ಐರ್ಲೆಂಡ್‍ನಲ್ಲಿ ಮೈಸೂರು ಮೂಲದ ಮಹಿಳೆ, ಇಬ್ಬರು ಮಕ್ಕಳ ಹತ್ಯೆ

Update: 2020-10-31 11:50 GMT
Photo: Twitter

ಡಬ್ಲಿನ್: ಮೈಸೂರು ಮೂಲದ 37 ವರ್ಷದ ಮಹಿಳೆ ಮತ್ತಾಕೆಯ ಇಬ್ಬರು ಮಕ್ಕಳನ್ನು ದಕ್ಷಿಣ ಡಬ್ಲಿನ್‍ನ ಉಪನಗರಿ ಬಲ್ಲಿಂಟೀರ್ ಎಂಬಲ್ಲಿನ ಲೈವೆಲ್ಲೆನ್ ಕೋರ್ಟ್ ನಲ್ಲಿರುವ ಅವರ ನಿವಾಸದಲ್ಲಿ ಹತ್ಯೆಗೈದಿರುವುದು ಪತ್ತೆಯಾಗಿದೆ. 

ಮೃತರನ್ನು ಸೀಮಾ ಬಾನು ಸಯ್ಯದ್, ಆಕೆಯ ಪುತ್ರಿ, 11 ವರ್ಷದ ಅಸ್ಫಿರಾ ರಿಝಾ ಹಾಗೂ ಆರು ವರ್ಷದ ಪುತ್ರ ಫೈಝನ್ ಸಯ್ಯದ್ ಎಂದು ಗುರುತಿಸಲಾಗಿದೆ. ಅವರು ಮೃತಪಟ್ಟು ಕನಿಷ್ಠ ಐದು ದಿನಗಳಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಮಹಿಳೆಯ ಪತಿ ಸಮೀರ್ ಸಯ್ಯದ್ ಊರಿನಲ್ಲಿರಲಿಲ್ಲವೆಂದು ಹೇಳಲಾಗಿದೆ.

ಮನೆಯವರು ಹೊರಗೆ ಕಾಣಿಸುತ್ತಿಲ್ಲ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಕೊಲೆ ಬೆಳಕಿಗೆ ಬಂದಿತ್ತು.

ಈ ಹಿಂದೆ ದುಬೈಯಲ್ಲಿ ವಾಸಿಸುತ್ತಿದ್ದ ಕುಟುಂಬ ಈ ವರ್ಷ ಸಮೀರ್ ಗೆ ಐರ್ಲೆಂಡ್‍ನಲ್ಲಿ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಇಲ್ಲಿಗೆ ಆಗಮಿಸಿತ್ತು.

ಮೂವರ ಕುತ್ತಿಗೆಯಲ್ಲೂ ಗಾಯದ ಗುರುತುಗಳಿವೆ. ಈ ವರ್ಷದ ಮೇ ತಿಂಗಳಲ್ಲಿ ಸೀಮಾ ಮೇಲೆ ಹಲ್ಲೆ ನಡೆದಿತ್ತೆನ್ನಲಾಗಿದ್ದು ಈ ಪ್ರಕರಣದ ವಿಚಾರಣೆ ಮುಂದಿನ ವರ್ಷದ ಎಪ್ರಿಲ್ ತಿಂಗಳಲ್ಲಿ ನಡೆಯಲಿತ್ತು.

ಕೊಲೆ ಪ್ರಕರಣದಲ್ಲಿ ಶಂಕಿತ ಹಾಗೂ ಕುಟುಂಬದ ಪರಿಚಯದ ವ್ಯಕ್ತಿಯೊಬ್ಬನ ಭಾವಚಿತ್ರ ಬಿಡುಗಡೆಗೊಳಿಸಿದ್ದ ಪೊಲೀಸರು ಆತನನ್ನು ಕಂಡರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದ್ದರೂ ಆ 30 ವರ್ಷದ ವ್ಯಕ್ತಿ ತಾನಾಗಿಯೇ ಪೊಲೀಸ್ ಠಾಣೆಗೆ ಹಾಜರಾಗಿದ್ದು ಆತನ ವಿಚಾರಣೆ ನಡೆಸಲಾಗುತ್ತಿದೆ.

ತರುವಾಯ ಮೈಸೂರಿನಲ್ಲಿರುವ ಸೀಮಾ ಕುಟುಂಬ ಮೃತದೇಹಗಳನ್ನು ಊರಿಗೆ ತರಲು ಸಹಾಯ ಮಾಡುವಂತೆ ಭಾರತೀಯ ದೂತಾವಾಸಕ್ಕೆ ಮನವಿ ಮಾಡಿದೆಯಲ್ಲದೆ, ಇದಕ್ಕೆ ತಗಲುವ ರೂ. 15 ಲಕ್ಷ  ಭರಿಸುವ ಸಾಮರ್ಥ್ಯ ತಮ್ಮಲ್ಲಿಲ್ಲ ಎಂದು ಹೇಳಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News