ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಖಬೀಬ್ ತೀವ್ರ ವಾಗ್ದಾಳಿ

Update: 2020-10-31 05:54 GMT

ಪ್ಯಾರಿಸ್: ಇತ್ತೀಚೆಗೆ ಫ್ರಾನ್ಸ್ ದೇಶದಲ್ಲಿ ನಡೆದ ಉಗ್ರ ದಾಳಿಗಳ ನಂತರ ಅಲ್ಲಿನ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಅವರು ನೀಡಿರುವ ಹೇಳಿಕೆಗಳನ್ನು ವಿರೋಧಿಸಿ ನಿವೃತ್ತ ಯುಎಫ್‍ಸಿ ಸೂಪರ್ ಸ್ಟಾರ್ ಖಬೀಬ್ ನೂರ್ ಮೊಹಮದೊವ್ ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿದ್ದಾರೆ. "ಆ ಪರಮಾತ್ಮ ಈ ಜೀವಿಯ ಮುಖವನ್ನು ವಿರೂಪಗೊಳಿಸಲಿ,'' ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ದಗೆಸ್ತಾನ್ ಗಣರಾಜ್ಯದವರಾಗಿರುವ ಖಬೀಬ್ ಅವರು ಶುಕ್ರವಾರ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ಫ್ರಾನ್ಸ್ ಅಧ್ಯಕ್ಷರ ಚಿತ್ರವೊಂದನ್ನೂ  ಹಾಕಿದ್ದಾರೆ. ಅದರಲ್ಲಿ ಮ್ಯಾಕ್ರೋನ್ ಮುಖದಲ್ಲಿ ಬೂಟುಗಾಲಿನ ಅಚ್ಚು ಕೂಡ ಕಾಣಿಸುತ್ತದೆ. ರಷ್ಯನ್ ಮತ್ತು ಅರೆಬಿಕ್ ಭಾಷೆಯಲ್ಲಿ ಬರೆದಿರುವ ತಮ್ಮ ಪೋಸ್ಟ್ ನಲ್ಲಿ ಅವರು ಕುರ್ ಆನ್ ಅನ್ನೂ ಉಲ್ಲೇಖಿಸಿದ್ದಾರೆ.

"ವಾಕ್ ಸ್ವಾತಂತ್ರ್ಯದ ಘೋಷಣೆ ಮಾಡಿಕೊಂಡು ಒಂದೂವರೆ ಬಿಲಿಯನ್‍ಗೂ ಅಧಿಕ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿರುವ ಈ ಜೀವಿ ಮತ್ತಾತನ ಎಲ್ಲಾ ಅನುಯಾಯಿಗಳ ಮುಖವನ್ನು ಪರಮಾತ್ರ ವಿರೂಪಗೊಳಿಸಲಿ, ಪರಮಾತ್ಮ ಅವರಿಗೆ ಈ ಜೀವನ ಹಾಗೂ ಮುಂದಿನ ಜೀವನದಲ್ಲಿ ಅವಮಾನಿಸಲಿ. ಅಲ್ಲಾಹ್ ಲೆಕ್ಕಾಚಾರದಲ್ಲಿ ಚುರುಕಾಗಿದ್ದಾರೆ ನೀವು ಅದನ್ನು ನೋಡುತ್ತೀರಿ,'' ಎಂದು ಖಬೀಬ್ ಬರೆದಿದ್ದಾರೆ.

"ನಾವು ಮುಸ್ಲಿಮರು, ನಾವು ಪ್ರವಾದಿ ಮುಹಮ್ಮದ್ ಅವರನ್ನು ನಮ್ಮ ತಾಯಿ, ತಂದೆ, ಮಕ್ಕಳು, ಪತ್ನಿ ಹಾಗೂ ನಮ್ಮ ಹೃದಯಕ್ಕೆ ಹತ್ತಿರವಾದ ಎಲ್ಲರಿಗಿಂತಲೂ ಅಧಿಕವಾಗಿ ಪ್ರೀತಿಸುತ್ತೇವೆ. ನನ್ನನ್ನು ನಂಬಿ,  ಈ ರೀತಿಯ ಪ್ರಚೋದನೆಗಳು ಅವರಿಗೇ ತಿರುಗಿ ಬೀಳಲಿದೆ, ಕೊನೆಗೆ ದೇವರ ಮೇಲೆ ಭಯ-ಭಕ್ತಿ ಹೊಂದಿರುವವರಿಗೆ ಒಳ್ಳೆಯದಾಗಲಿದೆ,'' ಎಂದೂ ಬರೆದಿರುವ ಅವರು ಕುರ್ ಆನ್ನ 33:57 ಭಾಗವನ್ನೂ ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಖಬೀಬ್ ಅವರ ಇನ್‍ಸ್ಟಾಗ್ರಾಂ ಪೋಸ್ಟ್ ಗೆ ಅದು ಪ್ರಕಟಗೊಂಡ ಒಂದು ಗಂಟೆಯೊಳಗಾಗಿ 8 ಲಕ್ಷಕ್ಕೂ ಅಧಿಕ ಮಂದಿಯಿಂದ ಲೈಕ್ ದೊರಕಿದೆ. ಖಬೀಬ್ ಅವರಿಗೆ ಇನ್‍ಸ್ಟಾಗ್ರಾಂನಲ್ಲಿ 25 ಮಿಲಿಯನ್ ಅನುಯಾಯಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News