ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಈ ಖ್ಯಾತ ನಟಿ ನಾಮಕರಣ ?

Update: 2020-10-31 04:48 GMT

ಮುಂಬೈ : ಶಿವಸೇನೆ ನೇತೃತ್ವದ ರಾಜ್ಯ ಸರ್ಕಾರ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ನಾಮಕರಣ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ 12 ಮಂದಿಯನ್ನು ರಾಜ್ಯಪಾಲರು ವಿಧಾನ ಪರಿಷತ್ತಿಗೆ ನಾಮಕರಣ ಮಾಡಲಿದ್ದು, ಇರದಲ್ಲಿ ಮಾತೋಂಡ್ಕರ್ ಅವರ ಹೆಸರೂ ಸೇರಿರುತ್ತದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

"ವಿಧಾನ ಪರಿಷತ್ತಿಗೆ ಸರ್ಕಾರ ಊರ್ಮಿಳಾ ಮಾತೋಂಡ್ಕರ್ ಅವರನ್ನು ನೇಮಕ ಮಾಡಲಿದೆ ಎಂಬ ವದಂತಿಗಳನ್ನು ನಾನೂ ಕೇಳಿದ್ದೇನೆ. ಇದು ರಾಜ್ಯ ಸಚಿವ ಸಂಪುಟದ ವಿಶೇಷಾಧಿಕಾರ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಸಂಪುಟ ನೀಡಿದೆ" ಎಂದು ರಾಜ್ಯಸಭಾ ಸದಸ್ಯ ಮತ್ತು ಶಿವಸೇನೆಯ ಮುಖ್ಯ ವಕ್ತಾರರಾದ ಅವರು ಹೇಳಿದ್ದಾರೆ.

ಊರ್ಮಿಳಾ (46) ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ ಪಕ್ಷದ ಗುಂಪುಗಾರಿಕೆ ವಿರುದ್ಧ ಹಾಗೂ ತಮ್ಮದೇ ಪಕ್ಷದ ಅಭ್ಯರ್ಥಿಯ ವಿರುದ್ಧ ಕಾಂಗ್ರೆಸ್‌ನಲ್ಲಿ ಪಿತೂರಿ ನಡೆಸಲಾಗಿದೆ ಎಂದು ಆಪಾದಿಸಿ ಪಕ್ಷದಿಂದ ಹೊರಬಂದಿದ್ದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ಸಂಘರ್ಷಕ್ಕೆ ಇಳಿದಿದ್ದ ಮತ್ತೊಬ್ಬ ನಟಿ ಕಂಗನಾ ರಾಣಾವತ್ ವಿರುದ್ಧ ಮಾತೋಂಡ್ಕರ್ ಇತ್ತೀಚೆಗೆ ಕಿಡಿ ಕಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News