ಚಿಕ್ಕಮಗಳೂರು: ಸುಪ್ರೀಂ ತೀರ್ಪು ಮರುಪರಿಶೀಲನೆಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಅರೆಬೆತ್ತಲೆ ಧರಣಿ

Update: 2020-11-11 13:08 GMT

ಬಿಜೆಪಿ ಸರಕಾರದಿಂದ ದಲಿತಪರ ಕಾನೂನುಗಳಿಗೆ ಧಕ್ಕೆ: ಮಾಜಿ ಸಚಿವ ಬಿ.ಬಿ.ನಿಂಗಯ್ಯ

ಚಿಕ್ಕಮಗಳೂರು, ನ.11: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಕೋಮುವಾದಿಗಳು, ಮನುವಾದಿಗಳು ಜಾತಿವಾದಿಗಳ ಹಿತರಕ್ಷಣೆಗೆ ಬಿಜೆಪಿ ಸರಕಾರ ಆಧ್ಯತೆ ನೀಡುತ್ತಿದೆ. ದಲಿತರು, ರೈತರು, ಕಾರ್ಮಿಕರ ಹಕ್ಕು ರಕ್ಷಣೆಗಾಗಿದ್ದ ಕಾನೂನುಗಳನ್ನು ಹಿಂಬಾಗಿಲ ಮೂಲಕ ತಿದ್ದುಪಡಿ ಮಾಡುತ್ತಾ ದುರ್ಬಲಗೊಳಿಸುತ್ತಿದೆ ಎಂದರು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಬಿ.ನಿಂಗಯ್ಯ ಆರೋಪಿಸಿದ್ದಾರೆ.

"ನಾಲ್ಕು ಗೋಡೆಗಳ ನಡುವೆ ನಡೆದ ದಲಿತರ ಮೇಲಿನ ನಿಂದನೆ, ಅವಮಾನದಂತಹ ಪ್ರಕರಣಗಳಡಿಯಲ್ಲಿ ಆರೋಪಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ" ಎಂದು ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ಇತ್ತೀಚೆಗೆ ಪ್ರಕರಣವೊಂದರಲ್ಲಿ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲಗೊಳಿಸುವ ತೀರ್ಪು ನೀಡಿದ್ದು, ಕೇಂದ್ರ ಸರಕಾರ ಈ ಆದೇಶದ ವಿರುದ್ಧ ಪುನರ್‍ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಆಗ್ರಹಿಸಿ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅರೆಬೆತ್ತಲೆ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ಈ ದೇಶದ ದೊಡ್ಡ ಶತ್ರುವಾಗಿದ್ದು, ಜಾತಿಯ ಕಾರಣಕ್ಕೆ ಶೋಷಿತ ಸಮುದಾಯಗಳ ಜನರನ್ನು ಅವಮಾನಿಸುವುದು, ಹತ್ಯೆ ಮಾಡುವುದು, ಅತ್ಯಾಚಾರ ಮಾಡುವುದು, ಬಹಿಷ್ಕಾರ ಹಾಕುವಂತಹ ದೌರ್ಜನ್ಯಗಳು ಈ ಹಿಂದೆ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ದಲಿತರ ಮೇಲಿನ ಮೇಲ್ವರ್ಗದವರ ಈ ಅಮಾನುಷ ವರ್ತನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 1989ರಲ್ಲಿ ಅಂದಿನ ಸರಕಾರ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಿದೆ. ಅಂದಿನಿಂದ ಮೇಲ್ವರ್ಗದವರು ಕಾನೂನಿನ ಭಯದಿಂದ ದಲಿತರ ಮೇಲೆ ನಡೆಸುವ ದೌರ್ಜನ್ಯಗಳು ಕೊಂಚ ಕಡಿಮೆಯಾಗಿದ್ದವು. ಇಂತಹ ಬಲಿಷ್ಠ ಕಾನೂನು ಇದ್ದರೂ ಇಂದಿಗೂ ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ. ಕಾಯ್ದೆಯ ಅನುಷ್ಠಾನ ಸಮರ್ಪಕವಾಗಿ ಆಗದಿರುವುದರಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಆರೋಪಿಗಳಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಪರ ಕಾಯ್ದೆ, ಕಾನೂನುಗಳನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಆಡಳಿತದಿಂದಾಗಿ ದೇಶದಲ್ಲಿ ಮನವಾದಿ ಆಡಳಿತ ಹೆಚ್ಚುತ್ತಿದೆ. ಸಂವಿಧಾನಿಕ ಸಂಸ್ಥೆಗಳಲ್ಲಿ ಮೇಲ್ವರ್ಗದವರನ್ನು ನೇಮಿಸಿಕೊಂಡಿರುವ ಕೇಂದ್ರ ಸರಕಾರ ಅವರ ಮೂಲಕ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ್ಗಗಳೂ ಸೇರಿದಂತೆ ಬಡವರು, ಕಾರ್ಮಿಕರು, ರೈತರ ಪರವಾಗಿದ್ದ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ. ದಲಿತ ದೌರ್ಜನ್ಯ ತಡೆ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್‍ನ ತ್ರಿ ಸದಸ್ಯಪೀಠ ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ನಾಲ್ಕು ಗೋಡೆಗಳ ಮಧ್ಯೆ ನಡೆದ ದಲಿತ ಅವಮಾನ ಪ್ರಕರಣಕ್ಕೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು ಸಂವಿಧಾನ ವಿರೋಧಿ ತೀರ್ಪಾಗಿದ್ದು, ನ್ಯಾಯ ನೀಡಬೇಕಾದ ನ್ಯಾಯಾಂಗ ವ್ಯವಸ್ಥೆಯೇ ಹಾದಿ ತಪ್ಪಿದಾಗ ಶಾಸಕಾಂಗ ಮತ್ತು ಕಾರ್ಯಾಂಗ ತನ್ನ ಕೆಲಸ ಮಾಡಬೇಕಿದೆ. ಈ ಆದೇಶದ ವಿರುದ್ಧ ದೇಶಾದ್ಯಂತ ಅಸಮಾಧಾನ, ಆಕ್ರೋಶ, ಪ್ರತಿಭಟನೆಗಳ ಕೂಗು ಎದ್ದಿದ್ದು, ಆದೇಶದ ಬಗ್ಗೆ ಸಂಸತ್‍ನಲ್ಲಿ ಚರ್ಚೆಯಾಗಬೇಕು. ಸರಕಾರ ಈ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿ ಆದೇಶ ರದ್ದು ಮಾಡಲು ಕ್ರಮಕೈಗೊಳ್ಳಬೇಕು ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಶೋಷಿತ ಸಮುದಾಯಗಳ ಹಕ್ಕುಗಳನ್ನು ಮೊಟಕುಗೊಳಿಸಲು ಮನುವಾದಿಗಳು ಹುನ್ನಾರ ನಡೆಸಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಮನುವಾದಿಗಳೇ ನ್ಯಾಯಾಧೀಶರಾಗಿರುವುದರಿಂದ ಮನುವಾದಿಗಳ ಕಾರ್ಯ ಸುಲಲಿತವಾಗಿದೆ. ಕೇಂದ್ರದ ಬಿಜೆಪಿ ಸರಕಾರ ಈ ಹಿಂದೆ ರೈತರು,ಕಾರ್ಮಿಕರ ಪರವಾಗಿದ್ದ ಕಾನೂನುಗಳಿಗೆ ಹಿಂಬಾಗಿಲ ಮೂಲಕ ತಿದ್ದುಪಡಿ ಮಾಡಿದೆ. ಈಗ ದಲಿತ ದೌರ್ಜನ್ಯ ತಡೆ ಕಾಯ್ದೆಗೂ ಹಿಂಬಾಗಿಲ ಮೂಲಕ ತಿದ್ದುಪಡಿ ತರುವ ಪ್ರಯತ್ನ ಸಾಗಿದೆ. ದಲಿತರ ಶೋಷಣೆ ತಪ್ಪಿಸಲು ಇದ್ದ ಏಕೈಕ ಕಾನೂನು ನ್ಯಾಯಾಲಯದ ಈ ಆದೇಶದಿಂದಾಗಿ ದುರ್ಬಲಗೊಂಡಿದೆ ಎಂದ ಅವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಗಳು ರಾಜಕೀಯ ಅಧಿಕಾರವನ್ನು ಮನುವಾದಿಗಳಿಗೆ ನೀಡಿದ್ದರ ಫಲ ಇದಾಗಿದ್ದು, ಭವಿಷ್ಯದಲ್ಲಾದರೂ ಈ ಸಮುದಾಯದವರು ಒಗ್ಗೂಡಿ ರಾಜಕೀಯ ಅಧಿಕಾರ ಹಿಡಿಯುವುದರಿಂದ ಸಂವಿಧಾನದ ಯಥಾವತ್ ಜಾರಿ ಸಾಧ್ಯ ಎಂದರು.

ದಸಂಸ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ದಲಿತರನ್ನು ಅವಮಾನಿಸಿದ ಆರೋಪಿಗೆ ದಲಿತ ದೌರ್ಜನ್ಯ ಕಾಯ್ದೆಯಡಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿರುವುದು ದಲಿತರ ಆಸ್ಮಿತೆಗೆ ಪೆಟ್ಟು ನೀಡಿದಂತಾಗಿದೆ. ಜಾತಿ, ಧರ್ಮಗಳ ಆಧಾರದ ಮೇಲೆ ಅಧಿಕಾರ ಹಿಡಿದಿರುವ ಬಿಜೆಪಿ ಪಕ್ಷದ ಹುನ್ನಾರ ಪ್ರತೀಕ ಇದಾಗಿದ್ದು, ಸಂವಿಧಾನ ಬದ್ಧ ಕಾಯ್ದೆ, ಕಾನೂನುಗಳನ್ನು ಬಿಜೆಪಿ ಸರಕಾರ ಒಂದೊಂದಾಗಿ ನಾಶ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಡುತ್ತಿದೆ. ಇಂತಹ ಸರ್ವಾಧಿಕಾರಿ ಆಡಳಿತ ವಿರುದ್ಧ ಶೋಷಿತ ಸಮುದಾಯಗಳು ಬೀದಿಗಿಳಿದು ಹೋರಾಟ ನಡೆಸದಿದ್ದಲ್ಲಿ ಮನುವಾದಿ ಆಡಳಿತ ಶೀಘ್ರ ದೇಶ ಆಳಲಿದೆ ಎಂದು ಎಚ್ಚರಿಸಿದರು.

ಬಿಎಸ್ಪಿ ಮುಖಂಡ ಹಾಗೂ ವಕೀಲ ಪರಮೇಶ್ವರ್ ಮಾತನಾಡಿ, ನ್ಯಾಯಾಲಯದ ಈ ಆದೇಶದಿಂದಾಗಿ ಇನ್ನು ಮುಂದೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಸಲು ಸಾಧ್ಯವಾಗುವುದಿಲ್ಲ. ದೌರ್ಜನ್ಯ, ಕೊಲೆ, ಅತ್ಯಾಚಾರ ನಡೆಸುವ ಮೇಲ್ವರ್ಗದವರು ಇನ್ನು ಮುಂದೆ ನಾಲ್ಕುಗೋಡೆಗಳ ಮಧ್ಯೆಯೇ ದೌರ್ಜನ್ಯ ಎಸಗಿದಲ್ಲಿ ಇಂತಹ ದೌರ್ಜನ್ಯಗಳಿಗೆ ದಲಿತರಿಗೆ ನ್ಯಾಯ ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಸ್ವಾಭಿಮಾನದಿಂದ ಬದುಕುವ ಯಾರೂ ನ್ಯಾಯಾಲಯದ ಈ ತೀರ್ಪು ಒಪ್ಪಲು ಸಾಧ್ಯವಿಲ್ಲ. ಸರಕಾರಗಳಿಗೆ ದೇಶದಲ್ಲಿ ಜಾತಿ ದೌರ್ಜನ್ಯ ತಡೆಯುವ ಆಸಕ್ತಿ ಇರುವುದು ನಿಜವಾದಲ್ಲಿ ಈ ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು. ತಪ್ಪಿದಲ್ಲಿ ನಾವು ಕಾನೂನು ಹೋರಾಟಕ್ಕಿಳಿಯುವುದಾಗಿ ತಿಳಿಸಿದರು.

ವಕೀಲ ರಮೇಶ್, ಮುಸ್ಲಿಂ ಸಂಘಟನೆಗಳ ಮುಖಂಡರಾದ ಅಶ್ರಫ್ ಅಲಿ, ಟಿಪ್ಪು ಸೇನೆಯ ಜಂಶೀದ್‍ ಖಾನ್, ಐಕ್ಯ ವೇದಿಕೆಯ ಅಜ್ಮತ್‍ ಪಾಶ, ರೈತ ಸಂಘದ ಆರ್.ಆರ್.ಮಹೇಶ್ ಮತ್ತಿತರರು ಮಾತನಾಡಿದರು.

ವಿವಿಧ ಸಂಘಟನೆಗ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ಕೂದುವಳ್ಳಿ ಮಂಜುನಾಥ್, ರೈತಸಂಘದ ಬಸವರಾಜ್, ಸಿಪಿಐ ಪಕ್ಷದ ರೇಣುಕಾರಾಧ್ಯ, ಅಂಗಡಿ ಚಂದ್ರು, ಗೌಸ್‍ ಮೊಹಿದ್ದೀನ್, ಗೌಸ್ ಮುನೀರ್, ಬಿಎಸ್ಪಿ ಸುಧಾ, ಉಮೇಶ್, ಪೂರ್ಣೇಶ್, ಹರೀಶ್ ಮಿತ್ರಾ, ಹೊನ್ನೇಶ್ ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಭಾಗವಹಿಸಿದ್ದರು. ಧರಣಿ ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಧರಣಿಗೂ ಮುನ್ನ ಮುಖಂಡರು, ಕಾರ್ಯಕರ್ತರು ಅರೆಬೆತ್ತಲೆಯಾಗಿ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನ್ಯಾಯಾಲಯ ಇತ್ತೀಚೆಗೆ ದಲಿತ ವಿರೋಧಿ ಕಾನೂನು, ಆದೇಶಗಳನ್ನು ಜಾರಿ ಮಾಡುತ್ತಿದೆ. ದಲಿತರ ಭೂಮಿ ರಕ್ಷಣೆಗಾಗಿ ಇದ್ದ ಪಿಟಿಸಿಎಲ್ ಕಾಯ್ದೆಗೆ ಇತ್ತೀಚೆಗೆ ಸುಪ್ರೀಂಕೋಟ್ ಕಾಲಮಿತಿ ಕಾನೂನು ಮಾಡಿದೆ. ಪಿಟಿಸಿಎಲ್ ಕಾಯ್ದೆಯಲ್ಲಿ ಮೇಲ್ವರ್ಗದವರು ಕಬಳಿಸಿರುವ ದಲಿತರ ಭೂಮಿಯನ್ನು ಹಿಂಪಡೆಯಲು ಪ್ರಕರಣ ಎಷ್ಟೇ ವರ್ಷ ಹಳೆಯದಾಗಿದ್ದರೂ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಾಧ್ಯವಿತ್ತು. ಆದರೆ ನ್ಯಾಯಾಲಯ ಕಾಲಮಿತಿಯ ಕಾನೂನು ಹೇರಿರುವುದರಿಂದ ಹಳೆಯ ಪ್ರಕರಣಗಳಡಿಯಲ್ಲಿ ದಲಿತರು ನ್ಯಾಯ ಪಡೆಯಲು ಸಾಧ್ಯವಿಲ್ಲ ಎಂಬಂತಾಗಿದೆ. ಸರಕಾರ ಪಿಟಿಸಿಎಲ್ ಕಾಯ್ದೆಗೆ ಕಾಲಮಿತಿ ಹೇರಿರುವುದರ ವಿರುದ್ಧ ಮರಪರಿಶೀಲನಾ ಅರ್ಜಿ ಸಲ್ಲಿಸಬೇಕು.

- ಪರಮೇಶ್ವರ್, ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News