ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನತೆಯ ಮನ್ನಣೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

Update: 2020-11-10 16:17 GMT

ಬೆಂಗಳೂರು, ನ.10: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮತದಾರರು ರಾಜ್ಯದ ಅಭಿವೃದ್ಧಿಯನ್ನು ಗಮನಿಸಿ ಮತದಾನ ಮಾಡಿರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಕೇಂದ್ರ ಸರಕಾರವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅತ್ಯುತ್ತಮವಾಗಿ ಅನುಷ್ಠಾನಕ್ಕೆ ತರುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಕಾರ್ಯವೈಖರಿಯನ್ನೂ ಜನರು ಗಮನಿಸಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸ್ಪಷ್ಟ ಉದಾಹರಣೆ ಎಂದು ಅವರು ತಿಳಿಸಿದ್ದಾರೆ.

ಶಿರಾದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯವನ್ನು ಇಲ್ಲಿ ಕಡೆಗಣಿಸಿತ್ತು. ಇನ್ನೊಂದೆಡೆ ಪಕ್ಷವು ಹೊಸ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸಂಘಟನೆ ಮೂಲಕ ಗೆಲುವು ಸಾಧಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ಎನ್‍ಡಿಎ ಉತ್ತಮ ಫಲಿತಾಂಶ ಹಾಗೂ ಮಧ್ಯಪ್ರದೇಶ, ಗುಜುರಾತ್, ತೆಲಂಗಾಣ, ದೇಶದ ಇತರ ಕಡೆಗಳಲ್ಲಿ ಉಪ ಚುನಾವಣೆಯಲ್ಲೂ ಗೆಲುವಿಗೆ ಪ್ರಧಾನಿ ಮೋದಿ ಅಭಿವೃದ್ಧಿಯ ಸಾಧನೆಯೆ ಕಾರಣ. ಅವರಿಗೆ, ದೇಶದ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಧನ್ಯವಾದಗಳು ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸಂಭ್ರಮಾಚರಣೆ

ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಹಾಗೂ ಡಾ.ರಾಜೇಶ್ ಗೌಡ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ಸಂಭ್ರಮಾಚರಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News