ಅರಣ್ಯ ಇಲಾಖೆ ಅಧಿಕಾರಿಗಳಿಂದ‌ ಮಿಂಚಿನ ದಾಳಿ: ಕಾಡುಹಂದಿ ಬೇಟೆಯಾಡಿದ ಆರೋಪಿಯ ಬಂಧನ

Update: 2020-11-12 15:31 GMT

ಶಿವಮೊಗ್ಗ (ನ.12):  ತೀರ್ಥಹಳ್ಳಿ ವನ್ಯ ಜೀವಿ ಅರಣ್ಯ ಇಲಾಖೆ ಅಧಿಕಾರಿಗಳು ಮಿಂಚಿನ‌ದಾಳಿ ನಡೆಸಿ ಕಾಡು ಪ್ರಾಣಿಯನ್ನು ಬೇಟೆಯಾಡಿದ್ದ ಆರೋಪಿಯೋರ್ವನನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಲಿಮನೆಯ ಕುಮಧ್ವತಿ ಮೀಸಲು ಅರಣ್ಯದ ವಾಟಗಾರ ಗ್ರಾಮದಲ್ಲಿ‌ ಕಾಡುಹಂದಿಯನ್ನು ಬೇಟೆಯಾಡಿದ್ದ ನಾಗೇಶ್ ಎಂಬಾತನನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ. ಕಾಡು ಹಂದಿಯನ್ನು ಬೇಟೆಯಾಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ, ವನ್ಯಜೀವಿ ಅರಣ್ಯ ಇಲಾಖೆಯ ಡಿಸಿಎಫ್ ಐಎಂ ನಾಗರಾಜ ನಿರ್ದೇಶನದ ಮೇರೆಗೆ ಆರ್ ಎಫ್ ಒ ಅಫ್ರಿನಾಜ್ ಶುಂಠಿ ಅವರ ಮಾರ್ಗದರ್ಶನದಲ್ಲಿ ಡಿಆರ್ ಎಫ್ ಒ ಪರಶುರಾಮ ದಾಳಿ ನಡೆಸಿ ನಾಗೇಶನನ್ನ ಬಂಧಿಸಿದ್ದಾರೆ.

ಕಾಡುಹಂದಿಯನ್ನು ಉರುಳು ಹಾಕಿ ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾಂಸವನ್ನು ಕೂಡ ತಿಂದಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಆತನನ್ನ ಬಂಧಿಸಿ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಪುಟ್ಟಪ್ಪ, ಪಾಂಡುರಂಗ, ಸಚಿನ, ಸಂತೋಷ, ವಾಹನ ಚಾಲಕ ಪಾಪೇಶ ಅವರು ಪಾಲ್ಗೊ೦ಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News