಬೆಯಾಟ: ಕೇಶಪ್ಪ ಶಿಳ್ಳೇಕ್ಯಾತರ-ಕೊಪ್ಪಳ.

ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆ, ಬೇಡವೇ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಪ್ರತಿಷ್ಠಿತ ಪ್ರಶಸ್ತಿ ನಿಲ್ಲಿಸುವುದು ಬೇಡ ಎಂದು ಪುರಸ್ಕೃತರನ್ನು ಆಯ್ಕೆ ಮಾಡಿದ್ದು, ರಾಜ್ಯೋತ್ಸವ ಸಮಾರಂಭವನ್ನು ಸರಳವಾಗಿ ಆಚರಿಸುವ ತೀರ್ಮಾನಕ್ಕೆ ಬರಲಾಗಿದೆ. ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯೋತ್ಸವ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ'

-ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News