ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಅಸಮಾಧಾನ

Update: 2020-11-12 15:26 GMT

ಬೆಂಗಳೂರು, ನ.12: ಕೋರ್ಟ್ ಆದೇಶ ಮಾಡದಿದ್ದರೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಯಾವುದೂ ಜಾರಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಕೆಎಸ್‍ಪಿಸಿಬಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.   

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮಂಡಳಿಯ ಕಾರ್ಯನಿರ್ವಹಣೆ ಬಗ್ಗೆ ಹಿರಿಯ ಸೇವಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯ ಸರಕಾರ ಮುಂದಾಗುತ್ತದೆಯೇ ಎಂದು ಕೋರ್ಟ್‍ಗೆ ತಿಳಿಸುವಂತೆ ಕೂಡ ಸೂಚಿಸಿದೆ. 

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ 1974ರಲ್ಲಿ ಸ್ಥಾಪನೆಯಾಗಿದ್ದು, ಎಲ್ಲ ರೀತಿಯ ಮಾಲಿನ್ಯಗಳಿಗೆ ಸಂಬಂಧಿಸಿದಂತೆ ಕಾವಲು ನಾಯಿಯಂತೆ ಕೆಲಸ ಮಾಡಬೇಕು. ಆದರೆ 1987ರಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆ ಬಗ್ಗೆ ಅದಕ್ಕೆ ಅರಿವೇ ಇಲ್ಲದಾಗಿದೆ. ಯಾವುದೇ ರೀತಿಯಲ್ಲಿ ಮಾಲಿನ್ಯ ಮಾಡಿದರೆ ಪರಿಸರ ರಕ್ಷಣೆ ಕಾಯ್ದೆ ಮತ್ತು ವಾಯು, ನೀರು(ಮಾಲಿನ್ಯ ನಿಯತ್ರಣ) ಕಾಯ್ದೆಯಡಿ ಶಿಕ್ಷಿಸುವ ಅಧಿಕಾರವಿದೆ. ಆದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಕಾಯ್ದೆ ಬಗ್ಗೆ ಅರಿವೇ ಇಲ್ಲ. ಹೀಗಾಗಿ ಹಲವು ಕೇಸುಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ, ಅಥವಾ ಆರೋಪ ದಾಖಲಾಗಿಲ್ಲ ಎಂದು ಕೋರ್ಟ್ ಹೇಳಿದೆ.

ಘನತ್ಯಾಜ್ಯ ನಿರ್ವಹಣೆ ನಿಯಮ 2016 ಮತ್ತು ನಿರ್ಮಾಣ ಮತ್ತು ಕೆಡವಿಕೆ ನಿಷ್ಪ್ರಯೋಜಕ ನಿಯಮ 2016ರಲ್ಲಿ ಮಂಗಳೂರು ಸಿಟಿ ಕಾರ್ಪೋರೇಷನ್ ತಂದಿರುವ ನಿಯಮವನ್ನು ಸಹ ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ತೋರಿಸಲಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News