ಉತ್ತಮ ಆರೋಗ್ಯ, ಶಿಕ್ಷಣದಿಂದ ತಾಯಿ ಮರಣ ತಪ್ಪಿಸಬಹುದು: ಎಐಎಂಎಸ್‍ಎಸ್ ರಾಜ್ಯ ಕಾರ್ಯದರ್ಶಿ ಶೋಭಾ

Update: 2020-11-11 16:30 GMT

ಬೆಂಗಳೂರು, ನ.11: ದೇಶದಲ್ಲಿ ಹೆಚ್ಚುತ್ತಿರುವ ತಾಯಿ ಮರಣ ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸಲು ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು 18ರಿಂದ 21ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಆದರೆ, ಹೆಚ್ಚುತ್ತಿರುವ ತಾಯಿ ಮರಣಕ್ಕೆ ಇದೊಂದೇ ಪರಿಹಾರವಲ್ಲ. ಉಚಿತ ಹಾಗೂ ಉತ್ಕೃಷ್ಟ ಆರೋಗ್ಯ ಸೇವೆ. ಪೌಷ್ಟಿಕ ಆಹಾರ, ಉತ್ತಮ ಶಿಕ್ಷಣ ನೀಡುವುದರ ಕಡೆಗೆ ಸರಕಾರ ಚಿಂತಿಸಲಿ ಎಂದು ಎಐಎಂಎಸ್‍ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೆಚ್ಚಿನದಾಗಿ ಬಾಲ್ಯಾವಸ್ಥೆಯಿಂದ, ಗರ್ಭಧಾರಣೆಯವರೆಗೆ ಹೆಣ್ಣು ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ. ಪ್ರಸವಪೂರ್ವ, ನಂತರದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳಿಲ್ಲದೇ ಇರುವುದು ತಾಯಿ ಮರಣ  ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಮಹಿಳೆಯರ ಆರೋಗ್ಯ, ಶಿಕ್ಷಣ, ಉದ್ಯೋಗ ಇತ್ಯಾದಿ ಜೀವನಾವಶ್ಯಕತೆಗಳನ್ನು ಪೂರೈಸದೆ ಸರಕಾರಗಳು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ಜನಸಾಮಾನ್ಯರ ಹೆಗಲಿಗೆ ವರ್ಗಾಯಿಸಲು ಎಲ್ಲ ಸಮಸ್ಯೆಗಳಿಗೂ ಜನಸಂಖ್ಯೆ ಹೆಚ್ಚಳ ಎಂಬ ಕಾರಣ ನೀಡುತ್ತಿದೆ. ಪಿತೃಪ್ರಧಾನ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಅನೇಕ ಗರ್ಭಧಾರಣೆಗಳು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತಿದೆ. ಹೀಗಾಗಿ ಸರಕಾರಗಳು ಮೊದಲು ಮಹಿಳೆಯರ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಪೂರಕವಾದಂತಹ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಹಕ್ಕೊತ್ತಾಯಗಳು

-ಪ್ರಸವಪೂರ್ವ ಹಾಗೂ ನಂತರ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಆರೋಗ್ಯ, ಶುಶ್ರೂಷಾ ಸೌಲಭ್ಯಗಳನ್ನು ಒದಗಿಸಬೇಕು.

-ಎಲ್ಲ ಮಹಿಳೆಯರಿಗೂ ಶಿಕ್ಷಣ ಹಾಗೂ ಉದ್ಯೋಗ ಖಾತ್ರಿ ಪಡಿಸಬೇಕು.

-ಮದ್ಯಪಾನವನ್ನು ನಿಷೇಧಿಸಿ ಹಾಗೂ ಸಮೂಹ ಮಾಧ್ಯಮಗಳಲ್ಲಿ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅಶ್ಲೀಲತೆಯನ್ನು ತಡೆಗಟ್ಟಬೇಕು.

-ಸಮಾಜದಿಂದ ಪಿತೃಪ್ರಧಾನ ಮನೋಭಾವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News