ಚಿಕ್ಕಮಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಸಂತೇ ಮೈದಾನದಲ್ಲಿ ಸ್ಥಳಾವಕಾಶಕ್ಕೆ ವಿರೋಧ

Update: 2020-11-12 16:27 GMT

ಚಿಕ್ಕಮಗಳೂರು, ನ.12: ನಗರದ ಸಂತೇ ಮೈದಾನದ ಆವರಣದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದರಿಂದ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದಂತಾಗಿದೆ. ಅಲ್ಲದೇ ಬೀದಿಬದಿ ವ್ಯಾಪಾರಿಗಳಿಂದ ಸಂತೇ ವ್ಯಾಪಾರಿಗಳಿಗೂ ಸಮಸ್ಯೆಯಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಮೊದಲಿನಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ ವ್ಯಾಪಾರಿಗಳು ನಗರದ ಸಂತೇಮೈದಾನದಲ್ಲಿ ಗುರುವಾರ ಧರಣಿ ನಡೆಸಿದರು.

ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಸಂತೇ ಮೈದಾನದಲ್ಲಿ ಸಮಾವೇಶಗೊಂಡ ಬೀದಿಬದಿ ವ್ಯಾಪಾರಸ್ಥರು ಮತ್ತು ಸಂತೇ ವ್ಯಾಪಾರಸ್ಥರು ದಿಢೀರ್ ಧರಣಿ ನಡೆಸಿ ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬೀದಿಬದಿ ವ್ಯಾಪಾರಸ್ಥ ಕುಮಾರ್ ಮಾತನಾಡಿ, ಬೀದಿಬದಿ ವ್ಯಪಾರಸ್ಥರಿಗೆ ಸಂತೇ ಮೈದಾನದಲ್ಲಿ ಜಾಗ ನೀಡಲಾಗಿದೆ. ನೂರಾರು ಅಂಗಡಿಗಳು ಒಂದೇ ಸ್ಥಳದಲ್ಲಿ ವ್ಯಾಪಾರ ಮಾಡಬೇಕಿರುವುದರಿಂದ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ತಮ್ಮ ಗ್ರಾಹಕರು ಪ್ರತಿನಿತ್ಯ ಸಂತೇಮೈದಾನಕ್ಕೆ ನಮ್ಮನ್ನು ಹುಡುಕಿಕೊಂಡು ಬಂದು ವ್ಯಾಪಾರ ಮಾಡುತ್ತಾರೆಂಬ ನಂಬಿಕೆಯಿಲ್ಲ, ಇದರಿಂದ ಹಾಕಿದ ಬಂಡವಾಳ ಬರುವ ಸ್ಥಿತಿಯಿಲ್ಲ. ಸದ್ಯ ವ್ಯಾಪಾರ ಇಲ್ಲದೇ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ತಳ್ಳುಗಾಡಿ ಹಣ್ಣು ವ್ಯಾಪಾರಸ್ಥ ಧನು ಮಾತನಾಡಿ, ಹಬ್ಬಗಳ ಸಂದರ್ಭದಲ್ಲಿ ಸಂತೇಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಬಹುದು. ಬೇರೆ ದಿನಗಳಲ್ಲಿ ಇಲ್ಲಿ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಿಲ್ಲ. ಹಣ್ಣು ಮತ್ತು ಹೂವು ಬೇಗ ಹಾಳಾಗಿ ಹೋಗುತ್ತವೆ. ಇದರಿಂದ ವ್ಯಾಪಾರಸ್ಥರು ಕಷ್ಟಕ್ಕೆ ಸಿಲುಕುವ ಸ್ಥಿತಿ ಇದೆ. ಆದ್ದರಿಂದ ಈ ಹಿಂದೆ ಇದ್ದ ಸ್ಥಳದಲ್ಲೇ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಸಂತೇಮೈದಾನದಲ್ಲಿ ವ್ಯಾಪಾರಸ್ಥರು 20-30 ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದಾರೆ. ತಕ್ಷಣ ಸಂತೇಮೈದಾನದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಅವಕಾಶ ನೀಡುವುದರಿಂದ ಸಂತೇ ವ್ಯಾಪಾರಸ್ಥರಿಗೆ ಅನಾನುಕೂಲ ಉಂಟಾಗಲಿದೆ. ಬೀದಿಬದಿ ವ್ಯಾಪಾರಸ್ಥರನ್ನು ನಗರಸಭೆ ಅಧಿಕಾರಿಗಳು ಸೂಕ್ತ ಜಾಗ ನೀಡುತ್ತೇವೆಂದು ಹೇಳಿ ಕಳೆದ 1 ತಿಂಗಳಿಂದ ಅಲೆದಾಡಿಸುತ್ತಿದ್ದಾರೆ. ಬೀದಿಬದಿ ವ್ಯಾಪಾರಸ್ಥರನ್ನು ಸರ್ವೇ ಕಾರ್ಯ ನಡೆಸದೇ ಸ್ಥಳ ನಿಗದಿಪಡಿಸಿದ್ದು, ಬೀದಿಬದಿ ವ್ಯಾಪರಸ್ಥರಲ್ಲದವರು ಜಾಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಸಿ ಸೂಕ್ತ ಜಾಗ ಒದಗಿಸಬೇಕೆಂದು ಬೀದಿಬದಿ ವ್ಯಾಪಾರಿಗಳು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಬಸವರಾಜ್, ಸಂತೇಮೈದಾನ ವಿಶಾಲವಾಗಿದ್ದು, ಸಂತೇವ್ಯಾಪಾರಸ್ಥರಿಗೂ ಮತ್ತು ಬೀದಿಬದಿ ವ್ಯಾಪಾರಸ್ಥರಿಗೂ ಅವಕಾಶ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯೇ ವ್ಯಾಪಾರಸ್ಥರ ಮಳಿಗೆ ನಿರ್ಮಾಣ ಮಾಡಲು ಈಗಾಗಲೇ ಡಿಪಿಆರ್ ತಯಾರಿಸಲಾಗುತ್ತಿದೆ. ಇದರಿಂದ ಬೀದಿಬದಿ ವ್ಯಾಪಾರಸ್ಥರಿಗೆ ಖಾಯಂ ನೆಲೆ ಸಿಗಲಿದೆ ಎಂದು ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರಾದರೂ ವ್ಯಾಪಾರಸ್ಥರು ಪಟ್ಟು ಸಡಿಸಲಿಲ್ಲ.

ಈ ಸಂದರ್ಭದಲ್ಲಿ ಸಿಪಿಐ ಸಿಪಿಐ ಮುಖಂಡ ರೇಣುಕಾರಾಧ್ಯ, ಜಿ.ರಘು, ಬಿಜೆಪಿ ಮುಖಂಡ ಅನಿಲ್‍ಕುಮಾರ್, ಮದ್ಯ ಪ್ರವೇಶಿಸಿ ಬೀದಿಬದಿ ವ್ಯಾಪಾರಸ್ಥರು ಮತ್ತು ಸಂತೇವ್ಯಾಪಾರಸ್ಥರಿಗೆ ಅನ್ಯಾಯ ವಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ವ್ಯಾಪಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಆಯುಕ್ತ ಬಸವರಾಜ್ ಭರವಸೆ ನೀಡಿದ್ದರಿಂದ ಧರಣಿ ಕೈಬಿಡಲಾಯಿತು.

ಸರಕಾರ ಬೀದಿಬದಿ ವ್ಯಾಪಾರಸ್ಥರಿಗೆ ಶಾಶ್ವತ ನೆಲೆ ಕಲ್ಪಿಸಿಕೊಡುವ ಸುತ್ತೋಲೆ ಹೊರಡಿಸಿದೆ. ಅದರಂತೆ ಸಂತೇ ಮೈದಾನದಲ್ಲಿ ಜಾಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ತಳ್ಳುಗಾಡಿಗಳಲ್ಲಿ ಸುತ್ತಾಡಿ ವ್ಯಾಪಾರ ಮಾಡುವವರಿಗೆ ಯಾವುದೇ ಅಭ್ಯಂತರವಿಲ್ಲ. ನಗರದ ಪ್ರಮುಖ ಸರ್ಕಲ್‍ಗಳಲ್ಲಿ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗುವಂತಹ ಬೀದಿಬದಿ ವ್ಯಾಪಾರಸ್ಥರಿಗೆ ಸಂತೇ ಮೈದಾನದಲ್ಲಿ ಸ್ಥಳ ನೀಡಲಾಗಿದೆ.
-ಬಸವರಾಜ್, ನಗರಸಭೆ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News