100ಕ್ಕೂ ಹೆಚ್ಚು ಕೊರೋನ ಸೋಂಕಿತರ ಅಂತ್ಯಕ್ರಿಯೆ ನಡೆಸಿದ ಪಾಪನಾಯ್ಕ್ 'ಕೊರೋನ ಯೋಧ' ಅಲ್ಲ !

Update: 2020-10-30 16:03 GMT

ಶಿವಮೊಗ್ಗ: ಕೊರೋನ ಸೋಂಕಿನ ಜೊತೆ ಹೋರಾಡಿ ಬದುಕು ಮುಗಿಸಿದವರ 100ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆ ನೆರವೇರಿಸಿದ ವ್ಯಕ್ತಿಯೊಬ್ಬರು ಅದೇ ಕೊರೋನ ಸೋಂಕಿಗೆ ತುತ್ತಾಗಿ ತನ್ನ ಬದುಕಿನ ಬಂಡಿಯನ್ನು ಮುಗಿಸಿದ್ದಾರೆ. ಆದರೂ ಅವರು 'ಕೊರೋನ ವಾರಿಯರ್' ಅಗಿ ಗುರುತಿಸಿಕೊಂಡಿಲ್ಲ.

ಹೌದು, ಇದು ಶಿವಮೊಗ್ಗದಲ್ಲಿ ಇತ್ತೀಚೆಗೆ ಕೊರೋನದಿಂದ ಮೃತಪಟ್ಟ ಅನಿಲ ಚಿತಾಗಾರದ ಹೊರಗುತ್ತಿಗೆ ನೌಕರ ಪಾಪನಾಯ್ಕ್(38)ರ ಕಥೆ. ವರ್ಷದ ಹಿಂದೆ ಶಿವಮೊಗ್ಗದ ಅನಿಲ ಚಿತಾಗಾರದಲ್ಲಿ ಪಾಪನಾಯ್ಕ್ ಹೊರ ಗುತ್ತಿಗೆ ಆಧಾರದದಲ್ಲಿ ನೇಮಕವಾಗಿದ್ದರು. ತಿಂಗಳಿಗೆ 14 ಸಾವಿರ ರೂಪಾಯಿ ಸಂಬಳ ಪಡೆದು ಅನುಕೂಲಕರ ಜೀವನ ನಡೆಸಬಹುದು ಅನ್ನೋದು ಇವರ ಕುಟುಂಬದ ಲೆಕ್ಕಾಚಾರವಾಗಿತ್ತು. ಇವರ ಇಬ್ಬರೂ ಮಕ್ಕಳು ದಿವ್ಯಾಂಗರಾಗಿದ್ದರಿಂದ ಅವರ ಚಿಕಿತ್ಸೆ ಕೂಡ ಮಾಡಿಸಬೇಕು ಎಂದು ಪಾಪನಾಯ್ಕ್ ಶ್ರಮಿಸುತ್ತಿದ್ದರು.

ಕೊರೋನದಿಂದಾಗಿ ಜಿಲ್ಲೆಯಲ್ಲಿ ಪ್ರತಿ ದಿನ ಮೃತಪಡುತ್ತಿದ್ದ ಸೋಂಕಿತರ ಪೈಕಿ ಮೂರ್ನಾಲ್ಕು ಮಂದಿಯನ್ನಾದರೂ ಅನಿಲ ಚಿತಾಗಾರದಲ್ಲಿ ಸುಡಲಾಗುತ್ತಿತ್ತು. ಇದರ ಕ್ರಿಯೆಯನ್ನು ಇವರೇ ಮಾಡುತ್ತಿದ್ದರು. ಹೀಗೆ ಸೋಂಕು ಶುರುವಾದಾಗಿನಿಂದ ಪಾಪನಾಯ್ಕ್ ಸುಮಾರು 100ಕ್ಕೂ ಹೆಚ್ಚು ಶವಗಳ ದಹನ ಕಾರ್ಯ ಮಾಡಿದ್ದಾರೆ. ಆದರೆ ಅದೇ ಕಾರ್ಯ ಅವರ ಜೀವಕ್ಕೆ ಮುಳುವಾಯಿತು. ಪಾಪನಾಯಕ ಸೆ.13ರಂದು ಕೊರೋನ ಸೋಂಕಿನಿಂದ ಮೃತಪಟ್ಟರು.

'ಕೊರೋನ ವಾರಿಯರ್' ಅಲ್ಲ:
ಪಾಪನಾಯ್ಕ್ ಹೊರಗುತ್ತಿಗೆ ನೌಕರನಾಗಿರುವ ಕಾರಣ ಅವರನ್ನು ಕೊರೋನ ವಾರಿಯರ್ ಎಂದು ಪರಿಗಣಿಸಿಲ್ಲ. ಸರ್ಕಾರದ ಕೆಲ ನಿಯಮಾವಳಿಗಳು ಇವರನ್ನು ಕೊರೋನ ವಾರಿಯರ್ ಎಂದು ಘೋಷಿಸುವಲ್ಲಿ ಅಡ್ಡಿಯಾಗುತ್ತಿವೆ. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಪಾಪನಾಯ್ಕ್ ಪತ್ನಿ ಸವಿತಾಗೆ 3 ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಿದೆ. ಆದರೆ ಈವರೆಗೂ ಉದ್ಯೋಗ ಸಿಕ್ಕಿಲ್ಲ ಎನ್ನಲಾಗಿದೆ.

ಒಬ್ಬಂಟಿಯಾದ ಪತ್ನಿ
ತಿಂಗಳಿಗೆ 14 ಸಾವಿರ ರೂಪಾಯಿ ಸಂಬಳ ಪಡೆದು ಜೀವನ ನಡೆಸುತ್ತಿದ್ದ ಪಾಪನಾಯ್ಕ್ ಕುಟುಂಬ ಈಗ ಅಕ್ಷರಶಃ ನಲುಗಿ ಹೋಗಿದೆ. ಸಂಸಾರದ ಆಧಾರ ಸ್ತಂಭವೇ ಕಳಚಿ ಹೋಗಿರುವುದು ಪತ್ನಿ ಸವಿತಾರಲ್ಲಿ ದಿಗಿಲು ಹುಟ್ಟಿಸಿದೆ. ದಿವ್ಯಾಂಗರಾಗಿದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಸಾಕಷ್ಟು ನೊಂದಿದ್ದ ಸವಿತಾ ಈಗ ಪತಿ ಪಾಪನಾಯ್ಕ್‌ರನ್ನು ಕಳೆದುಕೊಂಡು ದಿಕ್ಕುತೋಚದಂತಾಗಿದ್ದಾರೆ. ಪತಿ, ಮಕ್ಕಳನ್ನೂ ಕಳೆದುಕೊಂಡ ಪತ್ನಿ ಜೀವನ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ.

ವಿಶೇಷ ಪ್ರಕರಣವೆಂದು ಪರಿಗಣಿಸಲು ಆಗ್ರಹ
ಕೊರೋನ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡಿ ತಾನು ಪ್ರಾಣ ಕಳೆದುಕೊಂಡ ಕೊರೋನ ವಾರಿಯರ್ ಪಾಪಾನಾಯ್ಕ್ ಪ್ರಕರಣವನ್ನು ಸರ್ಕಾರ ವಿಶೇಷ ಪ್ರಕರಣ ಎಂದು ಗುರುತಿಸಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಪಾಪನಾಯ್ಕ್ ಕುಟುಂಬಕ್ಕೆ ಸರ್ಕಾರ ನೀಡಬೇಕು. ಪಾಪಾನಾಯ್ಕ್‌ರನ್ನು ಕೊರೋನ ವಾರಿಯರ್ಸ್ ಎಂದು ಘೋಷಣೆ ಮಾಡುವ ಮೂಲಕ ಸರ್ಕಾರ ಒಂಟಿ ಹೆಣ್ಣುಮಗಳ ಬೆನ್ನಿಗೆ ನಿಲ್ಲಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸರ್ಕಾರ ಕೋವಿಡ್-19 ಸೇವೆಯಲ್ಲಿ ತೊಡಗಿಸಿಕೊಂಡ ಸರ್ಕಾರಿ ನೌಕರರನ್ನು ಮಾತ್ರ ಕೊರೋನ ವಾರಿಯರ್ ಎಂದು ಗುರುತಿಸಿ ಜೀವಹಾನಿಯಾದರೆ ಸರ್ಕಾರಿ ವಿಶೇಷ ಸೌಲಭ್ಯ ನೀಡುತ್ತಿದೆ. ಆದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೋವಿಡ್ ಸೇವೆ ಸಲ್ಲಿಸುತ್ತಿರುವ ನೌಕರರು ಮಾತ್ರ ಜೀವಹಾನಿಯಾದರೆ ಅಂತಹವರನ್ನು ಕೊರೋನ ವಾರಿಯರ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಸರ್ಕಾರದ ನಿಯಮ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬತಾಗಿದೆ. ಹೊರಗುತ್ತಿಗೆ ನೌಕರರಾಗಿ ಕೋವಿಡ್ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಸರ್ಕಾರ ಕೊರೋನ ವಾರಿಯರ್ ಎಂದು ಗುರುತಿಸಿ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯವನ್ನು ಇವರಿಗೂ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪಾಪನಾಯ್ಕ್ ಹೊರಗುತ್ತಿಗೆ ನೌಕರನಾಗಿರುವ ಕಾರಣ ಅವನನ್ನು ಕೊರೋನ ವಾರಿಯರ್ ಅಲ್ಲ ಎಂದು ಪರಿಗಣಿಸಿಲ್ಲ. ಸರ್ಕಾರದ ಕೆಲ ನಿಯಮಾವಳಿಗಳು ಇವರನ್ನು ಕೊರೋನ ವಾರಿಯರ್ ಎಂದು ಘೋಷಿಸುವಲ್ಲಿ ಅಡ್ಡಿಯಾಗುತ್ತಿವೆ. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಪಾಪನಾಯ್ಕ್ ಪತ್ನಿ ಸವಿತಾಗೆ 3 ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಿದೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಚಿದಾನಂದ ಎಸ್.ವಟಾರೆ, ಆಯಕ್ತರು, ಮಹಾನಗರ ಪಾಲಿಕೆ

ಸರ್ಕಾರದ ಕೆಲ ನಿಯಮಾವಳಿಗಳು ಇವರನ್ನು ಕೊರೋನ ವಾರಿಯರ್ ಎಂದು ಘೋಷಿಸುವಲ್ಲಿ ಅಡ್ಡಿಯಾಗುತ್ತಿವೆ. ಆದರೆ ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಪತಿಯನ್ನು ಕೊರೋನ ವಾರಿಯರ್ ಎಂದು ಪರಿಗಣಿಸಬೇಕು. ಗಂಡ, ಮಕ್ಕಳಿಲ್ಲದ ಒಂಟಿ ಜೀವಕ್ಕೆ ಆಸರೆ ಕಲ್ಪಿಸಬೇಕು.
-ಸವಿತಾ, ಪಾಪನಾಯ್ಕ್ ಪತ್ನಿ

Writer - ಶರತ್ ಕುಮಾರ್

contributor

Editor - ಶರತ್ ಕುಮಾರ್

contributor

Similar News