ಈ ಸಾವು ನ್ಯಾಯವೇ?

Update: 2020-11-10 06:31 GMT

ಈ ದೇಶದಲ್ಲಿ ರೈತರ ಆತ್ಮಹತ್ಯೆಗಳು ಸುದ್ದಿಯಾದಷ್ಟು ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿಯಾಗಿರುವುದು ಕಡಿಮೆ. ಪ್ರತಿವರ್ಷ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆಗೈದ ರೈತರ ಅಂಕಿ-ಸಂಖ್ಯೆಗಳು ಹೊರ ಬಿದ್ದಂತೆ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆಗಳು ಹೊರ ಬೀಳುತ್ತಿಲ್ಲ. ‘ಪರೀಕ್ಷೆಯಲ್ಲಿ ಅನುತ್ತೀರ್ಣ; ವಿದ್ಯಾರ್ಥಿಯ ಆತ್ಮಹತ್ಯೆ’ ಎನ್ನುವ ಒಂದು ಸಾಲಿನಲ್ಲಿ ಪ್ರಕರಣ ಮುಗಿದು ಬಿಡುತ್ತದೆ. ‘ಅನುತ್ತೀರ್ಣಗೊಂಡದ್ದಕ್ಕಾಗಿ ವಿದ್ಯಾರ್ಥಿ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು?’ ‘ಆತನ ಆತ್ಮಹತ್ಯೆಯ ಹಿಂದಿರುವ ಒತ್ತಡಗಳಿಗೆ ಯಾರು ಕಾರಣರು?’ ಎನ್ನುವ ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲ. ರೈತರ ಆತ್ಮಹತ್ಯೆಗಳಿಗೆ ಸರಕಾರವನ್ನು ಹೊಣೆ ಮಾಡಲಾಗುತ್ತಿದೆ. ಹಾಗೆಯೇ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಹೊಣೆಯನ್ನೂ ಯಾರಾದರೂ ಹೊರಲೇಬೇಕು. ಈ ಆತ್ಮಹತ್ಯೆಯಲ್ಲಿ ವಿದ್ಯಾರ್ಥಿಯ ಪಾಲಕರು ಸಹಭಾಗಿಗಳಾಗಿರುವುದರಿಂದಲೇ, ಯಾರೂ ತನಿಖೆಗೆ ಒತ್ತಾಯಿಸುವುದಿಲ್ಲ ಮತ್ತು ಶಿಕ್ಷಣದ ಹೆಸರಿನಲ್ಲಿ ಹೇರುವ ಒತ್ತಡ ಮಕ್ಕಳ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಯಾರಿಗೂ ಅನ್ನಿಸುತ್ತಿಲ್ಲ. ಜಾತಿಯಂತಹ ಸಾಮಾಜಿಕ ಸಮಸ್ಯೆಗಳ ಜೊತೆಗೆ ಇದು ತಳಕು ಹಾಕದೇ ಇರುವುದರಿಂದಲೂ ಈ ಸಾವುಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಆಯಾ ಪೋಷಕರ, ಕುಟುಂಬದ ತೀರಾ ಖಾಸಗಿ ಸಮಸ್ಯೆಗಳಿವು ಎಂದು ಭಾವಿಸಿ ಆತ್ಮಹತ್ಯೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೇವೆ. ರೋಹಿತ್ ವೇಮುಲಾನ ಆತ್ಮಹತ್ಯೆ ಈ ದೇಶದ ಆತ್ಮಸಾಕ್ಷಿಯನ್ನು ತಟ್ಟಿ ಎಬ್ಬಿಸಿತು. ಅಲ್ಲೂ ಶೈಕ್ಷಣಿಕ ಸಂಸ್ಥೆಯೊಂದರ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿತ್ತು. ಆದರೆ ಜಾತಿ, ಅಸ್ಪಶ್ಯತೆಯ ಅನಿಷ್ಟ ಆ ಆತ್ಮಹತ್ಯೆಯ ಹಿಂದೆ ಇದ್ದುದರಿಂದ ಇಡೀ ದೇಶದ ಪ್ರಗತಿಪರ ಮನಸ್ಸು ಅದರ ವಿರುದ್ಧ ದಂಗೆ ಎದ್ದಿತು. ವಿದ್ಯಾರ್ಥಿಗಳ ಆತ್ಮಹತ್ಯೆಯ ಹಿಂದಿರುವ ಎರಡನೆಯ ಭೀಕರ ರೂಪವಿದು. ವ್ಯವಸ್ಥೆಯ ವಿರುದ್ಧ ಬಂಡೆದ್ದ ಒಂದೇ ಕಾರಣಕ್ಕಾಗಿ ಆತನನ್ನು ಮಾನಸಿಕವಾಗಿ ಹಿಂಸಿಸಿ, ಕಟ್ಟಕಡೆಗೆ ಆತ್ಮಹತ್ಯೆಗೈಯುವಂತೆ ಮಾಡಿತು. ಜಾತಿ ಕಾರಣಕ್ಕಾಗಿ ಅವಮಾನಗಳನ್ನು ಎದುರಿಸಿ, ಒತ್ತಡಗಳನ್ನು ತಾಳಲಾರದೆ ಖಿನ್ನತೆಗೆ ಬಲಿಯಾದ ವಿದ್ಯಾರ್ಥಿಗಳ ಸಂಖ್ಯೆ ಭಾರತದಲ್ಲಿ ಸಾಕಷ್ಟಿವೆೆ. ಇದರ ವಿರುದ್ಧ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆಯಾದರೂ ಪರಿಹಾರವನ್ನು ಇನ್ನೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣರಾದ ಒಬ್ಬನೇ ಒಬ್ಬನಿಗೆ ಈವರೆಗೆ ಶಿಕ್ಷೆಯಾಗಿಲ್ಲ. ಬದಲಿಗೆ, ರೋಹಿತ್ ವೇಮುಲಾನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯಿತು. ಇದೀಗ ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಇನ್ನೊಂದು ಹಂತವನ್ನು ತಲುಪಿದೆ. ಈವರೆಗೆ ಶಿಕ್ಷಣದ ಒತ್ತಡ, ಜಾತಿ ಕಾರಣಗಳಿಂದ ಆತ್ಮಹತ್ಯೆ ನಡೆಯುತ್ತಿದ್ದರೆ, ಈಗ ಶಿಕ್ಷಣ ಕೈಗೆಟಕುತ್ತಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆಗೈಯುತ್ತಿರುವ ಪ್ರಕರಣಗಳು ಸಾಲು ಸಾಲಾಗಿ ವರದಿಯಾಗುತ್ತಿವೆ. ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು, ಬಡವರು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡಷ್ಟು, ವಿದ್ಯಾರ್ಥಿಗಳು ಎದುರಿಸುತ್ತಿರುವ ಅತಂತ್ರತೆ, ಅದರ ದುಷ್ಪರಿಣಾಮಗಳು ಚರ್ಚೆಯಾಗುತ್ತಿಲ್ಲ.

ಹೈದರಾಬಾದ್‌ನ ಶಾದ್‌ನಗರ ಎಂಬಲ್ಲಿ ಬಿಎಸ್ಸಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಐಶ್ವರ್ಯಾ ರೆಡ್ಡಿ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ತನ್ನ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂಬ ಭಯ, ಆತಂಕದಿಂದ ಅಂತಿಮವಾಗಿ ಆತ್ಮಹತ್ಯೆಗೆ ಮೊರೆ ಹೋಗಿದ್ದಾಳೆ. ಆಕೆಯ ತಂದೆ ಮೋಟರ್ ಸೈಕಲ್ ಮೆಕ್ಯಾನಿಕ್. ಶೇ. 98.5 ಅಂಕ ಗಳಿಸಿ ಪಿಯುಸಿ ಉತ್ತೀರ್ಣಳಾಗಿದ್ದ ಈಕೆಯನ್ನು ಬಿಎಸ್ಸಿ ಕಲಿಸುವುದಕ್ಕಾಗಿ ತಂದೆ ತನ್ನ ಸಣ್ಣ ಮನೆಯನ್ನು ಎರಡು ಲಕ್ಷ ರೂಪಾಯಿಗೆ ಅಡವಿಟ್ಟಿದ್ದ. ಲಾಕ್‌ಡೌನ್ ತಂದೆ, ಮಕ್ಕಳ ಎಲ್ಲ ಕನಸುಗಳನ್ನು ನುಚ್ಚುನೂರು ಮಾಡಿತು. ಲಾಕ್‌ಡೌನ್ ಕಾರಣದಿಂದ ಸುಮಾರು ಮೂರು ತಿಂಗಳು ಗ್ಯಾರೇಜ್ ಬಂದ್ ಮಾಡಬೇಕಾಯಿತು. ಐಶ್ವರ್ಯಾ ರೆಡ್ಡಿ ಹಾಸ್ಟೆಲ್‌ನಿಂದ ಹೊರಬೀಳಬೇಕಾಯಿತು. ದೊಡ್ಡವಳ ವಿದ್ಯಾಭ್ಯಾಸಕ್ಕಾಗಿ ತಂದೆ, ಕಿರಿಯ ಪುತ್ರಿಯ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿದ. ನಟ ಸೋನು ಸೂದ್‌ಗೆ ಕೂಡ ತನ್ನ ಕಷ್ಟವನ್ನು ವಿವರಿಸಿ ಐಶ್ವರ್ಯಾ ಪತ್ರ ಬರೆದಿದ್ದಳಂತೆ. ಸರಕಾರವಂತೂ ಈಕೆಯ ಕಷ್ಟವನ್ನು ತಿರುಗಿ ನೋಡುವ ಸ್ಥಿತಿಯಲ್ಲೇ ಇರಲಿಲ್ಲ. ಯಾಕೆಂದರೆ ಇಡೀ ದೇಶವೇ ಸಂಕಷ್ಟದಲ್ಲಿದೆ. ಲಕ್ಷಾಂತರ ಜನ ಅಳುವಾಗ ಈಕೆಯ ಅಳುವನ್ನು ಪ್ರತ್ಯೇಕವಾಗಿ ಆಲಿಸುವುದು ಸರಕಾರಕ್ಕೆ ಕಷ್ಟ. ಆನ್‌ಲೈನ್ ತರಗತಿಗೆ ಹಾಜರಾಗಲು ಆಕೆಗೆ ಕನಿಷ್ಠ ಒಂದು ಲ್ಯಾಪ್‌ಟಾಪ್ ತೆಗೆದುಕೊಟ್ಟಿದ್ದರೂ, ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರಲಿಲ್ಲವೇನೋ. ಆದರೆ ದುರದೃಷ್ಟಕ್ಕೆ ತಂದೆಗೆ ಅದೂ ಸಾಧ್ಯವಾಗಲಿಲ್ಲ.

ಅಂತಿಮವಾಗಿ ‘‘ನನ್ನಿಂದಾಗಿ ನನ್ನ ಕುಟುಂಬ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ನಾನು ನನ್ನ ಕುಟುಂಬಕ್ಕೆ ಹೊರೆಯಾಗಿದ್ದೇನೆ. ನನ್ನ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದೇ ಇದ್ದರೆ ನನ್ನಿಂದ ಬದುಕಲು ಸಾಧ್ಯವಿಲ್ಲ’’ ಎನ್ನುವ ಪತ್ರವೊಂದನ್ನು ಬರೆದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐಶ್ವರ್ಯಾ ದಮನಿತ ಸಮುದಾಯಕ್ಕೆ ಸೇರಿಲ್ಲ ಎನ್ನುವ ಕಾರಣಕ್ಕಾಗಿ ಪ್ರಕರಣವನ್ನು ನಾವು ಬದಿಗೆ ಸರಿಸಬಾರದು. ಇಂದು ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಮನದಲ್ಲಿ ಖಿನ್ನತೆ, ಆತ್ಮಹತ್ಯೆಯ ಯೋಚನೆಗಳು ಹರಿದಾಡುತ್ತಿವೆ. ಶಿಕ್ಷಣ ಕ್ಷೇತ್ರ ಮೊಬೈಲ್‌ಇದ್ದವರು ಮತ್ತು ಮೊಬೈಲ್ ಇಲ್ಲದವರು ಎಂದು ಸ್ಪಷ್ಟವಾಗಿ ವಿಂಗಡಿಸಲ್ಪಟ್ಟಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಕೈಯಲ್ಲಿ ಮೊಬೈಲ್‌ಗಳು ಇಲ್ಲದೆ ಅಸಹಾಯಕರಾಗಿದ್ದಾರೆ. ಅವಮಾನಿತರಾಗಿದ್ದಾರೆ, ನೊಂದಿದ್ದಾರೆ. ಇವರಲ್ಲಿಯೂ ದಲಿತ ಮತ್ತು ಶೋಷಿತ ಸಮುದಾಯದ ಜನರೇ ಅಧಿಕ ಎನ್ನುವುದನ್ನು ನಾವು ಮರೆಯಬಾರದು. ಅತಿ ಹೆಚ್ಚು ಸಂಖ್ಯೆಯ ಬಡವರಿರುವುದು ಕೆಳಜಾತಿಗಳಲ್ಲಿ. ಹಾಗೆಯೇ ಮೇಲ್ಜಾತಿಗಳಲ್ಲಿ ಬಡವರಿಲ್ಲ ಎಂದಿಲ್ಲ. ಅವರೆಲ್ಲರೂ ಸಮಾನ ದುಃಖಿಗಳು. ಐಶ್ವರ್ಯಾ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡರೆ, ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಮೊಬೈಲ್‌ಗಳಿಲ್ಲದೆಯೇ ಶಿಕ್ಷಣ ವಂಚಿತರಾಗಿ ತಮ್ಮನ್ನು ತಾವು ಒಳಗೊಳಗೆ ಕೊಂದುಕೊಳ್ಳುತ್ತಿದ್ದಾರೆ. ಇವರೆಲ್ಲರೂ ಭಾರತದ ಭವಿಷ್ಯ ಎನ್ನುವುದನ್ನು ನಾವು ಮರೆಯಬಾರದು.

ಮೊಬೈಲ್ ಇದ್ದರೂ ಇಂಟರ್‌ನೆಟ್ ಸೌಲಭ್ಯಗಳಿಂದಲೂ ತೊಂದರೆ ಅನುಭವಿಸುವವರ ಸಂಖ್ಯೆ ಸಣ್ಣದೇನೂ ಅಲ್ಲ. ಹಾಗೆಯೇ ಲಾಕ್‌ಡೌನ್ ಕಾರಣದಿಂದಾಗಿ ಶಾಲೆಯ ಶುಲ್ಕವನ್ನು ಕಟ್ಟಲಾಗದೆ, ಆನ್‌ಲೈನ್ ಶಿಕ್ಷಣದ ಸೌಲಭ್ಯಗಳಿಂದ ವಂಚಿತರಾದವರಿದ್ದಾರೆ. ಒಂದು ರೀತಿಯಲ್ಲಿ ವಿದ್ಯಾರ್ಥಿಗಳ ಮುಗ್ಧ ಮನಸುಗಳು ಒಳಗೊಳಗೆ ಸಾಯುತ್ತಿವೆ. ಈ ಸಾವಿನ ಹೊಣೆಯನ್ನು ಸರಕಾರ ಸ್ವಯಂಪ್ರೇರಿತವಾಗಿ ಹೊತ್ತುಕೊಂಡು, ಪ್ರತಿಭಾವಂತ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವೇ ಪೂರ್ಣವಾಗಿ ಭರಿಸುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಡಬೇಕು. ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್ ವಿತರಿಸಬೇಕು ಅಥವಾ ಆನ್‌ಲೈನ್ ಶಿಕ್ಷಣವನ್ನು ತಾತ್ಕಾಲಿಕ ಎಲ್ಲರಿಗೂ ನಿಷೇಧಿಸಬೇಕು. ಲಾಕ್‌ಡೌನ್‌ನಿಂದ ಅತಂತ್ರವಾಗಿರುವ ಎಲ್ಲ ವಿದ್ಯಾರ್ಥಿಗಳಲ್ಲಿ ಭರವಸೆ, ಆತ್ಮವಿಶ್ವಾಸ ತುಂಬುವಂತಹ ಯೋಜನೆಯೊಂದನ್ನು ತಕ್ಷಣದಿಂದ ಜಾರಿಗೆ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News