ಬಲಪಂಥೀಯರ ಆಕ್ರೋಶಕ್ಕೆ ಮಣಿದು ದೀಪಾವಳಿ ಜಾಹೀರಾತು ವಾಪಸ್ ಪಡೆದ ತನಿಷ್ಕ್

Update: 2020-11-10 11:26 GMT

ಹೊಸದಿಲ್ಲಿ: ಇತ್ತೀಚೆಗಷ್ಟೇ ಅಂತರ್-ಧರ್ಮೀಯ ದಂಪತಿಯನ್ನು ಬಿಂಬಿಸಿದ ತನ್ನ ಜಾಹೀರಾತನ್ನು ಸಾಮಾಜಿಕ ಜಾಲತಾಣಿಗರ, ಪ್ರಮುಖವಾಗಿ ಬಲಪಂಥೀಯ ಸಂಘಟನೆಗಳ 'ಲವ್ ಜಿಹಾದ್' ಆರೋಪಗಳು ಹಾಗೂ ಆಕ್ರೋಶಕ್ಕೆ ಮಣಿದು ವಾಪಸ್ ಪಡೆದಿದ್ದ ತನಿಷ್ಕ್ ಇದೀಗ 'ಪಟಾಕಿ-ಮುಕ್ತ ದೀಪಾವಳಿ ಆಚರಣೆ' ಕುರಿತಾದ ತನ್ನ ಲೇಟೆಸ್ಟ್ ಜಾಹೀರಾತನ್ನೂ ಟೀಕೆಗಳಿಗೆ ಮಣಿದು ವಾಪಸ್ ಪಡೆದಿದೆ. "ತನಿಷ್ಕ್ ಹಿಂದುಗಳಿಗೆ ದೀಪಾವಳಿ ಹೇಗೆ ಆಚರಿಸಬೇಕೆಂಬ ಕುರಿತು ಸಲಹೆ ನೀಡುವುದನ್ನು ನಿಲ್ಲಿಸಬೇಕು,'' ಎಂದು ಟೀಕಾಕಾರರು ಹೇಳಿಕೊಂಡಿದ್ದಾರೆ. #ThisDiwali_BoycottTanishq ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ಆಗಿದೆ.

ಸಂಸ್ಥೆಯ ಲೇಟೆಸ್ಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸೆಲೆಬ್ರಿಟಿಗಳಾದ ನೀನಾ ಗುಪ್ತಾ, ಅಲಯ ಫರ್ನಿಚರ್‍ವಾಲ, ನಿಮ್ರತ್ ಕೌರ್ ಹಾಗೂ ಸಯಾನಿ ಗುಪ್ತಾ ತಾವು ಹೇಗೆ ಈ ವರ್ಷ ದೀಪಾವಳಿ ಆಚರಿಸುತ್ತೇವೆ ಎಂಬ ಕುರಿತು ಮಾತನಾಡುತ್ತಿರುವುದನ್ನು ತೋರಿಸಲಾಗಿದೆ.

ಜಾಹೀರಾತಿನಲ್ಲಿ ಸಯಾನಿ ಗುಪ್ತಾ ಅವರು "ಬಹಳ ಸಮಯದ ನಂತರ ತಾಯಿಯನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದೇನೆ. ಖಂಡಿತವಾಗಿ ಪಟಾಕಿಗಳಿಲ್ಲ. ಯಾರು ಕೂಡ ಪಟಾಕಿ ಸಿಡಿಸಬಾರದೆಂದು ನಾನು ಅಂದುಕೊಂಡಿದ್ದೇನೆ. ತುಂಬ ದೀಪಗಳು,. ನಗು ಹಾಗೂ ಸಕಾರಾತ್ಮಕತೆ,'' ಎಂದು ಹೇಳುತ್ತಾರೆ. ನಂತರ ಅಲಯ ಮಾತನಾಡಿ ತಾವು ಬಹಳಷ್ಟು ಸಿಹಿ ತಿಂಡಿ ತಿಂದು ಸ್ನೇಹಿತರು ಕುಟುಂಬದ ಜತೆ ಸಮಯ ಕಳೆಯುವುದಾಗಿ ಹೇಳಿದರೆ ನೀನಾ ಗುಪ್ತಾ ತಾವು ಚೆನ್ನಾದ ಬಟ್ಟೆ ಧರಿಸಿ ಸುಂದರವಾದ ಆಭರಣ ಧರಿಸುವುದಾಗಿ ಹೇಳುತ್ತಾರೆ.

"ಈ ವರ್ಷ ಕುಟುಂಬದ ಜತೆಗೆ ಸಮಯ ಕಳೆಯುವುದು ಹೆಚ್ಚು ಮುಖ್ಯ. ಎಲ್ಲರೂ ತಮ್ಮ ಪ್ರೀತಿಪಾತ್ರರೊಂದಿಗೆ ದೀಪಾವಳಿ ಸಂದರ್ಭ ಸಮಯ ಕಳೆಯಬೇಕು,''ಎಂದು ನಿಮ್ರತ್ ಕೌರ್ ಕೊನೆಗೆ ಹೇಳುತ್ತಾರೆ.

ತನಿಷ್ಕ್ ಹಿಂದುಗಳ ಭಾವನೆಗಳನ್ನು ನೋಯಿಸುವ ಉದ್ದೇಶ ಹೊಂದಿದೆ ಅದರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದೂ ಕೆಲವರು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News