ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದು ಹೀಗೆ...

Update: 2020-11-10 11:52 GMT

ಬೆಂಗಳೂರು, ನ.10: 'ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರ ಕೊಟ್ಟ ತೀರ್ಪನ್ನು ನಾವು ಗೌರವಯುತವಾಗಿ ಒಪ್ಪುತ್ತೇವೆ. ಪಕ್ಷದ ಅಧ್ಯಕ್ಷನಾಗಿ ಈ ಸೋಲಿನ ಹೊಣೆ ನಾನು ಹೊರುತ್ತೇನೆಯೇ ಹೊರತು, ಬೇರೆಯವರ ಮೇಲೆ ಹಾಕುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಬಂದಿದೆ. ಮತದಾರರು ಕೊಟ್ಟ ತೀರ್ಪನ್ನು ನಾವು ಬಹಳ ಗೌರವಯುತವಾಗಿ ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಮತದಾರರ ತೀರ್ಪು ಪ್ರಶ್ನೆ ಮಾಡುವುದಿಲ್ಲ. ಈ ಫಲಿತಾಂಶ ಹೇಗಾಯಿತು, ಯಾಕಾಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ಕೂತು ಚರ್ಚೆ ಮಾಡುತ್ತೇವೆ. ಎಲ್ಲಿ ಏನೇನು ಸರಿ ಮಾಡಿಕೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು. 

ಈ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ನಾನಾಗಲಿ, ಪಕ್ಷವಾಗಲಿ ಹಿಂಜರಿಯುವ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಶೇ.15ರಷ್ಟು ಅನುಕೂಲವಾಗುವ ಅನುಭವ ನಮಗಿದೆ. ನಾವೂ ಹಿಂದೆ ಬಳ್ಳಾರಿ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಗೆದ್ದರೂ ನಂತರ ಚುನಾವಣೆಯಲ್ಲಿ ಸೋತಿದ್ದೆವು. ಹೀಗಾಗಿ ಯಾರೂ ಬೇಸರವಾಗುವುದು ಬೇಡ. ಈ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿರುವ ಕಾರ್ಯಕರ್ತರು ಹಾಗೂ ರಾಜ್ಯದ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂದರು.

ನಮ್ಮ ರಾಜರಾಜೇಶ್ವರಿ ನಗರದಲ್ಲಿ ಇಷ್ಟು ಅಂತರ ನಿರೀಕ್ಷೆ ಮಾಡಿರಲಿಲ್ಲ. ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿಂದ ಕೆಲವು ಸಾವಿರ ಮತಗಳ ಅಂತರದಲ್ಲಿ ಫಲಿತಾಂಶ ಬರಬಹುದು ಎಂದು ಭಾವಿಸಿದ್ದೆ. ಭವಿಷ್ಯದ ಲೆಕ್ಕಾಚಾರದೊಂದಿಗೆ ನಾವು ನಮ್ಮ ಅಭ್ಯರ್ಥಿಯನ್ನು ಸೂಚಿಸಿದ್ದೆವು. ಒಳ್ಳೆಯ ಅಭ್ಯರ್ಥಿಗೆ ಜನ ಕೂಡ ಸಹಕಾರ ನೀಡಿದ್ದಾರೆ. ಕುಸುಮಾ ಅವರು ಉತ್ತಮ ಹೋರಾಟ ಮಾಡಿದ್ದಾರೆ. ನಮಗೆ ಸಿಕ್ಕಿರುವ ಮತ ಕೇವಲ ನಮ್ಮ ಪಕ್ಷದ ಮತ ಮಾತ್ರ ಅಲ್ಲ. ಬೇರೆ ಪಕ್ಷದ ಮತದಾರರು ಮತ ಹಾಕಿದ್ದಾರೆ. ಅವರು ಕೊಟ್ಟ ತೀರ್ಪನ್ನು ನಾವು ಒಪ್ಪುತ್ತೇವೆ. ಶಿರಾದಲ್ಲಿ ನಮ್ಮ ಲೆಕ್ಕಾಚಾರ ತಪ್ಪಾಗಿದೆ. ಅಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ನಮ್ಮ ಪಕ್ಷದ ಎಲ್ಲ ಮುಖಂಡರು ನಿರೀಕ್ಷಿಸಿದ್ದೆವು. ಅಲ್ಲಿ ಬಿಜೆಪಿಗೆ ಹೊಸದಾಗಿ ಅಷ್ಟು ಮತ ಹೋಗಿರುವುದು ಅಚ್ಚರಿ ತಂದಿದೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಹೇಗೆ ಪಡೆಯುವುದು, ಕ್ಷೇತ್ರಕ್ಕಾಗಿ ಹೇಗೆ ದುಡಿಯಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ನಿಮಗೆ ಮೊದಲ ಚುನಾವಣೆ ಇದು, ಸೋತಿದ್ದೀರಿ ಎಂದು ಅನೇಕರು ಹೇಳುತ್ತಿದ್ದಾರೆ. ನಾವು ಮೊದಲ ಚುನಾವಣೆಗಳನ್ನು ಸೋತು ಬಂದಿದ್ದೇನೆ. 1985ರಲ್ಲಿ ಮೊದಲು ಸ್ಪರ್ಧಿಸಿದಾಗ ಸೋತಿದ್ದೆ. ನಂತರ ಗೆದ್ದುಕೊಂಡು ಬಂದಿದ್ದೇನೆ. ಹೀಗಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂಬುದರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಕಾರ್ಯಕರ್ತರ ಸಂಘಟನೆ ಮಾಡಬೇಕು, ಸರ್ಕಾರಕ್ಕೆ ಸಂದೇಶ ರವಾನಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆವು. ಮುಂದಿನ ದಿನಗಳಲ್ಲಿ ನಮ್ಮ ಸಿದ್ಧಾಂತ ಗಮನದಲ್ಲಿಟ್ಟುಕೊಂಡು ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಸುತ್ತೇವೆ. ಜನ ತೀರ್ಪು ಕೊಟ್ಟಿದ್ದರೂ ಸರ್ಕಾರದಲ್ಲಿ ಬೇಕಾದಷ್ಟು ವೈಫಲ್ಯಗಳಿವೆ. ಹೀಗಾಗಿ ರಾಜ್ಯದ ಜನತೆ ಹಿತಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ.

ನಮ್ಮ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಹೊಂದಾಣಿಕೆ ಹಾಗೂ ಕಾರ್ಯದಲ್ಲಿ ಯಾವುದೇ ಕೊರತೆ ಇರಲಿಲ್ಲ. ಸರ್ಕಾರ ಹೇಗೆ ಅಧಿಕಾರ ದುರುಪಯೋಗ ಮಾಡಿದೆ, ಹಣ ಹಂಚಿದೆ ಎಂಬುದನ್ನೂ ನೋಡಿದ್ದೇವೆ. ಈಗ ಆ ಚರ್ಚೆ ಬೇಡ. ನಾವು ಸೋತಿದ್ದೇವೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಜನ ಮತ ಹಾಕಿಲ್ಲ ಎಂದ ಅವರು, ಅಧ್ಯಕ್ಷನಾಗಿ ಇದು ನನ್ನ ಜವಾಬ್ದಾರಿ ನಿಜ. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಮ್ಮ ನಾಯಕರು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಸೋಲನ್ನು ನಾವು ಒಪ್ಪಿದ್ದೇವೆ. ಈ ಸೋಲಿನ ಜವಾಬ್ದಾರಿ ನಾನು ಹೊರುತ್ತೇನೆ. ಬೇರೆಯವರ ಮೇಲೆ ಸೋಲಿನ ಹೊಣೆ ಹೊರಿಸುವುದಿಲ್ಲ ಎಂದು ಹೇಳಿದರು.

ಹೊಸಬರಿಗೆ ಆದ್ಯತೆ

ಪಕ್ಷಕ್ಕೆ ಯುವಕರು, ಹಿರಿಯರು, ಹಳೆ ನಾಯಕರು, ಹೊಸಬರು ಎಲ್ಲರೂ ಬೇಕು. ಹೀಗಾಗಿ ಯುವ, ಸುಸಂಸ್ಕೃತ ಹಾಗೂ ವಿದ್ಯಾವಂತ ಅಭ್ಯರ್ಥಿ ಆಯ್ಕೆ ಮಾಡಿದೆವು. ನಮ್ಮ ಅಭ್ಯರ್ಥಿ ಬಗ್ಗೆ ಯಾರೂ ಮಾತನಾಡಲು ಸಾಧ್ಯವಾಗಲಿಲ್ಲ. ಮುಂದೆಯೂ ಬೇರೆ ಕ್ಷೇತ್ರಗಳಲ್ಲಿ ಹೊಸಬರನ್ನು ತಯಾರು ಮಾಡುತ್ತೇವೆ ಎಂದರು.

ಬಿಹಾರದಲ್ಲಿ ಮಹಾಘಟಬಂಧನದ ಮೇಲೆ ನಿರೀಕ್ಷೆ ಇತ್ತು:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ ಮುನ್ನಡೆ ಪಡೆದರೂ ನಂತರ ಹಿನ್ನಡೆ ಅನುಭವಿಸಿದೆ. ಇಲ್ಲೂ ನಾವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಕಾಂಗ್ರೆಸ್ ಹಾಗೂ ಆರ್ ಜೆಡಿ ಸೇರಿ ಹೋರಾಟ ಮಾಡಿದ್ದೆವು. ಈ ಬಾರಿ ಸರ್ಕಾರ ಮಾಡಲು ಅಂಕಿ ಅಂಶ ಸಿಗದಿದ್ದರೂ 100ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತಿರುವುದು ತೃಪ್ತಿ ಇದೆ. ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಎನ್ ಡಿಎ ವಿರುದ್ಧದ ಅಲೆ ಪ್ರಾರಂಭವಾಗಿದೆ ಎಂದು ಡಿಕೆಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News