ಉಪಚುನಾವಣೆಯಲ್ಲಿ ಅರಳಿದ ಕಮಲ: ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು ಹೀಗೆ...

Update: 2020-11-10 14:28 GMT

ಬೆಂಗಳೂರು, ನ.10: ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಜಯಸಾಧಿಸುವ ಮೂಲಕ ಬಿಜೆಪಿಯು ಮತ್ತೊಮ್ಮೆ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿ ದಾಖಲೆ ನಿರ್ಮಿಸಿರುವುದು ಸಂತೋಷದ ಸಂಗತಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರದ ಸಾಧನೆ ಮತ್ತು ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರಕಾರ ಕೈಗೊಂಡ ಜನಹಿತ ಕಾರ್ಯಕ್ರಮಗಳು ಜನತೆಗೆ ಸಮಾಧಾನ ತಂದಿದೆ ಎಂಬುದು ಈ ಚುನಾವಣಾ ಫಲಿತಾಂಶದ ಮೂಲಕ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ರಾಜ್ಯ ಸರಕಾರದ ಆಡಳಿತವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸಿದ್ದರು. ಆದರೆ ಈ ಎರಡೂ ಕ್ಷೇತ್ರಗಳ ಮತದಾರರು ಈ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿ ನಮ್ಮ ಸರಕಾರದ ಸಕರಾತ್ಮಕ, ಜನಪರ ಕಾರ್ಯಕ್ರಮಗಳಿಗೆ ಬೆಂಬಲ ಸೂಚಿಸಿರುವುದು ಉತ್ತಮ ರಾಜಕೀಯ ಬೆಳವಣಿಗೆಯಾಗಿದೆ ಎಂದು ಸವದಿ ಅಭಿಪ್ರಾಯಪಟ್ಟಿದ್ದಾರೆ.

ಈ ಎರಡು ಫಲಿತಾಂಶಗಳ ಮೂಲಕ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಿರುವುದರಿಂದ ಇನ್ನಾದರೂ ಮುಂದೆ ಈ ಪಕ್ಷಗಳು ನಕಾರಾತ್ಮ ರಾಜಕೀಯ(ನೆಗೆಟಿವ್ ಪಾಲಿಟಿಕ್ಸ್) ಕೈಬಿಡುವಂತಾಗಲಿ. ಅಭಿವೃದ್ಧಿಪರವಾದ ಈ ಉತ್ತಮ ಫಲಿತಾಂಶವನ್ನು ನೀಡಿದ ಪ್ರಭುದ್ಧ ಮತದಾರರಿಗೆ ಮತ್ತು ವಿಜಯಿಯಾದ ಮುನಿರತ್ನ ಮತ್ತು ರಾಜೇಶ್ ಗೌಡರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿವೃದ್ಧಿಯ ಗೆಲುವು: ಎಸ್.ಟಿ.ಸೋಮಶೇಖರ್

ಮೊದಲು ನಾನು ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹಾಗೂ ಮುನಿರತ್ನ ಅವರ ಅಭಿವೃದ್ಧಿ ಕೆಲಸಗಳಿಗೆ ಮತದಾರರು ಕೈ ಹಿಡಿದಿದ್ದಾರೆ. ಇದನ್ನು ಪಕ್ಷದ ಹಾಗೂ ಅಭಿವೃದ್ಧಿಯ ಗೆಲುವೆಂದು ನಾನು ಹೇಳುತ್ತೇನೆ. ನಾನು ಈ ಮೊದಲೇ ಹೇಳಿದ ಹಾಗೆ ಭಾರಿ ಅಂತರದಲ್ಲಿ ಮುನಿರತ್ನ ಗೆಲುವು ಸಾಧಿಸಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಬಿಎಸ್‍ವೈ ಆಡಳಿತಕ್ಕೆ ದೊರೆತ ಜನಬೆಂಬಲ: ಡಿ.ವಿ.ಸದಾನಂದಗೌಡ

2018ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆದ್ದಿದ್ದ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳನ್ನು ಈಗ ಬಿಜೆಪಿ ವಶಪಡಿಸಿಕೊಂಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತವರ ತಂಡಕ್ಕೆ ಅಭಿನಂದನೆಗಳು. ಹಾಗೆಯೇ ಇದು ಯಡಿಯೂರಪ್ಪ ಆಡಳಿತಕ್ಕೆ ದೊರೆತ ಜನಬೆಂಬಲವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಜನಪರ ಆಡಳಿತಕ್ಕೆ ಮತದಾರರ ಮನ್ನಣೆ: ಗೋವಿಂದ ಕಾರಜೋಳ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನಪರ ಆಡಳಿತ, ಜನಹಿತ ಕಾರ್ಯಕ್ರಮಗಳು ಹಾಗೂ ಸರಕಾರದ ಸಾಧನೆಗಳಿಗೆ ಮತದಾರರು ಮನ್ನಣೆ ನೀಡಿ, ಎರಡೂ ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಭೂತಪೂರ್ವವಾಗಿ ಜಯಶೀಲರನ್ನಾಗಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜೇಶ್ ಗೌಡ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಕಾರಜೋಳ, ಈ ಗೆಲುವಿಗೆ ಕಾರಣೀಭೂತರಾದ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲವು ದಾಖಲಿಸಿದೆ. ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ಕೆ ತಮ್ಮನ್ನು ನಿಯೋಜಿಸಿದ್ದರು. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ನಾವೆಲ್ಲರೂ ಸಂಘಟಿತವಾಗಿ ಚುನಾವಣಾ ಕಾರ್ಯನಿರ್ವಹಿಸಿದೆವು ಎಂದು ಅವರು ತಿಳಿಸಿದ್ದಾರೆ.

ಜನತೆ ನಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ, ಸಾಧನೆಗೆ ಮನ್ನಣೆ ನೀಡಿ, ಅಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿಸಿದ್ದಾರೆ. ಎಲ್ಲಾ ಮತದಾರರಿಗೆ, ಕಾರ್ಯಕರ್ತರಿಗೆ ಅಭಾರಿಯಾಗಿರುವುದಾಗಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ಜನತೆ ಅಭಿವೃದ್ಧಿಯ ಪರವಾಗಿದ್ದಾರೆ. ನಮ್ಮ ಸರಕಾರದ ಮೂಲ ಮಂತ್ರವೇ ಅಭಿವೃದ್ಧಿಯಾಗಿದೆ. ಮತದಾರರು ಪ್ರಬುದ್ಧರಿದ್ದಾರೆ. ಅಭಿವೃದ್ಧಿಯ ಪರವಾಗಿರುವ ನಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಬಿಹಾರ ರಾಜ್ಯದ ವಿಧಾನ ಸಭಾ ಚುನಾವಣೆಯ ಫಲಿತಾಂಶವೂ ಬಿಜೆಪಿ ಮತ್ತು ಮಿತ್ರಪಕ್ಷಗಳ ಪರ ವ್ಯಕ್ತವಾಗಿದೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News