'ಜಿಹಾದ್' ಕುರಿತ ಸುಧೀರ್ ಚೌಧರಿ ಕಾರ್ಯಕ್ರಮ ಕುರಿತಂತೆ ಝೀ ನ್ಯೂಸ್‍ಗೆ ಸಮನ್ಸ್

Update: 2020-10-29 10:55 GMT

ಹೊಸದಿಲ್ಲಿ: ಭಾರತದಲ್ಲಿ ಅನುಸರಿಸಲಾಗುತ್ತಿದೆ ಎಂದು ಹೇಳಿಕೊಂಡು ವಿವಿಧ ರೀತಿಯ 'ಜಿಹಾದ್' ಕುರಿತಾದ ವಿಶೇಷ ವರದಿಯೊಂದನ್ನು ಪ್ರಸಾರ ಮಾಡಿದ ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧುರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ದಾಖಲಿಸಿರುವ ದೂರಿನ ಆಧಾರದಲ್ಲಿ ನ್ಯೂಸ್ ಬ್ರಾಡ್‍ಕಾಸ್ಟ್ ಸ್ಟಾಂಡಡ್ರ್ಸ್ ಅಥಾರಿಟಿ ಆಫ್ ಇಂಡಿಯಾ 'ಝೀ ನ್ಯೂಸ್‍'ಗೆ ಸಮನ್ಸ್ ಜಾರಿಗೊಳಿಸಿದೆ. ನವೆಂಬರ್ 26ರಂದು ನಡೆಯಲಿರುವ ವಿಚಾರಣೆಗೆ ಸಂಸ್ಥೆಯ ಇಬ್ಬರು ಪ್ರತಿನಿಧಿಗಳು ಹಾಜರಿರಬೇಕು ತಪ್ಪಿದಲ್ಲಿ ಅವರ ಅನುಪಸ್ಥಿತಿಯಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ಝೀ ನ್ಯೂಸ್ ಈ ವರ್ಷದ ಮಾರ್ಚ್ 11ರಂದು ಪ್ರಸಾರ ಮಾಡಿದ ಕಾರ್ಯಕ್ರಮ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿತ್ತು ಹಾಗೂ  ದೇಶದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿತ್ತು ಎಂದು ಪ್ರಾಧಿಕಾರ ಕಂಡುಕೊಂಡಿದೆ ಎನ್ನಲಾಗಿದೆ. ನಿಷ್ಪಕ್ಷಪಾತತೆ ಹಾಗೂ ನ್ಯಾಯಯುತವಾಗಿ ವರದಿ ಮಾಡಬೇಕೆಂದು ಹೇಳುವ ಮೂಲಭೂತ ನಿಯಮಗಳನ್ನು ಹಾಗೂ ನೀತಿ ಸಂಹಿತೆಯನ್ನೂ ಈ ವರದಿ ಉಲ್ಲಂಘಿಸಿದೆ ಎಂದು ಪ್ರಾಧಿಕಾರ ಮೇಲ್ನೋಟಕ್ಕೆ ಕಂಡುಕೊಂಡಿದೆ.

ಈ ವರದಿಯಲ್ಲಿ  ಭಾರತದಲ್ಲಿ ಅನುಸರಿಸಲಾಗುತ್ತಿದೆಯೆನ್ನಲಾದ ವಿವಿಧ ರೀತಿಯ ಜಿಹಾದ್ ಕುರಿತಂತೆ  ಹೇಳಲಾದ ಸಂಗತಿಗಳು ಹಾಗೂ ರೇಖಾಕೃತಿ (ಡಯಾಗ್ರಮ್) ಮೂಲಕ ನೀಡಲಾದ ವಿವರಣೆ ದೇಶದಲ್ಲಿ ಮುಸ್ಲಿಂ ಸಮಾಜವನ್ನು ಮತ್ತಷ್ಟು ಪ್ರತ್ಯೇಕಿಸುವ ಗುರಿ ಹೊಂದಿದೆ ಎಂದೂ ಪ್ರಾಧಿಕಾರ ಅಭಿಪ್ರಾಯ ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News