​ಖಾಸಗಿ ಆಸ್ಪತ್ರೆ ಐಸಿಯು ಘಟಕದಲ್ಲಿ ಯುವತಿ ಮೇಲೆ ಅತ್ಯಾಚಾರ

Update: 2020-10-29 04:11 GMT

ಗುರುಗಾಂವ್ : ಇಲ್ಲಿನ ಸೆಕ್ಟರ್ 44ರಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 21 ವರ್ಷ ವಯಸ್ಸಿನ ಕ್ಷಯರೋಗಿಯ ಮೇಲೆ, ಆಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಸಿಬ್ಬಂದಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ವರದಿಯಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಳು.

ರೋಗಿಗೆ ಮಂಗಳವಾರ ಪ್ರಜ್ಞೆ ಬಂದಿದ್ದು, ಈ ಘಟನೆ ಬಗ್ಗೆ ಕೈಬರಹದ ಪತ್ರದ ಮೂಲಕ ತಂದೆಗೆ ವಿವರಿಸಿದ್ದಾಳೆ. ಬಳಿಕ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಅಕ್ಟೋಬರ್ 21ರಂದು ಯುವತಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅಕ್ಟೋಬರ್ 27ರಂದು ಯುವತಿಗೆ ಪ್ರಜ್ಞೆ ಬಂದಿದೆ. ಈ ನಡುವೆ ಅತ್ಯಾಚಾರ ನಡೆದಿದೆ ಎಂದು ಕುಟುಂಬದವರು ಆಪದಿಸಿದ್ದಾರೆ. ಸಂತ್ರಸ್ತೆ ಯುವತಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹೇಂದ್ರಗಢದ ಈ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ಷಯರೋಗದಿಂದ ಬಳಲುತ್ತಿದ್ದ ಈಕೆಗೆ ಆಸ್ಪತ್ರೆಯ ಖಾಸಗಿ ಕೊಠಡಿಯಲ್ಲಿ ಐಸೊಲೇಶನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಯುವತಿಯ ತಂದೆ ಮಂಗಳವಾರ ಪುತ್ರಿಯನ್ನು ಭೇಟಿ ಮಾಡಲು ಹೋಗಿದ್ದ ವೇಳೆ ಅತ್ಯಾಚಾರ ನಡೆದ ಘಟನೆಯನ್ನು ಕೈಬರಹದ ಪತ್ರದ ಮೂಲಕ ವಿವರಿಸಲು ಯುವತಿ ಪ್ರಯತ್ನಿಸಿದ್ದಾಗಿ ಸಹಾಯಕ ಪೊಲೀಸ್ ಆಯುಕ್ತೆ ಉಷಾ ಖಂಡು ಹೇಳಿದ್ದಾರೆ.

ಆಸ್ಪತ್ರೆ ಈ ಘಟನೆ ಬಗ್ಗೆ ಆಂತರಿಕ ವಿಚಾರಣೆ ನಡೆಸಿದ್ದು, ಕುಟುಂಬ ನೀಡಿದ ದೂರಿನ ಮೇರೆಗೆ ಸುಶಾಂತ್‌ಲೋಕ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 376(2)(ಇ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಗುರುತಿಸಲಾಗಿದ್ದು, ಇನ್ನಷ್ಟೇ ಬಂಧಿಸಬೇಕಿದೆ" ಎಂದು ಅವರು ವಿವರ ನೀಡಿದ್ದಾರೆ.

ಆರೋಪಿಯ ಹೆಸರು ವಿಕಾಸ್ ಎಂದು ಸಂತ್ರಸ್ತೆ ಹೇಳಿದ್ದು, ಆತ ವೈದ್ಯಕೀಯೇತರ ಹೊರಗುತ್ತಿಗೆ ಸಿಬ್ಬಂದಿ.
ಈಗಾಗಲೇ ಸಿಸಿಟಿವಿ ದೃಶ್ಯಾವಳಿಯನ್ನು ದಾಖಲಿಸಿಕೊಂಡಿದ್ದು, ವಾರ್ಡ್‌ನಲ್ಲಿ ನಿಯೋಜಿಸಲಾಗಿದ್ದ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ಆತನನ್ನು ಬಂಧಿಸುವ ಮುನ್ನ ಎಲ್ಲ ವಿವರಗಳನ್ನು ದೃಢೀಕರಿಸಿಕೊಳ್ಳುತ್ತಿದ್ದೇವೆ ಎಂದು ಖಂಡು ಹೇಳಿದ್ದಾರೆ. ದಾಖಲಿಸಿಕೊಂಡ ದಿನದಿಂದಲೇ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿರುವುದರಿಂದ ಸಂತ್ರಸ್ತೆಯ ಹೇಳಿಕೆಯನ್ನು ಈ ಹಂತದಲ್ಲಿ ದಾಖಲಿಸಿಕೊಳ್ಳುವುದು ಕಷ್ಟ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News