ಉಪಚುನಾವಣೆ ಮತದಾನ: ಶಿರಾದಲ್ಲಿ ಉತ್ಸಾಹ, ಆರ್.ಆರ್. ನಗರದಲ್ಲಿ ನೀರಸ

Update: 2020-11-03 16:18 GMT

ಬೆಂಗಳೂರು, ನ.3: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಮತದಾನ ಬಿರುಸಿನಿಂದಲೇ ಸಾಗಿತು. ಆದರೆ, ಶಿರಾ ಕ್ಷೇತ್ರದ ಮತದಾರರ ಉತ್ಸಾಹ, ಆರ್.ಆರ್.ನಗರ ಕ್ಷೇತ್ರದಲ್ಲಿ ಅಷ್ಟಾಗಿ ಕಂಡುಬರಲಿಲ್ಲ.

ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಯಿತು. ಶಿರಾ ಪಟ್ಟಣ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಬೆಳಗ್ಗೆಯಿಂದಲೆ ಮತದಾರರು ಮತಗಟ್ಟೆಗಳತ್ತ ಧಾವಿಸಿ ತಮ್ಮ ಹಕ್ಕು ಚಲಾಯಿಸಿದರು. ಆದರೆ, ಅತ್ಯಂತ ಹೆಚ್ಚು ಮತದಾರರಿದ್ದರೂ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾರರಿಂದ ಯಾವುದೇ ರೀತಿಯ ಉತ್ಸಾಹ ಕಂಡುಬರಲಿಲ್ಲ. ಮತದಾನ ಮುಕ್ತಾಯದ ವೇಳೆಗೆ ಶಿರಾ ಕ್ಷೇತ್ರದಲ್ಲಿ ಶೇ.82.31ರಷ್ಟು ಮತದಾನವಾಗಿದ್ದರೆ, ಆರ್.ಆರ್.ನಗರದಲ್ಲಿ ಅತ್ಯಂತ ಕಡಿಮೆ ಶೇ.45.24ರಷ್ಟು ಮತದಾನವಾಗಿದೆ.

ಆರ್.ಆರ್.ನಗರ ಕ್ಷೇತ್ರದಲ್ಲಿ 2013ರಲ್ಲಿ ಶೇ.56.80, 2015ರಲ್ಲಿ ಶೇ.50.17 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ.54.34ರಷ್ಟು, 2019ರ ಲೋಕಸಭಾ ಚುನಾವಣೆಯಲ್ಲಿಯೂ ಶೇ.53.65ರಷ್ಟು ಮತದಾನವಾಗಿತ್ತು. ಆದರೆ, ಈ ಉಪಚುನಾವಣೆಯಲ್ಲಿ ಅತ್ಯಂತ ಕಡಿಮೆ ಶೇ.45.24ರಷ್ಟು ಮತದಾನವಾಗಿದೆ. ಮತದಾನ ಕೊರತೆಗೆ ಹಲವು ರೀತಿಯ ವಿಶ್ಲೇಷಣೆಗಳು ನಡೆಯುತ್ತಿವೆ.

ಶಿರಾ ಕ್ಷೇತ್ರದಲ್ಲಿ ಬೆಳಗ್ಗೆ 9ಗಂಟೆ ವೇಳೆಗೆ ಶೇ.8.25, 11 ಗಂಟೆಯ ಸುಮಾರಿಗೆ ಶೇ.23.63, 1 ಗಂಟೆಗೆ-ಶೇ.44.13 ಹಾಗೂ ಮಧ್ಯಾಹ್ನ 3 ಗಂಟೆಗೆ ಶೇ.62.1, ಸಂಜೆ 5 ಗಂಟೆಯ ವೇಳೆಗೆ ಶೇ.77.34ರಷ್ಟು, ಮತದಾನ ಮುಕ್ತಾಯದ ವೇಳೆ ಶೇ.82.31ರಷ್ಟು ಮತದಾನ ನಡೆಸಿದೆ. ಇತ್ತ ಆರ್.ಆರ್.ನಗರ ಕ್ಷೇತ್ರದಲ್ಲಿ ಬೆಳಗ್ಗೆ 9ಕ್ಕೆ ಶೇ.6.27, 11ಗಂಟೆಗೆ ಶೇ.14.44, ಮಧ್ಯಾಹ್ನ 1ಕ್ಕೆ ಶೇ.26.58 ಹಾಗೂ ಮಧ್ಯಾಹ್ನ 3ರ ವೇಳೆಗೆ ಶೇ.32.41, ಸಂಜೆ 5 ಗಂಟೆಯ ವೇಳೆಗೆ ಶೇ.39.15ರಷ್ಟು, ಮುಕ್ತಾಯದ ವೇಳೆಗೆ ಒಟ್ಟು ಶೇ.45.24ರಷ್ಟು ಮತದಾನವಾಗಿದ್ದು, ಅತ್ಯಂತ ನಿರಸ ಮತದಾನವಾಗಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಟ್ಟು 4,62,201 ಮಂದಿ ಮತದಾರರಿದ್ದು, ಆ ಪೈಕಿ ಶೇ.40ರಷ್ಟು ಯುವ ಸಮೂಹವಿದೆ. ಆದರೂ, ಹೆಚ್ಚು ಮತದಾನವಾಗಿಲ್ಲ. ಕೋವಿಡ್-19 ತಡೆಗಟ್ಟಲು ಹೇರಿದ್ದ ಸುದೀರ್ಘ ಲಾಕ್‍ಡೌನ್, ಆ ಬಳಿಕವೂ ಸೋಂಕಿನ ಭೀತಿಯಿಂದ ಕ್ಷೇತ್ರದಲ್ಲಿ ನೆಲೆಸಿರುವ ದೊಡ್ಡಸಂಖ್ಯೆಯ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮತದಾನ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ `ಪ್ರಜ್ಞಾವಂತ ಶಿಕ್ಷಿತ' ಮತದಾರರು ಹಕ್ಕು ಚಲಾಯಿಸಲು ಹಿಂದೇಟು ಹಾಕುತ್ತಾರೆಂಬುದಕ್ಕೆ ಈ ಉಪ ಚುನಾವಣೆ ಮತದಾನದ ಕೊರತೆಯೂ ಹೊಸ ಸೇರ್ಪಡೆಯಾಗಿದೆ. ಜೊತೆಗೆ ರಜಾದಿನವಲ್ಲದೆ, ಮಂಗಳವಾರ ಉಪಚುನಾವಣೆ ನಡೆಯುತ್ತಿರುವ ಕಾರಣ ಹೊರ ಊರುಗಳಲ್ಲಿ ಕೆಲಸ ಮಾಡುವ ಕ್ಷೇತ್ರದ ಮತದಾರರಾಗಿರುವ ನೌಕರರು, ಉದ್ಯೋಗಿಗಳು ಸಹಿತ ಕೂಲಿ ಕಾರ್ಮಿಕರಿಗೆ ರಜೆ ಇಲ್ಲದೆ ಇರುವುದು ಗಮನಾರ್ಹ ಅಂಶ. ಅಲ್ಲದೆ, ಕೋವಿಡ್-19 ಸೋಂಕಿನ ಆತಂಕದ ನಡುವೆ ನಡೆದ ಮೊದಲ ಉಪಚುನಾವಣೆ ಇದಾಗಿದ್ದು, ಸೋಂಕಿನ ಭೀತಿಯ ಕಾರಣ ಮತದಾರರು ಮತಗಟ್ಟೆಗಳಿಗೆ ಧಾವಿಸಿಲ್ಲ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News