ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಸಚಿವ ಡಾ.ಕೆ.ಸುಧಾಕರ್ ಮನವಿ

Update: 2020-11-11 17:23 GMT

ಮೈಸೂರು,ನ.11: ನಮ್ಮಲ್ಲಿರುವ ಹೆಚ್ಚು ಜನರು ಹಳ್ಳಿಗಳಲ್ಲಿ ಜೀವಿಸುತ್ತಿದ್ದು, ಇವರಿಗಾಗಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆಎಸ್‍ಎಸ್ ಶಾಖಾ ಮಠದಲ್ಲಿ ಬುಧವಾರ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ ನಂತರ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರ್ಷ 2,500 ವೈದ್ಯರು ವ್ಯಾಸಂಗ ಮುಗಿಸಲಿದ್ದಾರೆ. ಮಾನವೀಯತೆ ಹಾಗೂ ಜವಾಬ್ದಾರಿಯಿಂದ ಈ ಅಂಶ ಮನಗಂಡು, ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಬೇಕು” ಎಂದು ಕೋರಿದರು.

ಕೆಲ ವೈದ್ಯರು ಈ ನಿಯಮ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂತಹವರು ಪ್ರಕರಣ ಹಿಂಪಡೆದು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು. ಹೊರ ದೇಶಗಳ ಸಂಸ್ಥೆಗಳಲ್ಲೂ ವ್ಯಾಸಂಗ ಮಾಡಬಹುದು. ಆದರೆ ಮರಳಿ ಬಂದು ನಮ್ಮ ದೇಶದಲ್ಲೇ ಸೇವೆ ಸಲ್ಲಿಸಬೇಕು ಎಂದರು.

ರಾಜ್ಯದಲ್ಲಿ 11-12,000 ಜನರಿಗೆ ಒಬ್ಬ ವೈದ್ಯರಿದ್ದಾರೆ. ಸಾವಿರ ಜನರಿಗೆ ಒಂದು ಹಾಸಿಗೆ ಸೌಲಭ್ಯವಿದೆ. 1 ಸಾವಿರ ಜನರಿಗೆ ಒಬ್ಬ ವೈದ್ಯ ಹಾಗೂ ಒಂದು ಸಾವಿರ ಜನರಿಗೆ 2.7 ಹಾಸಿಗೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 150 ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿದ್ದಾರೆ. ಸ್ನಾತಕೋತ್ತರಕ್ಕೆ ಹೊಸದಾಗಿ 17,000 ಸೀಟುಗಳನ್ನು ಸೇರಿಸಲಾಗಿದೆ. ಇವೆಲ್ಲ ಕ್ರಮಗಳಿಂದ ಆರೋಗ್ಯ ಕ್ಷೇತ್ರ ಬಲವಾಗಿದೆ ಎಂದು ವಿವರಿಸಿದರು.

ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಜಾಗತಿಕ ಕೋವಿಡ್ ಮರಣ ಪ್ರಮಾಣ ಶೇ.3.5 ರಿಂದ 3.8 ರಷ್ಟಿದೆ. ದೇಶದಲ್ಲಿ ಶೇ.1.4 ಹಾಗೂ ರಾಜ್ಯದಲ್ಲಿ ಶೇ.1.3 ಇದೆ. ಪಾಸಿಟಿವಿಟಿ ದರವು ಕೆಲ ಜಿಲ್ಲೆಗಳಲ್ಲಿ ಶೇ.19, ಮತ್ತೆ ಕೆಲ ಜಿಲ್ಲೆಗಳಲ್ಲಿ ಶೇ.14 ರಷ್ಟಿತ್ತು. ಈಗ ಪಾಸಿಟಿವಿಟಿ ದರ ಶೇ.2.2 ಗೆ ಇಳಿಕೆಯಾಗಿದೆ ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರ, ಸಂಶೋಧನೆಯಲ್ಲಿ ಜೆಎಸ್‍ಎಸ್ ವಿಶ್ವವಿದ್ಯಾಲಯ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಜೆಎಸ್‍ಎಸ್ ಸಂಸ್ಥೆಯು ನಳಂದ, ತಕ್ಷಶಿಲಾ ಮಾದರಿಯಲ್ಲಿ ಬೆಳೆಯಲಿದೆ. ಕೋವಿಡ್ ವಿರುದ್ಧ ಇನ್ನೂ ಹೋರಾಟ ನಡೆಯುತ್ತಿದ್ದು, 1,800 ಹಾಸಿಗೆಯ ಆಸ್ಪತ್ರೆ, ನುರಿತ ಸಿಬ್ಬಂದಿಯನ್ನು ನೀಡುವ ಮೂಲಕ ಜೆಎಸ್‍ಎಸ್ ಈ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದೆ ಎಂದು ಸಚಿವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ಜೆಎಸ್‍ಎಸ್ ಮಹಾವಿದ್ಯಾಪೀಠದ  ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್‍ಸೂರಮಠ, ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜುನಾಥ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್, ಡಾ.ಬಸನಗೌಡಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News