ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಗುಂಡಿಕ್ಕಿ ಹತ್ಯೆ

Update: 2020-10-30 03:33 GMT

ಶ್ರೀನಗರ, ಅ.30: ಜಿಲ್ಲಾ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಭಾರತೀಯ ಜನತಾ ಪಕ್ಷದ ಮೂರು ಮಂದಿ ಕಾರ್ಯಕರ್ತರನ್ನು ಶಂಕಿತ ಉಗ್ರರು ದಕ್ಷಿಣ ಕಾಶ್ಮೀರದ ಕುಲುಗಾಂನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮೃತರಲ್ಲಿ ಕುಲುಗಾಂ ಬಿಜೆಪಿ ಯುವ ಘಟಕದ ಪದಾಧಿಕಾರಿ ಫಿದಾ ಹುಸೈನ್ ಯಾತೂ ಮತ್ತು ಸಹ ಕಾರ್ಯಕರ್ತರಾದ ಉಮರ್ ರಶೀದ್ ಬೇಗ್ ಹಾಗೂ ಉಮರ್ ರಮ್ಝಾನ್ ಹಜಮ್ ಸೇರಿದ್ದಾರೆ. ರಾತ್ರಿ 8:20ರ ವೇಳೆಗೆ ಖಾಝಿಗುಂಡ್ ಗ್ರಾಮದ ವೈ.ಕೆ.ಪುರದಲ್ಲಿ ಈ ದಾಳಿ ನಡೆದಿದೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಪ್ರಕಟಿಸಿದ್ದಾರೆ. ಮೂವರೂ ಖಾಝಿಗುಂಡ್ ತುರ್ತು ಆಸ್ಪತ್ರೆಗೆ ಮೃತ ಸ್ಥಿತಿಯಲ್ಲಿ ತರಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಅಸೀಮಾ ನಝೀರ್ ಹೇಳಿದ್ದಾರೆ.

ಬಂಡೀಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶೇಕ್ ವಸೀಮ್ ಬಾರಿ ಅವರ ತಂದೆ ಮತ್ತು ಸಹೋದರನನ್ನು ಜುಲೈನಲ್ಲಿ ಹತ್ಯೆ ಮಾಡಿದಾಗಿನಿಂದ ಈ ವರ್ಷ ಇದುವರೆಗೆ ಒಂಬತ್ತು ಮಂದಿ ಬಿಜೆಪಿ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಯಾವುದೇ ಉಗ್ರ ಸಂಘಟನೆ ಈ ಹತ್ಯೆಯ ಹೊಣೆ ಹೊತ್ತಿಲ್ಲ. ಕಳೆದ ಜೂನ್‌ನಿಂದೀಚೆಗೆ ಉಗ್ರ ಸಂಘಟನೆಗಳು ವಿವಿಧ ಪಕ್ಷಗಳ ತಳಮಟ್ಟದ ಕಾರ್ಯಕರ್ತರನ್ನು ಗುರಿಯಾಗಿಸಿವೆ.

ಜೂನ್ 8ರಂದು ಕಾಂಗ್ರೆಸ್ ಸರಪಂಚ ಅಜಯ್ ಪಂಡಿತ ಅವರನ್ನು ಅನಂತ್‌ನಾಗ್‌ನಲ್ಲಿ ಹತ್ಯೆ ಮಾಡಿದ ಬಳಿಕ ಬಿಜೆಪಿಗೂ ಉಗ್ರದಾಳಿ ತಟ್ಟಿದೆ. ಜೆಇಎಂ ಮತ್ತು ಎಲ್‌ಇಟಿ ದಾಳಿಯ ಭೀತಿ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆಗಸ್ಟ್‌ನಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸರಪಂಚರನ್ನು ಮತ್ತು ಕಾರ್ಯಕರ್ತರನ್ನು ದಕ್ಷಿಣ ಕಾಶ್ಮೀರದಲ್ಲಿ ಸುರಕ್ಷಿತ ಮನೆಗಳಿಗೆ ಸ್ಥಳಾಂತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News