ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಜಯ: ಪ್ರತಿಪಕ್ಷ ಕಾಂಗ್ರೆಸ್- ಜೆಡಿಎಸ್‍ಗೆ ತೀವ್ರ ಮುಖಭಂಗ

Update: 2020-11-10 14:19 GMT

ಬೆಂಗಳೂರು, ನ. 10: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಡಾ.ಸಿ.ಎಂ.ರಾಜೇಶ್ ಗೌಡ, ಮುನಿರತ್ನ ಭರ್ಜರಿ ಜಯಗಳಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದು ತೀವ್ರ ಮುಖಭಂಗ ಅನುಭವಿಸಿವೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಕುಸುಮಾ ಎಚ್. ಅವರ ವಿರುದ್ಧ ಒಟ್ಟು 58,113 ಮತಗಳ ಭರ್ಜರಿ ಅಂತರದಿಂದ ಜಯಭೇರಿ ಬಾರಿಸಿದ್ದು, ಶಾಸಕರಾಗಿ ಪುನಃ ಆಯ್ಕೆಯಾಗಿದ್ದಾರೆ. ಅತ್ತ ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಎಂ.ಸಿ.ರಾಜೇಶ್ ಗೌಡ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ ವಿರುದ್ಧ 13,414 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಬಯಲುಸೀಮೆಯಲ್ಲಿ ಬಿಜೆಪಿಯ 'ಕಮಲ' ಅರಳಿಸಿದ್ದಾರೆ.

ಆರ್‍ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನ ಒಟ್ಟು1,25,990 ಮತಗಳನ್ನು ಗಳಿಸುವ ಮೂಲಕ ವಿಜಯಮಾಲೆ ಧರಿಸಿದ್ದರೆ, ಕಾಂಗ್ರೆಸ್‍ನ ಕುಸುಮಾ ಎಚ್. 67,877 ಹಾಗೂ ಜೆಡಿಎಸ್‍ನ ಅಭ್ಯರ್ಥಿ ವಿ.ಕೃಷ್ಣಮೂರ್ತಿ 10,269 ಮತಗಳನ್ನು ಗಳಿಸಿದ್ದು, ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್‍ ಗೌಡ ಅವರು ಒಟ್ಟು 76,564 ಮತಗಳನ್ನು ಗಳಿಸುವ ಮೂಲಕ ಜಯದ ನಗೆಬೀರಿದ್ದರೆ, ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ-63,150 ಹಾಗೂ ಜೆಡಿಎಸ್‍ನ ಅಮ್ಮಾಜಮ್ಮ-36,783 ಮತಗಳನ್ನು ಪಡೆದಿದ್ದು, ಸೋಲನ್ನು ಅನುಭವಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದ ಮುನಿರತ್ನ ಬದಲಾದ ಕಾಲಘಟ್ಟದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಕಾರಣ ಹಾಗೂ ಶಿರಾದಲ್ಲಿ ಜೆಡಿಎಸ್‍ನಿಂದ ಆಯ್ಕೆಯಾಗಿದ್ದ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಉಪಚುನಾವಣೆ ಎದುರಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿವೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತದಾನವಾದ ಹಿನ್ನೆಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಮುನಿರತ್ನ ಅವರು ಮತ ಎಣಿಕೆ ಆರಂಭದಿಂದಲೂ ಕೊನೆಯ ವರೆಗೂ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ನಿರೀಕ್ಷೆಗೂ ಮೀರಿ ಕಳೆದ ಬಾರಿಗಿಂತಲೂ(25,492-ಅಂತರ) 32,621 ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿದ್ದು, ರಾಜರಾಜೇಶ್ವರಿ ನಗರದ 'ರಾಜ ನಾನೇ' ಎಂದು ನಗೆಬೀರಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಕೇವಲ 16,959 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿಗೆ ಉಪಚುನಾವಣೆ ಘೋಷಣೆ ಬಳಿಕ ಅಭ್ಯರ್ಥಿಯನ್ನು ಆಯ್ಕೆಮಾಡಿದ್ದರೂ ಗೆಲುವು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿತ್ತು. ಆದರೆ, ಅಂತಿಮವಾಗಿ ಬಿಜೆಪಿ ನಾಯಕರ ಪ್ರಯತ್ನದ ಫಲದಿಂದ ಬಯಲುಸೀಮೆಯ ಶಿರಾ ಕ್ಷೇತ್ರದಲ್ಲಿಯೂ ಕಮಲ ಅರಳಿದೆ.

ಅಭಿವೃದ್ಧಿ-ಒಗ್ಗಟ್ಟಿಗೆ ಸಂದ ಜಯ: ರಾಜ್ಯದ ಸರಕಾರದ ಬಿತ್ತಿದ `ಅಭಿವೃದ್ಧಿಯ ಕನಸು' ಮತ್ತು ಮುಖಂಡರ ಒಗ್ಗಟ್ಟಿನ ಪ್ರಚಾರದ ಪರಿಣಾಮ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ ಸಿಕ್ಕಿದೆ. ರಾಜರಾಜೇಶ್ವರಿ ನಗರದಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಭರವಸೆಯ ಜೊತೆಗೆ ಮುನಿರತ್ನ ಆಯ್ಕೆಯಾದರೆ ಅವರು ಸಚಿವರಾಗಲಿದ್ದಾರೆಂದು ಪ್ರಚಾರ ಮಾಡಿದ್ದು, ಮತದಾರರು ಬಿಜೆಪಿ ಕೈಹಿಡಿಯುವಂತೆ ಮಾಡಿತು.

ಅದೇ ರೀತಿಯಲ್ಲಿ ಶಿರಾ ಕ್ಷೇತ್ರದಲ್ಲಿಯೂ ಬಹುದಿನಗಳಿಂದಲೂ ನನೆಗುದಿಗೆ ಬಿದ್ದಿದ್ದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದರ ಜೊತೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮತ್ತು ಕುಂಚಿಗ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದು ಬಿಜೆಪಿಗೆ ಅನುಕೂಲವಾಯಿತು. ಅಲ್ಲದೆ, ಕ್ಷೇತ್ರದಲ್ಲಿ ಬಿಜೆಪಿಯ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಪ್ರಚಾರ ನಡೆಸಿದ್ದು ಅಭ್ಯರ್ಥಿ ಗೆಲುವಿನ ದಡ ಸೇರಿಸಲು ನೆರವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಆಡಳಿತಕ್ಕೆ ಜನತೆ ಉಪಚುನಾವಣೆಯಲ್ಲಿ ಮನ್ನಣೆ ನೀಡಿದಂತಾಗಿದೆ.

ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ರಾಜ್ಯ ಸರಕಾರದ ಆಡಳಿತ ವೈಫಲ್ಯಗಳನ್ನು ಉಪಚುನಾವಣೆಯಲ್ಲಿ ಪ್ರಚಾರ ಮಾಡುವುದಕ್ಕಿಂತ ತಮ್ಮ ಮಧ್ಯೆಯೇ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದರು. ಅಲ್ಲದೆ, 'ಸಿಎಂ' ಸ್ಥಾನದ ಕುರಿತು ಸುಖಾಸುಮ್ಮನೆ ಚರ್ಚೆ ನಡೆಸಿದ್ದು, ಮತ್ತೆ ಎರಡೂ ಕ್ಷೇತ್ರಗಳಲ್ಲಿ ಗೆಲವಿಗೆ ಅಗತ್ಯ ಕಾರ್ಯತಂತ್ರ ರೂಪಿಸುವಲ್ಲಿ ವಿಫಲವಾಗಿದ್ದು ಸೋಲಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿಯೂ ಪಕ್ಷೇತರ ಅಭ್ಯರ್ಥಿಗಳನ್ನು ಹಿಂದಿಕ್ಕಿ `ನೋಟಾ' ಗಮನ ಸೆಳೆದಿದೆ. ಶಿರಾ ಕ್ಷೇತ್ರದಲ್ಲಿ ಒಟ್ಟು 643 ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಟ್ಟು 2,497 ಮತಗಳು 'ನೋಟಾ'ಗೆ ಬಿದ್ದಿವೆ.

ಶಿರಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಗಿರೀಶ್ 1,697 ಮತಗಳನ್ನು ಗಳಿಸಿದ್ದರೆ, ಕುಡಿಯುವ ನೀರಿನ ಮಾರಾಟದ ವಿರುದ್ಧ ಮೌನ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗಮನ ಸೆಳೆದಿರುವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಬ್ರೋಸ್ ಡಿ.ಮೆಲ್ಲೋ 123 ಮತಗಳನ್ನು ಗಳಿಸಿದ್ದಾರೆ. ಒಟ್ಟು 183 ಮತಗಳು ತಿರಸ್ಕೃತವಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರ

ಮುನಿರತ್ನ(ಬಿಜೆಪಿ)-1,25,990

ಕುಸುಮಾ ಎಚ್.(ಕಾಂಗ್ರೆಸ್)-67,877

ವಿ.ಕೃಷ್ಣಮೂರ್ತಿ(ಜೆಡಿಎಸ್)-10,269

ಬಿಜೆಪಿ ಗೆಲುವಿನ ಅಂತರ-58,113

ಶಿರಾ ಕ್ಷೇತ್ರ

ಡಾ.ಸಿ.ಎಂ.ರಾಜೇಶ್‍ ಗೌಡ(ಬಿಜೆಪಿ)-76,564

ಟಿ.ಬಿ.ಜಯಚಂದ್ರ(ಕಾಂಗ್ರೆಸ್)-63,150

ಅಮ್ಮಾಜಮ್ಮ(ಜೆಡಿಎಸ್)-36,783

ಬಿಜೆಪಿ ಗೆಲುವಿನ ಅಂತರ-13,414

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News