ಉಪಚುನಾವಣೆ: ಕಾಂಗ್ರೆಸ್‌ನ 31 ಸ್ಥಾನ ಕಿತ್ತುಕೊಂಡ ಬಿಜೆಪಿ

Update: 2020-11-11 03:32 GMT

ಹೊಸದಿಲ್ಲಿ, ನ11: ಹನ್ನೊಂದು ರಾಜ್ಯಗಳ 59 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಪೈಕಿ ಕಾಂಗ್ರೆಸ್ ಪಕ್ಷದಿಂದ 31 ಸ್ಥಾನಗಳನ್ನು ಕಿತ್ತುಕೊಂಡಿದೆ. ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಈ ಎರಡು ರಾಜ್ಯಗಳಲ್ಲೇ ಕಾಂಗ್ರೆಸ್ ಪಕ್ಷದ 26 ಸ್ಥಾನಗಳನ್ನು ಕಸಿದುಕೊಂಡಿದೆ.

ಗುಜರಾತ್‌ನಲ್ಲಿ ಚುನಾವಣೆ ನಡೆದ ಎಲ್ಲ ಎಂಟು ಕ್ಷೇತ್ರಗಳು ಬಿಜೆಪಿಗೆ ದಕ್ಕಿವೆ. ಇದರಲ್ಲಿ ಸೌರಾಷ್ಟ್ರ ಭಾಗದ ಐದು ಕ್ಷೇತ್ರಗಳು ಹಾಗೂ ಬುಡಕಟ್ಟು ಜನಾಂಗದ ಪ್ರಾಬಲ್ಯ ಇರುವ ದಂಗ್ ಕ್ಷೇತ್ರ ಸೇರಿವೆ. ಗೆದ್ದವರ ಪೈಕಿ ಐದು ಮಂದಿ ಕಳೆದ ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವನ್ನು ತೊರೆದವರು. 182 ಸದಸ್ಯಬಲದ ವಿಧಾನಸಭೆಯಲ್ಲಿ ಇದೀಗ ಬಿಜೆಪಿ 111 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ ಬಲ 65ಕ್ಕೆ ಕುಸಿದಿದೆ.

ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದ ಮಣಿಪುರದಲ್ಲಿ ಕೂಡಾ ಕಾಂಗ್ರೆಸ್‌ನ ನಾಲ್ಕು ಸ್ಥಾನಗಳನ್ನು ಬಿಜೆಪಿ ಕಸಿದುಕೊಂಡಿದೆ. ಕಾಂಗ್ರೆಸ್ ವಶದಲ್ಲಿದ್ದ ಮತ್ತೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

ಮಧ್ಯಪ್ರದೇಶದಲ್ಲಿ ಉಪಚುನಾವಣೆ ನಡೆದ 28 ಸ್ಥಾನಗಳ ಪೈಕಿ 19ನ್ನು ಬಿಜೆಪಿ ಗೆದಿದೆ. ಕಾಂಗ್ರೆಸ್ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, 18 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿಗೆ ರಾಜ್ಯದಲ್ಲಿ 18 ಸ್ಥಾನ ಲಾಭವಾಗಿದೆ. ಉತ್ತರ ಪ್ರದೇಶದ ಏಳು ಸ್ಥಾನಗಳ ಪೈಕಿ ಆರು ಬಿಜೆಪಿ ಪಾಲಾಗಿದ್ದರೆ, ಒಂದು ಸ್ಥಾನದಲ್ಲಿ ಸಮಾಜವಾದಿ ಪಕ್ಷ ಗೆಲುವಿನ ನಗೆ ಬೀರಿದೆ. ಇತರ ಏಳು ರಾಜ್ಯಗಳ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News