ಹತ್ಯೆ ಪ್ರಕರಣ: ಸಿಬಿಐನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಚಾರಣೆ, ಬಂಧನ

Update: 2020-11-05 14:03 GMT

ಬೆಂಗಳೂರು, ನ. 5: ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು, ಅವರನ್ನು ಹಾಗೂ ಅವರ ಸಹೋದರ ವಿಜಯ್ ಕುಲಕರ್ಣಿ ಅವರನ್ನು ಬಂಧಿಸಿದ್ದಾರೆ.

ಗುರುವಾರ ಬೆಳಗ್ಗೆ ಧಾರವಾಡದಲ್ಲಿನ ಅವರ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದ ಸಿಬಿಐನ ರಾಕೇಶ್ ರಂಜನ್ ನೇತೃತ್ವದ ತಂಡ, ಕುಲಕರ್ಣಿ ಅವರನ್ನು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ನಡೆಸಿತು. ಆ ಬಳಿಕ ಅವರನ್ನು ಬಂಧಿಸಿ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದೆ.

2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ನಡೆಯುತ್ತದೆ. ಧಾರವಾಡ ನಗರದ ಸಪ್ತಾಪುರದಲ್ಲಿರುವ ಅವರ ಮಾಲಕತ್ವದ ಜಿಮ್‍ನ ಬಳಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಅವರ ಕಣ್ಣಿಗೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹತ್ಯೆಗೈಯಲಾಗಿತ್ತು. ಈ ಪ್ರಕರಣ ರಾಜ್ಯದಲ್ಲಿ ಬಹಳ ಸುದ್ದಿಯಾಗಿತ್ತು.

ಈ ಪ್ರಕರಣ ಸಂಬಂಧ ಧಾರವಾಡ ಪೊಲೀಸರು ಎಫ್‍ಐಆರ್ ದಾಖಲಿಸಿ ಆರು ಮಂದಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಸಚಿವರಾಗಿದ್ದ ವಿನಯ್ ಕುಲಕಣಿ ಅವರ ಹೆಸರು ಈ ಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು. ಅದರೆ, ಅವರು ಈ ಆರೋಪವನ್ನು ನಿರಾಕರಿಸಿದ್ದರು. ಯೋಗೇಶ್ ಗೌಡ ಹತ್ಯೆ ಪ್ರಕರಣ ಅಂದಿನ ವಿಪಕ್ಷ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.

ಬದಲಾದ ಕಾಲಘಟದಲ್ಲಿ 2017ರ ಜುಲೈನಲ್ಲಿ ಹತ್ಯೆಗೀಡಾದ ಯೋಗೇಶ್ ಗೌಡ ಅವರ ಅಣ್ಣ ಗುರುನಾಥ್ ಗೌಡ ಈ ಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದರು. ಇದೇ ವೇಳೆ ರಾಜ್ಯದಲ್ಲಿ `ಪ್ರತ್ಯೇಕ ಲಿಂಗಾಯತ ಧರ್ಮ'ದ ಮಾನ್ಯತೆ ಕೋರುವ ಹೋರಾಟದಲ್ಲಿಯೂ ವಿನಯ್ ಕುಲಕರ್ಣಿ ಅವರ ಹೆಸರು ಮುಂಚೂಣಿಯಲ್ಲಿತ್ತು. 2019ರ ಸೆಪ್ಟಂಬರ್ ನಲ್ಲಿ ಪ್ರಕರಣ ಸಿಬಿಐಗೆ ವಹಿಸಲಾಗಿತ್ತು. ಇದೇ ವೇಳೆ ವಿನಯ್ ಕುಲಕರ್ಣಿ ಅವರು, ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಾದ ಮಾಡುತ್ತಿದ್ದ ವಕೀಲರಿಗೆ ಬೆದರಿಕೆವೊಡ್ಡಿದ ಆಡಿಯೋವೊಂದು ವೈರಲ್ ಆಗಿತ್ತು.

ಈ ಬೆಳವಣಿಗೆಗಳ ನಡುವೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಉತ್ತಿಗೆ ಸಿಬಿಐ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಆದರೆ, ಸಿಬಿಐ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆಯನ್ನು ತೆರವು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದು, ಇದೀಗ 4 ವರ್ಷಗಳ ಹಿಂದಿನ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

ಈ ಹತ್ಯೆ ಪ್ರಕರಣ ಸಂಬಂಧ ಮೃತ ಯೋಗೇಶ್ ಗೌಡರ ಪತ್ನಿ ಮಲ್ಲಮ್ಮ ಹಾಗೂ ಆಕೆಯ ಸಹೋದರಿ ಸುಮಾ, ಧಾರವಾಡ ಜಿ.ಪಂ.ಉಪಾಧ್ಯಕ್ಷ ಶಿವಾನಂದ, ಕೆಪಿಸಿಸಿ ಜಿಲ್ಲಾ ಮುಖಂಡ ನಾಗರಾಜ ಗೌರಿ, ಉದ್ಯಮಿ ಮಹೇಶ್ ಶೆಟ್ಟಿ ಸಹಿತ ಹಲವು ಮಂದಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಸಿಬಿಐ ಮೂಲಗಳು ಮಾಹಿತಿ ನೀಡಿವೆ.

ಆಕ್ರೋಶ: ಯೋಗೇಶ್‍ಗೌಡ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ಸಿಬಿಐ ವಿಚಾರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು, ಇದು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ. ಈ ನಡುವೆ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು, ಬಂಧಿಸಿದ ಸಿಬಿಐ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡ ಉಪನಗರ ಠಾಣೆ ಮುಂದೆ ಪ್ರತಿಭಟನೆಯನ್ನು ನಡೆಸಿದ್ದಾರೆಂದು ತಿಳಿದು ಬಂದಿದೆ.

`ಜಿ.ಪಂ.ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ನಾನು ಹೇಳುವುದಕ್ಕೇ ಏನೂ ಇಲ್ಲ. ಇದು ನೂರಕ್ಕೆ ನೂರರಷ್ಟು ರಾಜಕೀಯ ಪ್ರೇರಿತ'

-ವಿನಯ್ ಕುಲಕರ್ಣಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News