ಜಗತ್ತಿನ ಅತ್ಯಂತ ಚಿಕ್ಕ, ಹಗುರ ಉಪಗ್ರಹ ನಿರ್ಮಿಸಿದ ತಮಿಳುನಾಡಿನ ವಿದ್ಯಾರ್ಥಿಗಳು

Update: 2020-10-29 09:08 GMT

ಹೊಸದಿಲ್ಲಿ: ತಮಿಳುನಾಡಿನ ಕರುರು ಜಿಲ್ಲೆಯ ಮೂವರು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಜಗತ್ತಿನ ಅತೀ ಚಿಕ್ಕದಾದ ಹಾಗೂ ಹಗುರವಾದ ಉಪಗ್ರಹವನ್ನು ಮುಂದಿನ ವರ್ಷದ ಜೂನ್ ತಿಂಗಳಲ್ಲಿ ನಾಸಾ ತನ್ನ ಗೊದ್ದರ್ ಸ್ಪೇಸ್ ಫ್ಲೈಟ್ ಸೆಂಟರ್ ನಿಂದ ಉಡಾವಣೆಗೊಳಿಸಲಿದೆ. ಅದ್ನಾನ್ ಎಂ, ಅರುಣ್ ವಿ ಹಾಗೂ ಕೇಶವನ್ ಎಂ ಎಂಬ ವಿದ್ಯಾರ್ಥಿಗಳು ತಯಾರಿಸಿರುವ ಈ 3 ಸೆಂ. ಮೀ  ಉಪಗ್ರಹದ ತೂಕ ಕೇವಲ 64 ಗ್ರಾಂ ಆಗಿದೆ.

ಈ ಟೆಕ್ನಾಲಜಿ ಡೆಮಾನ್ಸ್‍ಟ್ರೇಟರ್ ಉಪಗ್ರಹವನ್ನು 'ಇಂಡಿಯನ್ ಸ್ಯಾಟ್' ಎಂದು ಹೆಸರಿಸಲಾಗಿದೆ. ಅಮೆರಿಕಾ ಮೂಲದ ಸಂಸ್ಥೆ ಐಡೂಡ್ಲೆಡುಇಂಕ್  ಆಯೋಜಿಸಿದ್ದ 'ಕ್ಯೂಬ್ಸ್ ಇನ್ ಸ್ಪೇಸ್' ಎಂಬ ಸ್ಪರ್ಧೆಯಲ್ಲಿ ಸುಮಾರು 73 ದೇಶಗಳ 11ರಿಂದ 18 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದ 25,000 ಉಪಗ್ರಹಗಳ  ಪೈಕಿ 'ಇಂಡಿಯನ್ ಸ್ಯಾಟ್' ಆಯ್ಕೆಯಾಗಿತ್ತು.

ನಾಸಾದ ಗೊಡ್ಡರ್ಡ್ ಸ್ಪೇಸ್ ಫ್ಲೈಟ್ ಸೆಂಟರ್, ವಾಲ್ಲೊಪ್ಸ್ ಫ್ಲೈಟ್ ಫೆಸಿಲಿಟಿ, ನಾಸಾದ ಲಾಂಗ್ಲೆ ರಿಸರ್ಚ್ ಸೆಂಟರ್ ಹಾಗೂ ಕೊಲರೆಡೋ ಸ್ಪೇಸ್ ಗ್ರ್ಯಾಂಟ್ ಕನ್ಸಾರ್ಟಿಯಂ ಸಹಯೋಗದೊಂದಿಗೆ ಕ್ಯೂಬ್ಸ್ ಇನ್ ಸ್ಪೇಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಂಡಿಯನ್ ಸ್ಯಾಟ್ ವಿನ್ಯಾಸಗೊಳಿಸಿದ ಅದ್ನಾನ್ ಎಂ ಕರೂರಿನ ಸರಕಾರಿ ಆಟ್ರ್ಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿದ್ದರೆ ಅರುಣ್, ಮೂರನೇ ವರ್ಷದ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾನೆ. ಕೇಸವನ್ ಕೊಯಂಬತ್ತೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದವರಾಗಿದ್ದು ಈ ಯೋಜನೆಯಲ್ಲಿ ಟೆಸ್ಟಿಂಗ್ ಇಂಜಿನಿಯರ್ ಆಗಿ  ಕೆಲಸ ಮಾಡಿದ್ದಾರೆ. ಮೂವರೂ ಕೃಷಿ ಹಿನ್ನೆಲೆಯವರಾಗಿದ್ದಾರೆ.

ಈ ಉಪಗ್ರಹ ಅಭಿವೃದ್ಧಿ ಪಡಿಸಲು ಅವರು ರೂ. 70,000 ಹಣವನ್ನು ಸರಕಾರಿ ಆಟ್ರ್ಸ್ ಕಾಲೇಜು, ಶಿವ ಎಜುಕೇಶನಲ್ ಟ್ರಸ್ಟ್ ಹಾಗೂ ಅನಾಮಿಕ ದಾನಿಯೊಬ್ಬರಿಂದ ಪಡೆದಿದ್ದಾರೆ.

ಮೂವರೂ ಇದೀಗ ಆರ್ಬಿಟರ್ ಉಪಗ್ರಹ ನಿರ್ಮಾಣದತ್ತ ತಮ್ಮ ಗಮನ ಹರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News