ರಾಜ್ಯದಲ್ಲಿರುವ ಅನ್ಯಭಾಷೆ ನಾಮಫಲಕ ತೆರವಿಗೆ ಒತ್ತಾಯಿಸಿ ಪ್ರತಿಭಟನೆ

Update: 2020-11-11 12:58 GMT

ಮಂಡ್ಯ, ನ.11: ರಾಜ್ಯದಲ್ಲಿರುವ ಅನ್ಯಭಾಷೆಗಳ ನಾಮಫಲಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕದಂಬ ಸೈನ್ಯ ಸಂಘಟನೆ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ವಾಣಿಜ್ಯೋದ್ಯಮಿಗಳು ಮತ್ತು ವ್ಯಾಪಾರಸ್ತರು ಅಂಗಡಿ-ಮಳಿಗೆ, ವ್ಯಾಪರದ ಜಾಹಿರಾತುಗಳಲ್ಲಿ ಅನ್ಯಭಾಷೆಗಳನ್ನು ಬಳಸುತ್ತಿರುವುದು ಖಂಡನೀಯ ಎಂದರು.

ಕನ್ನಡನಾಡಿನಲ್ಲಿ ಹುಟ್ಟಿ, ಕನ್ನಡ ನೆಲದ ಅನ್ನ, ನೀರು ಸೇವಿಸುತ್ತ ಕನ್ನಡ ವಿರೋಧಿ ನೀತಿ ಅನುಸರಿಸುವ ಕನ್ನಡ ಭಾಷಾದ್ರೋಹಿಗಳನ್ನು ವಿರೋಧಿಸದೇ ಇರುವುದು ನಮ್ಮ ದೌರ್ಭಾಗ್ಯ ಎಂದು ಅವರು ವಿಷಾದಿಸಿದರು.

ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಲ್ಲಿ ಅನ್ಯಭಾಷೆಗಳ ನಾಮಫಲಕ ಹಾಕಿಲ್ಲ. ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಇಂಗ್ಲೀಷ್, ಹಿಂದಿ, ಇತರೆ ಭಾಷೆಗಳ ನಾಮಫಲಕ ರಾರಾಜಿಸುತ್ತಿವೆ ಎಂದು ಅವರು ಕಿಡಿಕಾರಿದರು.

ಪ್ರಾದೇಶಿಕ ಭಾಷಾ ನೀತಿ ಅನ್ವಯ ರಾಜ್ಯದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ ನೀಡಬೇಕು. ನಗರಸಭೆ, ಕಾರ್ಮಿಕ ಇಲಾಖೆ, ಪುರಸಭೆ, ಸ್ಥಳೀಯ ಸರಕಾರದ ಸಂಸ್ಥೆಗಳು ಇಂಗ್ಲೀಷ್, ಹಿಂದಿ ನಾಮಫಲಕ ತೆರವುಗೊಳಿಸಲು ಮುಂದಾಗಬೇಕು. ಇಲ್ಲದಿದ್ದರೆ ಆ ಕಾರ್ಯವನ್ನು ನಮ್ಮ ಸಂಘಟನೆ ಮಾಡಲಿದೆ ಎಂದು ಅವರು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ದಳದ ಯುವ ಘಟಕ ರಾಜ್ಯಾಧ್ಯಕ್ಷ ಎಂ.ಲೋಕೇಶ್, ಕದಂಬಸೈನ್ಯ ರಾಜ್ಯ ಸಮಿತಿ ಸದಸ್ಯ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಸಂಚಾಲಕ ಭಗವಾನ್, ಜಿಲ್ಲಾ ಮುಖಂಡ ಯೋಗೇಶ್, ಹನುಮಂತು, ರಾಮು, ಸುನಿಲ್‍ ಕುಮಾರ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News