ವ್ಯಾಪಾರ : ಪ್ರವಾದಿ ಬೋಧನೆಯ ಬೆಳಕಿನಲ್ಲಿ

Update: 2020-10-29 05:55 GMT

ಪ್ರವಾದಿ ಮುಹಮ್ಮದ್ (ಸ) ರ ವಿಚಾರ ಬಂದಾಗೆಲ್ಲಾ ಅವರನ್ನು ಓರ್ವ ಧರ್ಮ ಪ್ರಬೋಧಕ ಎಂಬುವುದಕ್ಕೆ ಸೀಮಿತಗೊಳಿಸುವವರೇ ಅಧಿಕ. ಆದರೆ  ಅವರು ತನ್ನ ಬದುಕಿನಲ್ಲಿ‌ ಕೈಯಾಡಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಅಮೋಘ ಯಶಸ್ಸು ಕಂಡವರು ಮತ್ತು ಯಾವತ್ತೂ ಯಶಸ್ಸಿನಲ್ಲಿ ಮೈ ಮರೆಯದವರೂ ಆಗಿದ್ದರು. ಒಂದು ವೇಳೆ ಅವರು  ಮೈ ಮರೆತಿದ್ದರೂ ಕನಿಷ್ಠ ಪಕ್ಷ ಅಗರ್ಭ ಶ್ರೀಮಂತ ವ್ಯಾಪಾರಿಯಾದರೂ ಆಗಿರುತ್ತಿದ್ದರು. ಆದರೆ ಅವರು ಸದಾ " ಅಲ್ಲಾಹುಮ್ಮ ಅಮಿತ್‌ನೀ ಮಿಸ್ಕೀನಾ" ನನ್ನನ್ನು ಬಡವನಾಗಿಯೇ ಉಳಿಸು... ಎಂದು ಪ್ರಾರ್ಥಿಸುತ್ತಿದ್ದರು.

ಪ್ರವಾದಿಯವರ ಬದುಕಿನ ಯಾವ ಆಯಾಮದ ಕುರಿತಂತೆ ಬರೆದರೂ ಬರೆದು ಮುಗಿಸುವುದು ಸಾಧ್ಯವಿಲ್ಲ. ಅದಾಗ್ಯೂ "  ಪ್ರವಾದಿ ಮುಹಮ್ಮದ್ (ಸ) ರ ವ್ಯಾಪಾರ ನೀತಿಯ ಮೇಲೆ ಒಂದು  ಕ್ಷ -ಕಿರಣ ಬೀರುವ ಪ್ರಯತ್ನ ಇಲ್ಲಿ ಮಾಡುತ್ತೇನೆ.

ಪ್ರವಾದಿವರ್ಯರದು ಮೂಲತಃ ವ್ಯಾಪಾರಕ್ಕೆ ಪ್ರಸಿದ್ಧವಾದ ಕುಟುಂಬ. ಅವರಿಗೆ ವ್ಯಾಪಾರೀ ಕಲೆ ರಕ್ತಗತವಾಗಿ ಬಂದಿತ್ತು. ಅಪ್ಪ ಅಬ್ದುಲ್ಲಾಹ್ ವ್ಯಾಪಾರಕ್ಕೆಂದು ಹೋದಾಗ ಆಮಿನಾ ಬೀಬಿ (ರ) ತುಂಬು ಗರ್ಬಿಣಿಯಾಗಿದ್ದರು. ವ್ಯಾಪಾರಕ್ಕೆಂದು ದೂರದೂರಿಗೆ ಹೊರಟ ವರ್ತಕರ ಕೂಟ ಮರಳಿ ಬಂದದ್ದು ಆರ್ಥಿಕವಾಗಿ ಅಮೋಘ ಲಾಭದೊಂದಿಗೆ... ಆರ್ಥಿಕ ಲಾಭದ ಜೊತೆ ಜೊತೆಗೆ ಕಹಿ ಸುದ್ಧಿಯೊಂದನ್ನೂ ಹೊತ್ತು ತಂದಿದ್ದರು. ಅವರ ನಾಯಕ ಅಬ್ದುಲ್ ಮುತ್ತಲಿಬರ ಸುಪುತ್ರ ಅಬ್ದುಲ್ಲಾಹ್ (ರ) ಇನ್ನಿಲ್ಲ ಎಂಬ ಕಹಿ ಸುದ್ಧಿಯನ್ನು....

ಆಮಿನಾ ಬೀಬಿಯ ಹೊಟ್ಟೆಯಲ್ಲಿ ಬೆಳೆದ ಅಬ್ದುಲ್ಲಾಹ್‌ರ ಕುಡಿ ಅನಾಥವಾಗಿಯೇ ಭೂಮಿಗೆ ಬಂತು.. ತಾತ ಅಬ್ದುಲ್ ಮುತ್ತಲಿಬರ ಲಾಲಣೆ ಪೋಷಣೆಯಲ್ಲಿ ಬೆಳೆದ ಮುಹಮ್ಮದ್ (ಸ)ರಿಗೂ ಬೆಳೆಯುತ್ತಲೇ ಕುಲ ಕಸುಬಾದ ವ್ಯಾಪಾರದ ಪಟ್ಟುಗಳನ್ನು ಚಿಕ್ಕಪ್ಪ ಅಬೂತ್ವಾಲಿಬ್ ಕಲಿಸಿದರು. ತನ್ನೊಂದಿಗೆ ವ್ಯಾಪಾರಕ್ಕೂ ಕರೆದುಕೊಂಡು ಹೋಗುತ್ತಿದ್ದರು. ಆ ಹೊತ್ತಿಗಾಗಲೇ ಮುಹಮ್ಮದ್(ಸ) ರಿಗೆ ಅಸ್ವಾದಿಕ್ ಅರ್ಥಾತ್ ಸತ್ಯಸಂಧ ಎಂಬ ಬಿರುದು ಅರೇಬಿಯಾದಲ್ಲಿ ಪ್ರಾಪ್ತಿಯಾಗಿತ್ತು. ಮಕ್ಕಾದ ಅಗರ್ಭ ಶ್ರೀಮಂತ ವ್ಯಾಪಾರೀ ಮಹಿಳೆ ಖದೀಜಾ (ರ) ವಿಧವೆಯಾಗಿದ್ದರು.  ಅವರು ಅದಾಗಲೇ ತನ್ನ ವ್ಯಾಪಾರವನ್ನು ಮುನ್ನಡೆಸುವ ಓರ್ವ ಸಮರ್ಥ ಪ್ರತಿನಿಧಿಯ ತಲಾಶೆಯಲ್ಲಿದ್ದರು. ಅವರು ಮುಹಮ್ಮದ್ (ಸ) ರನ್ನು  ತನ್ನ ಪ್ರತಿನಿಧಿಯಾಗಿ ನೇಮಿಸಿ ವ್ಯಾಪಾರಕ್ಕೆಂದು ಕಳುಹಿಸಿದರು.

ಮುಹಮ್ಮದ್ (ಸ) ವ್ಯಾಪಾರದ ವಿಧಾನ ನೋಡಿ ಸಹ ವ್ಯಾಪಾರಿಗಳು ಆಶ್ಚರ್ಯ ಚಕಿತರಾದರು. ಅವರು ತನ್ನ ಸರಕುಗಳಲ್ಲಿಲ್ಲದ ಯಾವೊಂದು ಗುಣವನ್ನೂ ಖರೀದಿದಾರರಲ್ಲಿ ಹೇಳುತ್ತಿರಲಿಲ್ಲ. ತನ್ನ ಸರಕಿನ ನಿಜವಾದ ಗುಣಮಟ್ಟವನ್ನು ಮಾತ್ರ ಹೇಳಿ ವ್ಯಾಪಾರ ಕುದುರಿಸುತ್ತಿದ್ದರು. ಇದರಿಂದಾಗಿ ಎಲ್ಲಾ ಖರೀದಿದಾರರೂ ಮುಹಮ್ಮದರತ್ತ ಆಕರ್ಷಿತರಾದರು. ಖದೀಜಾರು ಈ ಹಿಂದೆಂದೂ ಪಡೆಯದಷ್ಟು ಲಾಭವನ್ನು ಮುಹಮ್ಮದ್ (ಸ) ರನ್ನು ತನ್ನ ಪ್ರತಿನಿಧಿಯಾಗಿ ನೇಮಿಸಿದ ಬಳಿಕ ಪಡೆಯತೊಡಗಿದರು.

ಪ್ರವಾದಿವರ್ಯರಿಗೆ ಪ್ರವಾದಿತ್ವ ಪ್ರಾಪ್ತಿಯಾಗುವ ಮುನ್ನವೇ ಅವರು ಸತ್ಯದ ಹೊರತಾಗಿ ಏನನ್ನೂ ಮಾತನಾಡುತ್ತಿರಲಿಲ್ಲ. ಪ್ರವಾದಿತ್ವ ಪ್ರಾಪ್ತಿಯಾಗುವವರೆಗೆ ಒಳಿತನ್ನು ತಾನು ಮಾಡಿ ತೋರಿಸುತ್ತಿದ್ದರು. ಪ್ರವಾದಿತ್ವ ಪ್ರಾಪ್ತಿಯಾದ ಬಳಿಕ  ಒಳಿತಿನ ದೌತ್ಯ ನೀಡುವ ಹೊಣೆಯೂ ಅವರ ಹೆಗಲೇರಿತ್ತು. ಅವರು ಪವಿತ್ರ ಖುರ್‌ಆನಿನ ಬೆಳಕಿನಡಿ ವ್ಯಾಪಾರದ ನೀತಿ ನಿಯಮಾವಳಿಗಳನ್ನು ಅಧಿಕೃತವಾಗಿ  ರೂಪಿಸಿ ಬೋಧನೆಗಿಳಿದರು.

ಪವಿತ್ರ ಖುರ್‌ಆನ್ ಬಹಳ ಸ್ಪಷ್ಟವಾಗಿ " ನಿಮಗೆ ವ್ಯಾಪಾರವನ್ನು ಧರ್ಮಸಮ್ಮತಗೊಳಿಸಲಾಗಿದೆ, ಬಡ್ಡಿಯನ್ನು ನಿಷೇಧಿಸಲಾಗಿದೆ" ಎಂದು ಬೋಧಿಸುತ್ತದೆ. ಬಡ್ಡಿಯನ್ನು ಯಾಕೆ ನಿಷೇಧಿಸಲಾಯಿತು ಎಂಬ ಪ್ರಶ್ನೆ ಆಧುನಿಕ ಜಗತ್ತಿನಲ್ಲಿ ಇಂದಿಗೂ ಇದೆ.  ಪ್ರವಾದಿವರ್ಯರು " ನಿಮ್ಮ ಶ್ರಮದ ಹೊರತಾದ ಒಂದೊಂದು ಪೈಸೆಯೂ ನಿಮಗೆ ಧರ್ಮಬಾಹಿರ" ಎಂದು ಬೋಧಿಸಿದರು. ಬಡ್ಡಿಯಲ್ಲಿ ನಮ್ಮ ಶ್ರಮವಿರುವುದಿಲ್ಲ, ಬದಲಾಗಿ ಅದು ಇತರರ ಶ್ರಮವನ್ನು ನಾವು ಪುಗಸಟ್ಟೆ ಉಣ್ಣುವುದಾಗಿದೆ. ಅದರಲ್ಲಿ ಬಡ್ಡಿ ನೀಡಿದವನ ಬೆವರು ಮಾತ್ರವಲ್ಲ ಕಣ್ಣೀರು ಮತ್ತು ನೆತ್ತರಿದೆ.


 ಬಡ್ಡಿ ಜನರನ್ನು ಅವನತಿಯತ್ತ ಕೊಂಡೊಯ್ಯುತ್ತದೆ. ಬಡ್ಡಿ ಜನರ ರಕ್ತ ಹೀರುತ್ತದೆ. ಪರಿಣಾಮವಾಗಿ ದ್ವೇಷವನ್ನು ಉದ್ದೀಪನಗೊಳಿಸುತ್ತದೆ ಎಂದು ಪ್ರವಾದಿವರ್ಯರು ಹಿಟ್ಲರನ ಕಾಲಕ್ಕಿಂತ ಹದಿಮೂರು ಶತಮಾನಗಳ ಹಿಂದೆಯೇ ಕಂಡು ಕೊಂಡು ಬಡ್ಡಿಯ ವಿರುದ್ಧ ರಾಜಿರಹಿತ ಸಮರ ಸಾರಿದ್ದರು.

ಇಂದಿನ ನವ ವಸಾಹತುಶಾಹೀ ನೀತಿಯು ಸಣ್ಣ ವ್ಯಾಪಾರಿಗಳ ಬೆನ್ನು ಮೂಳೆ ಮುರಿಯುತ್ತಿದೆ. ಸಮುದ್ರದ ದೊಡ್ಡ ದೊಡ್ಡ ತಿಮಿಂಗಿಲಗಳು ಸಣ್ಣ ಸಣ್ಣ ಮೀನುಗಳನ್ನು ತಿನ್ನುವಂತೆ ನೇರ ವಿದೇಶೀ ಬಂಡವಾಳ   ನೀತಿಯು ಸಣ್ಣ ಪುಟ್ಟ  ವ್ಯಾಪಾರಿಗಳನ್ನು ನುಂಗಿ ನೀರು ಕುಡಿಯುತ್ತಿದೆ‌.
ಇದರಲ್ಲಿ ಶ್ರಮಪಡುವ ಸಣ್ಣ ವ್ಯಾಪಾರಿಗಳನ್ನು ಮುಗಿಸಿ ಬಂಡವಾಳದ ಮೂಲಕವೇ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ  ಸೃಷ್ಟಿಸುವ ಕುಟಿಲ ನೀತಿಯಿದೆ. ಬದುಕಲು ಶ್ರಮಪಡುವವರ ಶ್ರಮಕ್ಕೆ ಮೌಲ್ಯ ಕಲ್ಪಿಸಲಾಗುವುದಿಲ್ಲ. ಪ್ರವಾದಿವರ್ಯರು "ನೀವು ಉಣ್ಣುವ ಆಹಾರದಲ್ಲಿ  ಶ್ರೇಷ್ಠ ಆಹಾರ ನಿಮ್ಮ ಕೈಯಿಂದಲೇ ದುಡಿದ ಆಹಾರ" ಎಂದಿದ್ದಾರೆ.

ನವ ವಸಾಹತುಶಾಹೀ ನೀತಿಯಲ್ಲಿ , ಆಧುನಿಕ ಬಂಡವಾಳವಾದಲ್ಲಿ ದೈತ್ಯ ಉದ್ಯಮಪತಿಗಳು ಉತ್ಪಾದಕನಿಗೆ ಜುಜುಬಿ ಬೆಲೆ ಕೊಟ್ಟು ಖರೀದಿಸಿದ ಮಾಲುಗಳನ್ನು ಬೃಹತ್ ಲಾಭವಿಟ್ಟು ಗ್ರಾಹಕನಿಗೆ ತಲುಪಿಸುತ್ತದೆ. ಉತ್ಪಾದಕನ/ರೈತನ ಶ್ರಮಕ್ಕೆ ಆಧುನಿಕ ಬಂಡವಾಳವಾದದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ.

ವ್ಯಾಪಾರದಲ್ಲಿ ವ್ಯಕ್ತಿಯೋರ್ವ ಎಷ್ಟೇ ಲಾಭ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ  ಉತ್ಪಾದಕನ ಸರಕುಗಳನ್ನು ಬಲವಂತವಾಗಿ ಬೃಹತ್ ಕಂಪೆನಿಗಳು ತಮಗೆ ತೋಚಿದ ಬೆಲೆ ನೀಡಿ ಖರೀದಿಸುತ್ತದೆ ಎನ್ನುವುದಕ್ಕಿಂತ ಸರಕಾರವೇ ಉತ್ಪಾದಕನಿಗೆ ನೇರ ಮಾರುಕಟ್ಟೆ ಸಿಗದಂತಹ ನೀತಿಗಳನ್ನು ರೂಪಿಸಿ ಬಿಟ್ಟು ಬಂಡವಾಳಶಾಹಿತ್ವಕ್ಕೆ ಮುಕ್ತ ಅವಕಾಶ ಮಾಡಿಕೊಡುತ್ತದೆ. ಪ್ರವಾದಿವರ್ಯರಾದರೋ ಶ್ರಮವನ್ನೂ ಒಂದು ಶ್ರೇಷ್ಠ ಆರಾಧನೆ ಎಂದು ಘೋಷಿಸಿದವರು.

ಉತ್ಪಾದಕನಿಗೆ ಮಾರುಕಟ್ಟೆ  ನಿರೂಪಿಸುವ ಯಾವ ಹಕ್ಕನ್ನೂ ಆಧುನಿಕ ಬಂಡವಾಳವಾದ ನೀಡುತ್ತಿಲ್ಲ. ಶ್ರಮಕ್ಕೆ ನಯಾ ಪೈಸೆಯ ಬೆಲೆಯೂ ಇಲ್ಲ. ಅದರ ದುಷ್ಪರಿಣಾಮ ಉತ್ಪಾದಕನ ಮೇಲೆ ಮಾತ್ರವಲ್ಲ ಗ್ರಾಹಕರ ಮೇಲೆಯೂ ಆಗುವುದನ್ನು ನಾವು ದಿನ ನಿತ್ಯ ನೋಡುತ್ತಿರುತ್ತೇವೆ. ಒಂದೆಡೆ ಉತ್ಪಾದಕನಿಗೆ ಸೂಕ್ತ ಬೆಲೆ ನೀಡಲಾಗುವುದಿಲ್ಲ. ಆದರೆ ಸರಕು ಗ್ರಾಹಕನ ಕೈ ತಲುಪುವಾಗ ಚಿನ್ನದ ಬೆಲೆ. ನಾವು ನಮ್ಮ ದೇಶದಲ್ಲಿ ಪ್ರತೀ ವರ್ಷ ರೈತರು ಬೆಲೆಯಿಲ್ಲದೇ ಹತಾಶರಾಗಿ ಟೊಮೆಟೊವನ್ನು ಬೀದಿಗೆ ಸುರಿದು ಹೋಗುವುದನ್ನು ನೋಡುತ್ತಿರುತ್ತೇವೆ. ಆದರೆ ಆಗಲೂ ಟೊಮೆಟೊ ಬೆಳೆಯದ ನಾಡಿನಲ್ಲಿ ಬಳಕೆದಾರನಿಂದ ದುಬಾರಿ ಬೆಲೆ ಪಡೆಯಲಾಗುತ್ತದೆ. ಪ್ರವಾದಿವರ್ಯರ ಉದ್ಯಮ ನೀತಿಯಲ್ಲಿ ಉತ್ಪಾದಕ ಮತ್ತು ಮಾರಾಟಗಾರರಿಬ್ಬರೂ ಬದುಕಬೇಕೆಂಬುವುದೇ ಮೂಲ ಆಶಯವಾಗಿದೆ.

ಇಂದಿನ ಆಧುನಿಕ ಬಂಡವಾಳವಾದದಲ್ಲಿ ಗ್ರಾಹಕನಿಗೆ ತಾನು ಖರೀದಿಸುವ ಸರಕಿನ ಗುಣಮಟ್ಟವನ್ನು ಪರೀಕ್ಷಿಸುವ ಅವಕಾಶವೇ ಸಿಗುವುದಿಲ್ಲ. ಇಂದು ಶಾಪಿಂಗ್ ಮಾಲ್‌ಗಳಲ್ಲಿ ಎಲ್ಲವನ್ನೂ ಸಂಸ್ಕರಿತ ಎಂದು ಪ್ಯಾಕ್ ಮಾಡಿಯೇ ಗ್ರಾಹಕನಿಗೆ ತಲುಪಿಸಲಾಗುತ್ತದೆ. ಅದರಲ್ಲಿ ಗುಣಮಟ್ಟ ಪರೀಕ್ಷಿಸುವ ಅವಕಾಶವೇ ಇರುವುದಿಲ್ಲ. ಒಮ್ಮೆ ಪ್ಯಾಕ್ ಒಡೆದ ಮೇಲೆ ಅದರಲ್ಲಿ ಗುಣಮಟ್ಟದ ಕೊರತೆಯಿದೆಯೆಂದಾದರೆ ನೀವು ಪ್ಯಾಕ್ ಮಾಡಿ ಮಾರುಕಟ್ಟೆಗೆ ಹಾಕಿದವನಲ್ಲಿ ನಿಮ್ಮ ಅಹವಾಲನ್ನು ಸಲ್ಲಿಸುವ ಅವಕಾಶವೇ ಇಲ್ಲ.

ಒದ್ದೆ ಮಾಡಿದಾಗ ಕೆಲ ಸರಕುಗಳ ತೂಕ ಹೆಚ್ಚಾಗುತ್ತದೆ. ಉದಾಹರಣೆಗೆ ಮೆಣಸು, ಖರ್ಜೂರ , ಧಾನ್ಯಗಳು ಇತ್ಯಾದಿಗಳು. ಆದುದರಿಂದ ಒದ್ದೆ ಮಾಡಿ ತೂಕ ಹೆಚ್ಚಿಸುವುದನ್ನು ಪ್ರವಾದಿವರ್ಯರು ಕಟುವಾಗಿ ವಿರೋಧಿಸಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ವಯಂ ತೇವಾಂಶ ಇರುವ ಸರಕುಗಳನ್ನು ಮತ್ತಷ್ಟು ತೇವಗೊಳಿಸಿ ಅದರ ತೂಕ ಹೆಚ್ಚಿಸಲಾಗುತ್ತದೆ.  ಅದೆಷ್ಟೋ ಸರಕುಗಳಿಗೆ ಕೃತಕ ತೇವಾಂಶ ಹಾಕಿ (ಒದ್ದೆ ಮಾಲು) ತೂಕ ಹೆಚ್ಚಿಸಲಾಗುತ್ತದೆ. ಇದರಲ್ಲಿ ಸಣ್ಣ ವ್ಯಾಪಾರಿಯ ತಪ್ಪಿಲ್ಲವಾದರೂ ಪ್ಯಾಕ್ ಮಾಡುವಾಗ ತೇವಾಂಶ ಹೆಚ್ಚಿಸಿ ತೂಕ ಹೆಚ್ಚಿಸಿದವನ ತಪ್ಪು ಇದ್ದೇ ಇರುತ್ತದೆ. ಶೈತ್ಯೀಕರಿಸಿ ಮಾಡುವ ಮಾರಾಟ ವ್ಯವಸ್ಥೆಯಲ್ಲಿ ಮೀನು, ಮಾಂಸಗಳು ಮೂಲ ತೂಕಕ್ಕಿಂತ ಹೆಚ್ಚೇ ತೂಕವಿರುತ್ತದೆ.

ಪ್ರವಾದಿವರ್ಯರು " ತೂಕದಲ್ಲಿ ನೀವು ಜನರನ್ನು ವಂಚಿಸದಿರಿ. ಅಲ್ಲಾಹನು ಅತ್ಯಂತ ದ್ವೇಷಿಸುವ ವಿಚಾರಗಳಲ್ಲಿ ಅದೂ ಒಂದಾಗಿದೆ" ಎಂದು ಬೋಧಿಸಿದರು.

" ನಿಮ್ಮ ಸರಕುಗಳಲ್ಲಿರುವ ನ್ಯೂನತೆಯನ್ನು ಗ್ರಾಹಕನಿಗೆ ಹೇಳಿ ತಿಳಿಸಬೇಕಾದುದು ಮತ್ತು ಇಲ್ಲದ ಹೆಚ್ಚುಗಾರಿಕೆಯನ್ನು ಹೇಳುವುದು ಪ್ರವಾದಿವರ್ಯರು ನಿರೂಪಿಸಿದ  ವ್ಯಾಪಾರ ನೀತಿಯಲ್ಲಿ ವ್ಯಾಪಾರಿಯ ಬದ್ಧತೆಯಾಗಿದೆ.  ಇಂದಿನ ಅಬ್ಬರದ ಜಾಹೀರಾತುಗಳಲ್ಲಿ ಇಲ್ಲದ ಗುಣಮಟ್ಟವನ್ನೇ ಪ್ರಚಾರ ಮಾಡಲಾಗುತ್ತದೆ.

ಆಹಾರ ವಸ್ತುಗಳ ಕಲಬೆರಕೆಯನ್ನು ಪ್ರವಾದಿವರ್ಯರು ಸಾವಿರದ ನಾಲ್ಕುನೂರು ವರ್ಷಗಳ ಹಿಂದೆಯೇ ವಿರೋಧಿಸಿದ್ದಾರೆ. "ನೀವು ವಂಚನೆ ಮಾಡದಿರಿ. ನಿಮ್ಮ ಪ್ರತಿಯೊಂದು ಒಳಿತು ಕೆಡುಕುಗಳಿಗೂ ಉತ್ತರ ನೀಡಲಿಕ್ಕಿದೆ." ಎಂದು ಸ್ಪಷ್ಟ ಮುನ್ನೆಚ್ಚರಿಕೆಯನ್ನು ಪ್ರವಾದಿವರ್ಯರು ನೀಡಿದ್ದಾರೆ.

ಇಂದು ಎಣ್ಣೆ, ಹಾಲು, ತುಪ್ಪ ಮುಂತಾದ ದ್ರವ ಪದಾರ್ಥಗಳನ್ನು ಕಲಬೆರಕೆ ಮಾಡಿ ಗ್ರಾಹಕನನ್ನು ವಂಚಿಸುವುದು ಗಂಭೀರ ವಿಷಯವಾಗುಳಿದಿಲ್ಲ. ನಮ್ಮ ಇಂದಿನ ವ್ಯಾಪಾರದಲ್ಲಿ ಸರ್ವೇ ಸಾಮಾನ್ಯವಾಗಿರುವ ಒಂದು ಗುಣ ಸುಳ್ಳು ಪ್ರಮಾಣ ಮಾಡುವುದು. ಅಥಾರಿಟಿಗಳಿಂದ ಪಡೆದ ಸುಳ್ಳು ಪ್ರಮಾಣಪತ್ರಗಳನ್ನು ಮುಂದಿಟ್ಟು ಲಾಭಗಳಿಸುವುದು. ನೀವು ವ್ಯಾಪಾರದಲ್ಲಿ ಎಷ್ಟೇ ಲಾಭ ಮಾಡಿ ಕೊಳ್ಳುವುದಕ್ಕೆ ಇಸ್ಲಾಮಿನಲ್ಲಿ ತಕರಾರಿಲ್ಲ. ಆದರೆ ಶರ್ತಗಳಂತೂ ಇದ್ದೇ ಇವೆ. ಇಂದು ಚಿಕ್ಕ ಪುಟ್ಟ ವ್ಯಾಪಾರಿಗಳಿಂದ ಹಿಡಿದು ಹೆಚ್ಚಿನವರು ಅನಗತ್ಯವಾಗಿ ಮೂಲಬೆಲೆಯನ್ನು ಹೆಚ್ಚಿಸಿ ಸುಳ್ಳು ಹೇಳುತ್ತಿರುತ್ತಾರೆ. "ವ್ಯಾಪಾರದಲ್ಲಿಯಾಗಲೀ, ಬೇರೆ ಯಾವುದೇ ವಿಚಾರದಲ್ಲಾಗಲೀ ಸುಳ್ಳು ಆಣೆ ಪ್ರಮಾಣ ಮಾಡುವುದನ್ನು ಪ್ರವಾದಿವರ್ಯರು ಕಟುವಾಗಿ ವಿರೋಧಿಸಿದ್ದಾರೆ.

ಇಂದು ಆಹಾರಧಾನ್ಯಗಳನ್ನು ಶೇಖರಿಸಿಟ್ಟು ಕೃತಕ ಅಭಾವ ಸೃಷ್ಟಿಸಿ ಬೆಲೆಯೇರಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಬಡ ಜನತೆ ಪರದಾಡುವುದನ್ನು, ಅತೀವ ಸಂಕಷ್ಟಕ್ಕೊಳಗಾಗುವುದನ್ನು ನಾವು ಪ್ರತಿ ನಿತ್ಯ ನೋಡುತ್ತಿರುತ್ತೇವೆ. ಕೋವಿಡ್ ನಿಮಿತ್ತ ಹೇರಲಾಗಿದ್ದ ಲಾಕ್‌ಡೌನ್ ಕಾಲದಲ್ಲಂತೂ ಕೃತಕ ಅಭಾವ ಸೃಷ್ಟಿಸಿ ಬೆಲೆಯೇರಿಸುವುದು ಸರ್ವೇ ಸಾಮಾನ್ಯವಾಗಿತ್ತು. "ಕ್ಷಾಮ ಕಾಲದಲ್ಲಾಗಲೀ, ಇತರೇ ಸಂದರ್ಭದಲ್ಲಾಗಲೀ ಕೃತಕ ಅಭಾವ ಸೃಷ್ಟಿಸಿ ಬೆಲೆಯೇರಿಸುವುದನ್ನು ಪ್ರವಾದಿವರ್ಯರು ಕಟುವಾಗಿ ವಿರೋಧಿಸಿ ಅಲ್ಲಾಹನ ಕ್ರೋಧದ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ."

ಪ್ರವಾದಿವರ್ಯರು ರೂಪಿಸಿ ಬೋಧಿಸಿದ ವ್ಯಾಪಾರ ನೀತಿಯಲ್ಲಿ ಹೇಗೋ ವ್ಯಾಪಾರ ಮಾಡಲಾಗದು. ನೀವು ಮನುಷ್ಯರನ್ನು ಮೋಸ ಮಾಡಬಹುದೇ ಹೊರತು, ಸೃಷ್ಟಿಕರ್ತನನ್ನಲ್ಲ ಎಂದು ಅವರು ಜನತೆಯನ್ನು ಸದಾ ಎಚ್ಚರಿಸುತ್ತಲೇ ಇದ್ದರು.

ದುಡಿಮೆಯೂ ಆರಾಧನೆ ಎಂದು  ವ್ಯಾಪಾರಕ್ಕೂ ಒಂದು ನ್ಯಾಯಯುತವಾದ ಮಾರ್ಗಸೂಚಿಯನ್ನು ರೂಪಿಸಿದ ಶ್ರೇಷ್ಠ ವ್ಯಾಪಾರ ತಜ್ಞ ರಾಗಿದ್ದರು ಪ್ರವಾದಿ (ಸ).

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News