ಅರ್ನಬ್: ಕೊಂದ ಪಾಪ...

Update: 2020-11-05 05:04 GMT

ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾಗಿರುವ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅವರ ಬಂಧನವಾಗುತ್ತಿದ್ದಂತೆಯೇ ದಿಲ್ಲಿಯ ಬಿಜೆಪಿ ನಾಯಕರು ‘ಅಭಿವ್ಯಕ್ತಿ ಸ್ವಾತಂತ್ರ’ಕ್ಕಾದ ಧಕ್ಕೆಗಾಗಿ ಗೋಳಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ ಸದಾ ಧ್ವನಿಯೆತ್ತುತ್ತಾ ಬಂದ ಮಾನವ ಹಕ್ಕು ಹೋರಾಟಗಾರರು ತೀವ್ರ ಮುಜುಗರಕ್ಕೆ ಸಿಲುಕಿದ್ದಾರೆ. ತನ್ನ ಚಾನೆಲ್ ಮೂಲಕ ಕಳೆದ ಕೆಲವು ವರ್ಷಗಳಿಂದ ಗೋಸ್ವಾಮಿ ಅಭಿವ್ಯಕ್ತಿ ಸ್ವಾತಂತ್ರವನ್ನು ಗರಿಷ್ಠ ಮಟ್ಟದಲ್ಲಿ ದುರುಪಯೋಗ ಪಡಿಸಿಕೊಂಡು ಬಂದಿದ್ದಾರೆ. ಸರಕಾರದ ಸರ್ವ ಜನವಿರೋಧಿ ನೀತಿಗಳನ್ನು ಬೆಂಬಲಿಸುತ್ತಾ, ಜನರನ್ನು ಸುಳ್ಳು ಸುದ್ದಿಗಳ ಮೂಲಕ ವಂಚಿಸುತ್ತಾ ಪತ್ರಿಕಾಧರ್ಮಕ್ಕೆ ದ್ರೋಹ ಎಸಗಿದ್ದಾರೆ. ರಿಪಬ್ಲಿಕ್ ಟಿವಿ ಎಂದೋ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತ್ತು. ಋಣಾತ್ಮಕ ಕಾರಣಗಳಿಗಾಗಿಯಷ್ಟೇ ಅದು ಸುದ್ದಿಯಲ್ಲಿತ್ತು. ಹಾಗೆಂದು, ಪ್ರಭುತ್ವ ಒಂದು ಮಾಧ್ಯಮದ ಮುಖ್ಯಸ್ಥನ ವಿರುದ್ಧ ದಾಳಿ ನಡೆಸಿದಾಗ ವೌನವಾಗಿರುವುದು ಕೂಡ ಅಪಾಯಕಾರಿ.

ಈಗಾಗಲೇ ದೇಶಾದ್ಯಂತ ಮಾಧ್ಯಮಗಳ ಮೇಲೆ ಬೇರೆ ಬೇರೆ ರೂಪದಲ್ಲಿ ಕೇಂದ್ರ ಸರಕಾರ ದಾಳಿ ನಡೆಸುತ್ತಾ ಬರುತ್ತಿದೆ. ಹಲವು ಪತ್ರಕರ್ತರು ಜೈಲು ಪಾಲಾಗಿದ್ದಾರೆ. ಹೀಗಿರುವಾಗ ಗೋಸ್ವಾಮಿಯ ಮೇಲೆ ಪ್ರಭುತ್ವ ದಾಳಿ ನಡೆಸುವಾಗ, ಬಂಧಿಸುವಾಗ, ಅದು ಅಭಿವ್ಯಕ್ತಿಯ ಕಾರಣಕ್ಕಾಗಿ ಸಂಭವಿಸಿದ್ದರೆ, ಅವರ ಪರವಾಗಿ ದೇಶ ನಿಲ್ಲಲೇಬೇಕಾಗುತ್ತದೆ. ಆದರೆ ಇಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥರ ಬಂಧನವಾಗಿರುವುದು ಅಭಿವ್ಯಕ್ತಿಯ ಕಾರಣಕ್ಕಾಗಿ ಅಲ್ಲ. ಒಬ್ಬ ಖ್ಯಾತ ಪತ್ರಕರ್ತ ವೈಯಕ್ತಿಕವಾಗಿ ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾದರೆ, ಆತನನ್ನು ಆ ಹಿನ್ನೆಲೆಯಲ್ಲಿ ಬಂಧಿಸಿದಾಗ ‘ಅಭಿವ್ಯಕ್ತಿ ಸ್ವಾತಂತ್ರ’ವನ್ನು ಗುರಾಣಿಯಾಗಿಸಿಕೊಂಡು ಅವನನ್ನು ರಕ್ಷಿಸುವುದು ಎಷ್ಟರಮಟ್ಟಿಗೆ ಸರಿ? ಎನ್ನುವ ಪ್ರಶ್ನೆ, ಗೋಸ್ವಾಮಿ ಪ್ರಕರಣದಲ್ಲಿ ಎದ್ದಿದೆ. ಇದೇ ಸಂದರ್ಭದಲ್ಲಿ, ಈಗಾಗಲೇ ಮಾಧ್ಯಮಗಳ ಮೇಲೆ ಪ್ರಭುತ್ವದಿಂದ ಬೇರೆ ಬೇರೆ ರೂಪಗಳಲ್ಲಿ ದಾಳಿ ನಡೆಯುತ್ತಿರುವಾಗ, ಗೋಸ್ವಾಮಿ ಪ್ರಕರಣದಲ್ಲಿ ವೌನವಾಗಿರುವುದು ಎಲ್ಲಿ ಮಾಧ್ಯಮಗಳ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸಲು ರಾಜಕಾರಣಿಗಳಿಗೆ ಕುಮ್ಮಕ್ಕು ನೀಡುತ್ತದೆಯೋ ಎಂಬ ಆತಂಕವೂ ಕೆಲವರನ್ನು ಕಾಡುತ್ತಿದೆ.

ಗೋಸ್ವಾಮಿ ಕಳೆದ ಕೆಲವು ವರ್ಷಗಳಿಂದ ನಡೆಸುತ್ತಾ ಬಂದಿರುವುದನ್ನು ಪತ್ರಿಕೋದ್ಯಮ ಎಂದು ಕರೆಯುವಂತಿಲ್ಲ. ಇದು ಆ ಟಿವಿಯ ಅರಚಾಟಗಳನ್ನು ಕೇಳುತ್ತಾ ಬಂದಿರುವ ಎಲ್ಲರೂ ಒಪ್ಪುವ ಮಾತು. ಒಂದು ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಸರ್ವ ರೀತಿಯಲ್ಲಿ ದುರುಪಯೋಗ ಪಡಿಸಿಕೊಂಡು ಮಾಧ್ಯಮಗಳನ್ನು ಮುಜುಗರಕ್ಕೆ ಸಿಲುಕಿಸುತ್ತಾ ಬಂದವರು ಗೋಸ್ವಾಮಿ. ಇತ್ತೀಚೆಗೆ ‘ಟಿಆರ್‌ಪಿ’ ವಂಚನೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ಗೋಸ್ವಾಮಿಯೇ ಸುದ್ದಿಯಾದರು. ಕೃತಕ ಟಿಆರ್‌ಪಿಯನ್ನು ಸೃಷ್ಟಿಸುವ ಮೂಲಕ ಜನಸಾಮಾನ್ಯರಿಗೆ ಮತ್ತು ಜಾಹೀರಾತು ಸಂಸ್ಥೆಗಳಿಗೆ ವಂಚಿಸಿದ ಆರೋಪ ಇವರ ಮೇಲಿದೆ. ಒಂದು ರೀತಿಯಲ್ಲಿ ಇದು ಮಾಧ್ಯಮ ಧರ್ಮದ ಬೆನ್ನಿಗೆ ಹಾಕಿದ ಚೂರಿ. ತನ್ನ ಟಿಆರ್‌ಪಿಯನ್ನು ಹೆಚ್ಚಿಸುವುದಕ್ಕಾಗಿ ಜನರಿಗೆ ದುಡ್ಡು ಕೊಟ್ಟು ಟಿವಿ ವೀಕ್ಷಿಸುವಂತೆ ಮಾಡಿ, ಟಿಆರ್‌ಪಿಯನ್ನು ಗುರುತಿಸುವ ಸಂಸ್ಥೆಗೆ ಮೋಸ ಮಾಡಿದವರು. ಈಗಾಗಲೇ ಹಲವು ಜಾಹೀರಾತು ಸಂಸ್ಥೆಗಳು ಇವರ ಟಿವಿಯನ್ನು ಬಹಿಷ್ಕರಿಸಿವೆ. ತೀವ್ರಗತಿಯ ತನಿಖೆ ನಡೆದಿದ್ದರೆ, ಟಿಆರ್‌ಪಿ ವಂಚನೆಯ ಕಾರಣಕ್ಕಾಗಿಯೇ ಗೋಸ್ವಾಮಿ ಜೈಲು ಸೇರಬೇಕಾಗಿತ್ತು. ಆದರೆ ಇದೇ ಸಂದರ್ಭದಲ್ಲಿ, ಎರಡು ವರ್ಷಗಳ ಹಿಂದಿನ ಪ್ರಕರಣವೊಂದು ಅವರನ್ನು ಸುತ್ತಿಕೊಂಡು ಜೈಲು ಸೇರುವಂತೆ ಮಾಡಿದೆ.

ಗೋಸ್ವಾಮಿಯವರನ್ನು ಪೊಲೀಸರು ಬಂಧಿಸಿರುವುದು ಅವರು ಭಾಗಿಯಾಗಿದ್ದಾರೆ ಎನ್ನಲಾಗಿರುವ ತೀರ ವೈಯಕ್ತಿಕವಾದ ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿ. ಅಲಿಬಾಗ್‌ನ ಕಾವಿರ್ ಗ್ರಾಮದ ನಿವಾಸಿ, ಒಳಾಂಗಣ ವಿನ್ಯಾಸಗಾರ ಅನ್ವಯ್ ನಾಯಕ್ ಹಾಗೂ ಅವರ ತಾಯಿ ಕುಮುದಾ 2018ರಲ್ಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲಿ ದೊರೆತ ಡೆತ್‌ನೋಟ್‌ನಲ್ಲಿ ‘ತನಗೆ ಬರಬೇಕಿರುವ 5.40 ಕೋಟಿ ಮೊತ್ತದ ಹಣವನ್ನು ಅರ್ನಬ್ ಗೋಸ್ವಾಮಿ ಮತ್ತು ಅವರ ಸಂಗಡಿಗರು ಪಾವತಿಸದೆ ಸತಾಯಿಸುತ್ತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ನಾಯಕ್ ಬರೆದಿದ್ದರು ಎಂದು ಪೊಲೀಸರು ಹೇಳಿದ್ದರು. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಗೋಸ್ವಾಮಿಯಿಂದ 83 ಲಕ್ಷ ರೂ. ಬಾಕಿಯಿದೆ ಎಂದು ಆರೋಪಿಸಲಾಗಿತ್ತು. ಅವರ ಕುಟುಂಬ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರಿಂದ ಗೋಸ್ವಾಮಿ ಬಂಧನಕ್ಕೊಳಗಾಗಿದ್ದಾರೆ. ಇತ್ತೀಚೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆಗೈದಾಗ, ಅದನ್ನು ಮುಂದಿಟ್ಟು ಇದೇ ರಿಪಬ್ಲಿಕ್ ಟಿವಿ ಗದ್ದಲ ಎಬ್ಬಿಸಿತ್ತು. ನಟನ ಸಾವನ್ನು ಕೊಲೆಯಾಗಿ ಪರಿವರ್ತಿಸಲು ರಿಪಬ್ಲಿಕ್ ಟಿವಿ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಡ್ರಗ್ ಜಾಲಕ್ಕೂ ನಂಟನ್ನು ಕಲ್ಪಿಸಲು ಯತ್ನಿಸಿತ್ತು. ಸುಶಾಂತ್ ಸಿಂಗ್‌ರ ಆತ್ಮಹತ್ಯೆಯ ಕುರಿತಂತೆ ಕಾರಣವಿಲ್ಲದೆಯೇ ಗೋಸ್ವಾಮಿ ಕಂಡವರ ಮೇಲೆ ಆರೋಪಗಳನ್ನು ಮಾಡಬಹುದಾದರೆ, ಒಬ್ಬ ಉದ್ಯಮಿ ತನ್ನ ಸಾವಿಗೆ ಇಂಥವರು ಕಾರಣ ಎಂದು ಮರಣ ಪತ್ರ ಬರೆದಿಟ್ಟು ಮೃತಪಟ್ಟಿರುವಾಗ ಅದನ್ನು ತನಿಖೆ ಮಾಡುವುದು ಪೊಲೀಸರ ಕರ್ತವ್ಯವೇ ಆಗಿದೆ. ಚಾನೆಲ್‌ನ್ನು ಮುಖವಾಡವಾಗಿ ಬಳಸಿಕೊಂಡು ರಾಜಕಾರಣಿಗಳ ಪರವಾಗಿ ಕೆಲಸ ಮಾಡುತ್ತಾ ಅದನ್ನೇ ಪತ್ರಿಕೋದ್ಯಮವೆಂದು ಕರೆದುಕೊಂಡಿದ್ದ ಗೋಸ್ವಾಮಿ, ಪತ್ರಕರ್ತನ ಗುರುತು ಚೀಟಿ ಮುಂದಿಟ್ಟು ತನ್ನನ್ನು ರಕ್ಷಿಸಿಕೊಳ್ಳಲು ನೋಡುವುದು ಎಷ್ಟರಮಟ್ಟಿಗೆ ಸರಿ?

ಇಷ್ಟಕ್ಕೂ ಈ ಹಿಂದೆ ಅತ್ಯಂತ ಪ್ರಗತಿ ಪರ, ಬಿಜೆಪಿ ವಿರೋಧಿ ಎಂದು ಗುರುತಿಸಿಕೊಂಡಿದ್ದ ಖ್ಯಾತ ಪತ್ರಿಕೆ ‘ತೆಹಲ್ಕಾ’ದ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿಸಲಾಗಿತ್ತು. ಆಗ ಯಾವ ಪ್ರಗತಿಪರರು, ಮಾನವ ಹಕ್ಕು ಹೋರಾಟಗಾರರೂ ತರುಣ್ ತೇಜ್‌ಪಾಲ್ ಪರವಾಗಿ ಮಾತನಾಡಿರಲಿಲ್ಲ. ಯಾಕೆಂದರೆ, ತರುಣ್‌ತೇಜ್ ಪಾಲ್ ಅವರನ್ನು ಯಾವ ಕಾರಣಕ್ಕಾಗಿ ಬಂಧಿಸಲಾಗಿತ್ತೋ ಆ ಪ್ರಕರಣಕ್ಕೂ ಅಭಿವ್ಯಕ್ತಿಗೂ ಯಾವ ಸಂಬಂಧವೂ ಇರಲಿಲ್ಲ. ಹಣ, ಪ್ರಚಾರ, ಅಧಿಕಾರದ ಮದದಲ್ಲಿ ತರುಣ್‌ತೇಜ್‌ಪಾಲ್ ಎಸಗಿದ ಕೃತ್ಯವನ್ನು ಸಮಾಜ ಒಕ್ಕೊರಲಲ್ಲಿ ಖಂಡಿಸಿತ್ತು. ಹೀಗಿರುವಾಗ, ಪತ್ರಿಕೋದ್ಯಮದಲ್ಲಿ ಯಾವುದೇ ರೀತಿಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳದ ಒಂದು ಟಿವಿ ಚಾನೆಲ್‌ನ ಮುಖ್ಯಸ್ಥ, ಹಣದ ವ್ಯವಹಾರದಲ್ಲಿ ಒಬ್ಬನಿಗೆ ಮೋಸಗೈದು ಆತನನ್ನು ಆತ್ಮಹತ್ಯೆಗೆ ದೂಡಿದಾಗ ಪತ್ರಕರ್ತನೆಂಬ ಕಾರಣಕ್ಕೆ ಅವನನ್ನು ಬಂಧಿಸಬಾರದು ಎಂದು ಒತ್ತಾಯಿಸುವುದೇ ಪತಿಕೋದ್ಯಮಕ್ಕೆ ಎಸಗುವ ದ್ರೋಹವಾಗಿದೆ. ಗೋಸ್ವಾಮಿ ಬಂಧನಕ್ಕಾಗಿ ಆತ್ಮಹತ್ಯೆಗೈದವರ ಕುಟುಂಬ ಪೊಲೀಸರನ್ನು ಅಭಿನಂದಿಸಿದೆ. ಸುಶಾಂತ್ ಸಿಂಗ್‌ಗೆ ನ್ಯಾಯಸಿಗಬೇಕು ಎಂದು ಹಂಬಲಿಸುವಾಗ, ಆತ್ಮಹತ್ಯೆಗೈದ ಅನ್ವಯ್ ನಾಯಕ್ ಮತ್ತು ಕುಮುದಾ ಅವರಿಗೆ ನ್ಯಾಯ ಸಿಗಬಾರದು ಎಂದು ಬಯಸುವುದು ಅಮಾನವೀಯವಾಗಿದೆ.

ಸರಕಾರದ ನೀತಿಗಳ ವಿರುದ್ಧ ಬರೆದ ನೆಪವನ್ನೇ ಮುಂದಿಟ್ಟುಕೊಂಡು ಮಾಧ್ಯಮಗಳ ಮೇಲೆ, ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸಿಕೊಂಡು ಬಂದ ಕೇಂದ್ರ ಸರಕಾರದ ನಾಯಕರು ಇದೀಗ ಗೋಸ್ವಾಮಿ ಬಂಧನಕ್ಕಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಇಲ್ಲಿ ಯಾವ ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗಿದೆ ಎನ್ನುವುದಕ್ಕೆ ಯಾರೂ ಉತ್ತರಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಟಿಆರ್‌ಪಿಯಲ್ಲಿ ಮೋಸ ಮಾಡುವ ಮೂಲಕ, ವೀಕ್ಷಕರಿಗೆ, ಜಾಹೀರಾತುದಾರರಿಗೆ ವಂಚಿಸಿದ ಆರೋಪಗಳೂ ಗೋಸ್ವಾಮಿಯ ಮೇಲಿದೆ. ಆ ಕುರಿತಂತೆ ಗಂಭೀರ ತನಿಖೆ ನಡೆಯಬೇಕಾಗಿದೆ. ಗೋಸ್ವಾಮಿ ನಿಜಕ್ಕೂ ಅದರಲ್ಲಿ ಭಾಗಿಯಾಗಿದ್ದಾರೆ ಎಂದಾಗಿದ್ದರೆ, ಪತ್ರಕರ್ತನೆನ್ನುವ ಕಾರಣಕ್ಕೆ ಯಾವ ವಿನಾಯಿತಿಯೂ ಅವರಿಗೆ ಸಿಗಬಾರದು. ಕೊಂದ ಪಾಪ ತಿಂದು ಪರಿಹಾರ ಎನ್ನುವ ಮಾತಿದೆ. ಪತ್ರಿಕೋದ್ಯಮವನ್ನು ಕೊಂದ ಪಾಪವನ್ನು ಇದೀಗ ತಿನ್ನಲೇ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ ಅರ್ನಬ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News