ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಪ್ರಕ್ರಿಯೆ 10 ವರ್ಷದಲ್ಲಿ ಪೂರ್ಣ: ಅಶ್ವತ್ಥ ನಾರಾಯಣ

Update: 2020-11-07 16:48 GMT

ಬೆಂಗಳೂರು, ನ.7: ಕರ್ನಾಟಕ ಶಿಕ್ಷಣ ಆಯೋಗ(ಕೆಎಸ್‍ಎ/ಕೆಇಸಿ) ಅನುಷ್ಠಾನ ಮಿಷನ್, ಕರ್ನಾಟಕ ಶಿಕ್ಷಣ ಕಾಯ್ದೆ(ಕೆಎಸ್‍ಯು) ಸ್ಥಾಪನೆ ಸೆರಿದಂತೆ ಇನ್ನಿತರ ಸಲಹೆಗಳ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸುವ ಸಂಬಂಧ ರಚನೆಗೊಂಡಿರದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್ ನೇತೃತ್ವದ ಕಾರ್ಯಪಡೆಯ ವರದಿಯನ್ನು ಮುಂದಿನ ಹತ್ತು ವರ್ಷಗಳೊಳಗೆ ಅಳವಡಿಕೆ ಪ್ರಕ್ರಿಯೆ ಮುಗಿಸಲಾಗುವುದೆಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಶನಿವಾರ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್ ನೇತೃತ್ವದ ಕಾರ್ಯಪಡೆ ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ವರದಿಯನ್ನು ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಗೆ ಸಲ್ಲಿಸಿತು.

ಈ ವೇಳೆ ಮಾತನಾಡಿನ ಸಚಿವ ಅಶ್ವತ್ಥ ನಾರಾಯಣ, ವಿವಿಧ ಇಲಾಖೆಗಳು, ಕಾರ್ಯಗಳು, ಸಂಸ್ಥೆಗಳು ಹಾಗೂ ಘಟಕಗಳ ನಡುವೆ ಸಮನ್ವಯತೆ ಸಾಧಿಸುವುದಕ್ಕಾಗಿ ಕರ್ನಾಟಕ ಶಿಕ್ಷಣ ಆಯೋಗ(ಕೆಎಸ್‍ಎ)ವನ್ನು ಸ್ಥಾಪಿಸಬೇಕು. ಪ್ರಾಥಮಿಕ-ಪ್ರೌಢ ಹಾಗೂ ಉನ್ನತ ಶಿಕ್ಷಣ ಇವರೆಡೂ ಆ ಆಯೋಗದಡಿ ಕೆಲಸ ಮಾಡಬೇಕು. ಈ ಆಯೋಗಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಬೇಕು ಸೇರಿದಂತೆ ಹಲವು ಪ್ರಮುಖ ಕ್ರಮಗಳ ಬಗ್ಗೆ ಸಲಹೆಗಳನ್ನು ಈ ವರದಿ ಒಳಗೊಂಡಿದೆ ಎಂದು ತಿಳಿಸಿದರು.

2021-22ನೇ ಶೈಕ್ಷಣಿಕ ವರ್ಷದಿಂದ ಈ ವರದಿಯನ್ನು ಹಂತ, ಹಂತವಾಗಿ ಅಳವಡಿಸಲಾಗುತ್ತದೆ. ಅದಕ್ಕೆ ಮುನ್ನ ಎಲ್ಲ ಹಿತಾಸಕ್ತಿದಾರರೊಂದಿಗೆ ವರದಿ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ನೀತಿಯನ್ನು ಪೂರ್ತಿಯಾಗಿ ಅಳವಡಿಸಲು 15 ವರ್ಷಗಳ ಕಾಲಾವಕಾಶವಿದೆ. ಆದರೆ ರಾಜ್ಯ ಸರಕಾರ 10 ವರ್ಷಗಳೊಳಗೆ ಇದರ ಅಳವಡಿಕೆ ಪ್ರಕ್ರಿಯೆಯನ್ನು ಮುಗಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು.

ಈ ವೇಳೆ ಶಿಕ್ಷಣ ಸಚಿವ ಸುರೇಶ್‍ ಕುಮಾರ್, ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಕಾರ್ಯಪಡೆ ಸದಸ್ಯ ಎಂ.ಕೆ.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ವರದಿಯಲ್ಲಿರುವ ಮುಖ್ಯಾಂಶಗಳು

-ಬುನಾದಿ(ಫೌಂಡೇಷನಲ್) ವರ್ಷಗಳ ಶಾಖೆ ಮತ್ತು ಅಕ್ಷರ ಜ್ಞಾನ-ಸಂಖ್ಯಾ ಜ್ಞಾನ ಶಾಖೆಗಳನ್ನು ಸ್ಥಾಪಿಸಬೇಕು.

-ಶಾಲಾ ಶಿಕ್ಷಣದ ಮರುಸಂರಚನೆ.

-ಮಗುವಿನ 3ನೇ ಆರಂಭದಿಂದ ಬಾಲ್ಯಾರಂಭ ಶಿಕ್ಷಣ ಆರಂಭವಾಗಲಿದೆ. ಒಟ್ಟಾರೆ ಶಿಕ್ಷಣವು 5+3+3+4(ಬುನಾದಿ ಹಂತ, ಪೂರ್ವಸಿದ್ಧತೆ ಹಂತ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಹಂತ) ತರಗತಿಗಳನ್ನು ಒಳಗೊಂಡಿರುತ್ತದೆ.

-ಪಿಯುಸಿ ಶಿಕ್ಷಣವನ್ನು ಪ್ರೌಢಶಿಕ್ಷಣ ಹಂತದೊಂದಿಗೆ ಸಂಯೋಜಿಸಲು ಗಮನ ಕೇದ್ರೀಕರಿಸುವುದು.

-ಬಾಲ್ಯಾರಂಭ ಶಿಕ್ಷಣಕ್ಕೆ ಅನುಗುಣವಾಗಿ ನಲಿ-ಕಲಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದು. ಈ ಬಾಲ್ಯಾರಂಭ ಶಿಕ್ಷಣವು ರಾಜ್ಯಾದ್ಯಂತ ಚಿಲಿಪಿಲಿ ಪ್ಲಸ್ ಪಠ್ಯಕ್ರಮ ಆಧಾರಿತವಾಗಿರುತ್ತದೆ.

-ಕೆಪಿಎಸ್ ಮತ್ತು ಇನ್ನಿತರ ವಿಶೇಷ ಶಾಲೆಗಳನ್ನು ಗುರುತಿಸಿ ಅವುಗಳನ್ನು ಶಾಲಾ ಸಮುಚ್ಚಯ ಕೇಂದ್ರಗಳಾಗಿ ನಿರ್ಮಿಸಬೇಕು.

-ಸಂಶೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು ಹಾಗೂ ಬೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು ಎಂಬ ವರ್ಗೀಕರಣ ಮಾಡಬೇಕು.

-ಗುರು ಚೇತನ ಯೋಜನೆಯನ್ನು ಸದೃಢಗೊಳಿಸಿ ಅದನ್ನು ರಾಜ್ಯದಲ್ಲಿ ವಿಶೇಷ ಶಿಕ್ಷಣ ವೃತ್ತಿ ಬೆಳವಣಿಗೆ ವೇದಿಕೆಯನ್ನಾಗಿ ರೂಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News