ರಾಜಧಾನಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ: ನಗರದ 63 ಕೆರೆಗಳು ಭರ್ತಿ !

Update: 2020-11-06 19:15 GMT

ಬೆಂಗಳೂರು, ನ.6: ರಾಜಧಾನಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದ ಹಿನ್ನೆಲೆಯಲ್ಲಿ ನಗರದ 63 ಕೆರೆಗಳು ಭರ್ತಿಯಾಗಿದೆ. ಅದರ ಪರಿಣಾಮ ಅಂತರ್ಜಲ ಪ್ರಮಾಣವೂ ಏರಿಕೆಯಾಗಿ ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಮರುಪೂರಣಗೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಹಾಗೂ ಬಿಡಿಎ ವ್ಯಾಪ್ತಿಯಲ್ಲಿ 5 ಕೆರೆಗಳು ಸೇರಿ ಸಿಲಿಕಾನ್ ಸಿಟಿಯಲ್ಲಿ 210 ಕೆರೆಗಳಿವೆ. ಆ ಪೈಕಿ 19 ಕೆರೆಗಳಲ್ಲಿ ಬೃಹತ್ ಕಟ್ಟಡಗಳು ನಿರ್ಮಾಣಗೊಂಡು ತನ್ನ ಅಸ್ತಿತ್ವವನ್ನು ಕಡೆದುಕೊಂಡಿದೆ. ಬಿಬಿಎಂಪಿಯಿಂದ 79 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಅದರಲ್ಲಿ 42 ಕೆರೆಗಳು ಭರ್ತಿಯಾಗಿದ್ದರೆ, ಅಭಿವೃದ್ಧಿಯಾಗದ 107 ಕೆರೆಗಳ ಪೈಕಿ 26 ಕೆರೆಗಳು ತುಂಬಿವೆ. 

ಒಂದೇ ವರ್ಷದಲ್ಲಿ ಯಲಹಂಕ ವಲಯದಲ್ಲಿ 24, ಬೊಮ್ಮನಹಳ್ಳಿ ವಲಯದಲ್ಲಿ 12, ಮಹದೇವಪುರ ವಲಯದಲ್ಲಿ 11, ರಾಜರಾಜೇಶ್ವರಿ ನಗರ ವಲಯದಲ್ಲಿ 10, ಬೆಂಗಳೂರು ಪೂರ್ವ 1, ಪಶ್ಚಿಮ 1 ಹಾಗೂ ದಕ್ಷಿಣ ವಲಯದಲ್ಲಿ 3 ಕೆರೆ ಸೇರಿ ಒಟ್ಟಾರೆ 63 ಕೆರೆಗಳು ಭರ್ತಿಯಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅಂತರ್ಜಲ ಮರುಪೂರಣ: ಕೆರೆಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಅಲ್ಲದೆ, ನಗರದಲ್ಲಿ 1.2 ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳಿದ್ದು, ಅಂತರ್ಜಲ ಕೊರತೆ ಅನುಭವಿಸುತ್ತಿದ್ದ 30 ಸಾವಿರಕ್ಕೂ ಅಧಿಕ ಬೋರ್ ವೆಲ್‍ಗಳಲ್ಲಿ ಜಲ ಮರುಪೂರಣಗೊಂಡಿದೆ.

ವಾರ್ಷಿಕ ವಾಡಿಕೆಗಿಂತ ಅಧಿಕ ಮಳೆ: ಬೆಂಗಳೂರಿನಲ್ಲಿ ವಾರ್ಷಿಕ ವಾಡಿಕೆಯಂತೆ 970 ಮಿ.ಮೀ. ಮಳೆಯಾಗಲಿದ. ಈ ವರ್ಷ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಹೆಚ್ಚಾಗಿ ಸುರಿದಿದೆ. ವಾಡಿಕೆಯಂತೆ ಅಕ್ಟೋಬರ್ ಅಂತ್ಯಕ್ಕೆ 789 ಮಿ.ಮೀ. ಮಳೆಯಾಗಬೇಕಿದ್ದು, 988 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‍ಎನ್‍ಡಿಎಂಸಿ) ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಈ ಪ್ರಮಾಣ ವಾಡಿಕೆಗಿಂತ 199 ಮಿ.ಮೀ.(ಶೇ.20.14) ಮಳೆ ಅಧಿಕವಾಗಿದೆ.

ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಬಿದ್ದಿದರ ಪರಿಣಾಮ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಆದರೆ, ಬಿಬಿಎಂಪಿ ಅಭಿವೃದ್ಧಿ ಮಾಡಿದ ಕೆರೆಗಳು ಭರ್ತಿಯಾಗಿ, ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಕೆರೆಗೆ ಕಲುಷಿತ ನೀರು ಸೇರದಂತೆ ನೋಡಿಕೊಳ್ಳಲಾಗುತ್ತದೆ.

-ಪ್ರಹ್ಲಾದ್, ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಇಂಜಿನಿಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News