ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಭೆ

Update: 2020-11-11 16:22 GMT

ಬೆಂಗಳೂರು, ನ.11: ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ, ಇದೀಗ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‍ರಚನೆ ಕುರಿತು ಆಡಳಿತರೂಢ ಬಿಜೆಪಿಯಲ್ಲಿ ಚರ್ಚೆಗಳು ಆರಂಭವಾಗಿವೆ.

ಬುಧವಾರ ಸದಾಶಿವನಗರದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಮೂಲ ಬಿಜೆಪಿಯ ಹಲವು ಶಾಸಕರು ಸಭೆ ಸೇರಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ರಮೇಶ್ ಜಾರಕಿಹೊಳಿ ಅವರ ನಿವಾಸ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಪರಿಣಮಿಸಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ, ಬೆಳ್ಳಿ ಪ್ರಕಾಶ್, ಶಂಕರ್ ಪಾಟೀಲ್ ಮುನೇನಕೊಪ್ಪ, ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಮೇಶ್ ಜಾರಕಿಹೊಳಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹೇರಿ ಸಂಪುಟ ಸೇರ್ಪಡೆಗೆ ಕೆಲವು ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆಯನ್ನು ಕೈ ಬಿಡುವ ಮಾತುಗಳು ಕೇಳಿ ಬಂದಿದ್ದವು. ಆದರೆ, ರಮೇಶ್ ಜಾರಕಿಹೊಳಿ ಮಧ್ಯಪ್ರವೇಶದಿಂದ ಅವರ ಸಚಿವ ಸ್ಥಾನ ಉಳಿಯಿತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ರಮೇಶ್ ಜಾರಕಿಹೊಳಿ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸಂಪುಟಕ್ಕೆ ಯಾರನ್ನೂ ಸೇರಿಸಿಕೊಳ್ಳಬೇಕು ಅನ್ನೋದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ನಾನು ಉಪ ಮುಖ್ಯಮಂತ್ರಿಯ ಆಕಾಂಕ್ಷಿಯಲ್ಲ. ಮುಖ್ಯಮಂತ್ರಿ ಹಾಗೂ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಪ್ರಮುಖವಾದ ಖಾತೆಯನ್ನು ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ನಾನು ಯಾವುದೆ ಪವರ್ ಸೆಂಟರ್ ಅಲ್ಲ.

-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News