ಆರ್‌ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣ: ಮಾಜಿ ಕಾರ್ಪೊರೇಟರ್ ಸೇರಿ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2020-10-29 12:31 GMT

ಬೆಂಗಳೂರು, ಅ.29: ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದ ನ್ಯಾಯಾಲಯ ಗುರುವಾರ ಎಲ್ಲ 12 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ನಗರದ 59ನೆ ಸಿಸಿಎಚ್ ಕೋರ್ಟ್ ನ್ಯಾಯಾಧೀಶ ಲಕ್ಷ್ಮೀ ನಾರಾಯಣ ಅವರು, ಮಾಜಿ ಕಾರ್ಪೊರೇಟರ್ ಗೌರಮ್ಮ, ಪತಿ ಗೋವಿಂದರಾಜು ಸೇರಿ ಎಲ್ಲ ಆರೋಪಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಕೃತ್ಯ ತನಿಖೆ ಹಾಗೂ ವಿಚಾರಣೆಯಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಎಲ್ಲ ಆರೋಪಿಗಳಿಗೂ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗೌರಮ್ಮ, ಪತಿ ಗೋವಿಂದರಾಜು, ರಂಗಸ್ವಾಮಿ, ಶಂಕರ್, ರಾಘವೇಂದ್ರ, ಚಂದ್ರ, ಶಂಕರ, ಉಮಾಶಂಕರ್, ವೇಲು, ಲೋಗನಾಥ, ಜಾಹೀರ್ ಹಾಗೂ ಸುರೇಶ್ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು. 

ಪ್ರಕರಣವೇನು: ಲಿಂಗರಾಜು ಅವರು ಮಾಹಿತಿ ಹಕ್ಕು ಅಡಿ ದಾಖಲೆಗಳನ್ನು ತೆಗೆದು ತನಿಖಾ ಸಂಸ್ಥೆಗಳಿಗೆ ದೂರು ನೀಡುತ್ತಿದ್ದರು. ಗೋವಿಂದರಾಜು ಅವರ ಜೊತೆಗೆ ಸ್ನೇಹದಿಂದ ಇದ್ದರೂ ಅವರ ಭೂ ಅಕ್ರಮ ಕುರಿತು ಲಿಂಗರಾಜು 2010ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬಗ್ಗೆ ಮಾತುಕತೆ ರಾಜಿಗೆ ಗೋವಿಂದರಾಜು ಯತ್ನಿಸಿ ವಿಫಲರಾದಾಗ, ಲಿಂಗರಾಜುಗೆ ಬೆದರಿಕೆ ಹಾಕಿದ್ದರು. ಗೋವಿಂದರಾಜು ಬೆದರಿಕೆ ಹಾಕಿರುವ ಬಗ್ಗೆ ಲಿಂಗರಾಜು ವಕೀಲ ಧ್ರುವಕುಮಾರ್ ಅವರಿಂದ ಪ್ರಮಾಣ ಪತ್ರ ಕೂಡ ಮಾಡಿಸಿದ್ದರು.

ಅಜಾದ್ ನಗರ ಕಾರ್ಪೊರೇಟರ್ ಗೌರಮ್ಮ ಮತ್ತು ಗೋವಿಂದರಾಜು ಅವರ ಅಕ್ರಮ ಸಂಪತ್ತಿನ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಪೊರೇಟರ್ ಗೌರಮ್ಮ ಮತ್ತು ಗೋವಿಂದರಾಜು ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸು ದಾಖಲಿಸಿ ದಾಳಿ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು. ಇದಾದ ಕೆಲವೇ ದಿನಗಳ ಬಳಿಕ ದೂರುದಾರ ಲಿಂಗರಾಜು ಅವರನ್ನು ವಿಠ್ಠಲ್ ನಗರದ ಅವರ ನಿವಾಸದ ಎದುರಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿ.ಜೆ.ಸೇನ್ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಘಟನೆಯ ನಿಷ್ಪಕ್ಷಪಾತ ತನಿಖೆಗೆ ಸೂಚಿಸಿತ್ತು. ಜತೆಗೆ ಸರಕಾರದ ಒಪ್ಪಿಗೆ ಮೇರೆಗೆ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಹಾಗೂ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿತ್ತು.   

ಈ ದೋಷಾರೋಪ ಪಟ್ಟಿಯಲ್ಲಿ ಅಜಾದ್ ನಗರ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು ಸೇರಿ ಲಿಂಗರಾಜು ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂದು ಹೆಸರನ್ನು ನಮೂದಿಸಿದ್ದರು. 

‘ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ 12 ಮಂದಿ ಆರೋಪಿಗಳಿಗೆ ನ್ಯಾಯಪೀಠವು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ತನಿಖೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದವನ್ನು ತಿಳಿಸುತ್ತೇನೆ.’
-ಅಬ್ದುಲ್ ಅಹದ್, ಐಪಿಎಸ್ ಅಧಿಕಾರಿ, ವಿಶೇಷ ತನಿಖಾ ತಂಡದ ಸದಸ್ಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News