ಕನಿಷ್ಟ ಬೆಂಬಲ ಬೆಲೆಯಡಿ ಆಹಾರ ಧಾನ್ಯ ಖರೀದಿ ರದ್ದಾದರೆ ಪಡಿತರ ವಿತರಣೆಯೂ ಕೊನೆಯಾಗಲಿದೆ: ಆರ್ಥಿಕ ತಜ್ಞರ ಎಚ್ಚರಿಕೆ

Update: 2020-11-09 16:12 GMT

ಅಮೃತಸರ, ನ.9: ದೇಶದ ಜನಸಂಖ್ಯೆಯ 67 ಶೇ. ಪ್ರಮಾಣದ ಜನತೆ ಆಹಾರ ಧಾನ್ಯಕ್ಕೆ ಪಡಿತರ ವಿತರಣೆ ವ್ಯವಸ್ಥೆಯನ್ನು ನೆಚ್ಚಿಕೊಂಡಿರುವುದರಿಂದ ಕೃಷ್ಯುತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆಯಡಿ ಖರೀದಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸುವ ಚಿಂತನೆ ಸರಿಯಲ್ಲ. ಬೆಂಬಲ ಬೆಲೆ ರದ್ದಾದರೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಸ್ವಯಂ ಕೊನೆಗೊಳ್ಳಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗ ದೇಶದೆಲ್ಲೆಡೆ ಸುಮಾರು 5 ಲಕ್ಷ ನ್ಯಾಯಬೆಲೆ ಅಂಗಡಿಯ ಮೂಲಕ ಜನತೆಗೆ ಪಡಿತರ ಆಹಾರ ವಿತರಿಸಲಾಗುತ್ತಿದೆ. ಪಡಿತರ ವ್ಯವಸ್ಥೆಯ(ಪಿಡಿಎಸ್) ಬದಲು ನಿಗದಿತ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಗೊಳಿಸಲು ಹಲವು ಸರಕಾರಗಳು ಪ್ರಯತ್ನಿಸಿದ್ದವು. ಆದರೆ ಇಂತಹ ಯೋಜನೆ ಫಲಪ್ರದವಾಗಿಲ್ಲ. ಭಾರತದಲ್ಲಿ ಸುಮಾರು 90 ಕೋಟಿ ಜನತೆ ಪಡಿತರ ಆಹಾರ ಯೋಜನೆಯ ವ್ಯಾಪ್ತಿಯಲ್ಲಿರುವುದರಿಂದ ಕನಿಷ್ಟ ಬೆಂಬಲ ಬೆಲೆಯಡಿ ಆಹಾರ ಧಾನ್ಯಗಳನ್ನು ಖರೀದಿಸಿ ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯಡಿ ಒದಗಿಸುವ ಪ್ರಕ್ರಿಯೆ ಮುಂದುವರಿಯಬೇಕು. ಪಂಜಾಬ್‌ನಲ್ಲಿ ಬೆಳೆಯುವ ಧಾನ್ಯಗಳು ಪಿಡಿಎಸ್ ವ್ಯವಸ್ಥೆಯಡಿ ಇಡೀ ದೇಶಕ್ಕೆ ಪೂರೈಕೆಯಾಗುವುದರಿಂದ ಪಂಜಾಬ್‌ನ ರೈತರು ಕನಿಷ್ಟ ಬೆಂಬಲ ಬೆಲೆಯಡಿ ಆಹಾರ ಧಾನ್ಯ ಖರೀದಿ ಅಂತ್ಯವಾಗುವ ಬಗ್ಗೆ ಆತಂಕ ಪಡಬೇಕಿಲ್ಲ. ಕೊರೋನ ಸೋಂಕಿನ ಸಂದರ್ಭದಂತೆ, ಯಾವುದೇ ಪ್ರಾಕೃತಿಕ ವಿಪತ್ತಿನ ಸನ್ನಿವೇಶ ಎದುರಾದಾಗ ಪಿಡಿಎಸ್ ವ್ಯವಸ್ಥೆಯಡಿ ಸಂತ್ರಸ್ತರಿಗೆ ಆಹಾರ ಧಾನ್ಯ ಒದಗಿಸಲಾಗುತ್ತಿದೆ.

ಆದರೆ ಕನಿಷ್ಟ ಬೆಂಬಲ ಬೆಲೆಯಡಿ ಖರೀದಿ ರದ್ದಾದರೆ ಆಗ ಸರಕಾರ ಸಂತ್ರಸ್ತರಿಗೆ ಎಲ್ಲಿಂದ ಆಹಾರ ಧಾನ್ಯ ಪೂರೈಸುತ್ತದೆ’ ಎಂದು ಅರ್ಥಶಾಸ್ತ್ರಜ್ಞ ಡಾ. ಸರ್ದಾರ್ ಸಿಂಗ್ ಜೊಹಾಲ್ ಪ್ರಶ್ನಿಸಿದ್ದಾರೆ. ಪಡಿತರ ವಿತರಣೆಯ ಬದಲು ಫಲಾನುಭವಿಗಳಿಗೆ ಹಣ ನೀಡುವ ಯೋಜನೆಯನ್ನು ಯುಪಿಎ ಸರಕಾರ ಚಂಡೀಗಢ, ಪುದುಚೇರಿ, ದಾದ್ರ ಮತ್ತು ನಗರ್‌ಹವೇಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಆದರೆ ಹಲವು ಪ್ರಕರಣಗಳಲ್ಲಿ ಹಣ ಫಲಾನುಭವಿಗಳ ಕೈ ಸೇರದ ಕಾರಣ ಯೋಜನೆ ವಿಫಲವಾಗಿತ್ತು. ಪಡಿತರದ ಬದಲು ಹಣ ನೀಡುವುದರಿಂದ ದೇಶದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಉಂಟಾಗಬಹುದು. ಸರಕಾರ ನಿಗದಿಗೊಳಿಸಿದ ಹಣದಿಂದ ಮುಕ್ತ ಮಾರುಕಟ್ಟೆಯಲ್ಲಿ ತಮಗೆ ಅಗತ್ಯವಿರುವಷ್ಟು ಪ್ರಮಾಣದ ಆಹಾರವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಪಿಡಿಎಸ್ ವ್ಯವಸ್ಥೆಯನ್ನು ರದ್ದುಗೊಳಿಸುವುದು ಎಂದರೆ ಬಹುರಾಷ್ಟ್ರೀಯ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಂಸ್ಕೃತಿಗೆ ಉತ್ತೇಜನ ನೀಡಿದಂತೆ ಆಗುತ್ತದೆ. ಆಗ ಬೃಹತ್ ಸಂಸ್ಥೆಗಳು ಆಹಾರ ಧಾನ್ಯವನ್ನು ದಾಸ್ತಾನಿರಿಸಿಕೊಂಡು ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ.

ಕೇಂದ್ರ ಸರಕಾರ ಬಡಜನರ ಹಿತಚಿಂತನೆಯ ಬಗ್ಗೆಯೂ ಆದ್ಯತೆ ನೀಡಬೇಕು ಎಂದು ಗುರು ಕಾಶಿ ರೀಜನಲ್ ಕ್ಯಾಂಪಸ್‌ನ ಪ್ರೊ. ಬಲದೇವ್ ಸಿಂಗ್ ಹೇಳಿದ್ದಾರೆ. ಸರಕಾರ ನೀಡುತ್ತಿರುವ ವಿಧವಾ ವೇತನ, ವೃದ್ಧಾಪ್ಯ ವೇತನ ಮತ್ತಿತರ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳಿಗೆ ನಿಗದಿತ ದಿನಾಂಕದಂದು ಹಣ ದೊರಕುವುದಿಲ್ಲ. ಈ ವಿಳಂಬ ಪಡಿತರ ವ್ಯವಸ್ಥೆಯ ಫಲಾನುಭವಿಗಳನ್ನು ಉಪವಾಸ ಕೆಡಹಬಹುದು. ಫಲಾನುಭವಿಗಳಿಗೆ ಆಹಾರ ಧಾನ್ಯದ ಬದಲು ಹಣ ನೀಡುವಾಗ ಕೆಲವೊಮ್ಮೆ ತಿಂಗಳುಗಟ್ಟಲೆ ಹಣವೇ ಬರದಿದ್ದರೆ ಆಗ ಬಡಜನತೆ ಉಪವಾಸ ಇರಬೇಕಾಗುತ್ತದೆ. ಈ ಬಗ್ಗೆಯೂ ಸರಕಾರ ಯೋಚಿಸಬೇಕು ಎಂದು ಪ್ರೊ. ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News