‘ಕಸ್ತೂರಿ ರಂಗನ್ ವರದಿ’ ಸಂಪುಟ ಉಪ ಸಮಿತಿ ರಚನೆ: ಸಚಿವ ಸಂಪುಟ ತೀರ್ಮಾನ

Update: 2020-11-12 17:42 GMT

ಬೆಂಗಳೂರು, ನ.12: ಡಾ.ಕಸ್ತೂರಿ ರಂಗನ್ ವರದಿ ಅನ್ವಯ ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಸರಕಾರಕ್ಕೆ ಶಿಫಾರಸು ಮಾಡಲು ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯವನ್ನು ತಿಳಿಸಿದರು.

ಅರಣ್ಯ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಈ ಸಂಪುಟ ಉಪ ಸಮಿತಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸದಸ್ಯರಾಗಿ ಇರಲಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು.

ಉಪ ನಗರ ರೈಲು ಯೋಜನೆಗೆ ನೆರವು: ಬೆಂಗಳೂರು ಉಪನಗರ ರೈಲು ಯೋಜನೆಗೆ ಯೋಜನಾ ವೆಚ್ಚದ ಶೇ.60ರಷ್ಟ(7438 ಕೋಟಿ ರೂ.)ನ್ನು ಸಾಲದ ರೂಪದಲ್ಲಿ ಯೋಜನಾ ವಿಶೇಷ ಉದ್ದೇಶವಾಹಕದ (ಎಸ್‍ವಿಪಿ) ಮೂಲಕ ಬಾಹ್ಯ ಅಭಿವೃದ್ಧಿ ಸಂಸ್ಥೆ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

18 ಸಾವಿರ ಕೋಟಿ ರೂ.ಗಳ ಯೋಜನೆಗೆ ಈಗಾಗಲೇ 3 ಸಾವಿರ ಕೋಟಿ ರೂ.ವೆಚ್ಚ ಮಾಡಲಾಗಿದ್ದು, ಉಳಿದ 15 ಸಾವಿರ ಕೋಟಿ ರೂ.ಗಳನ್ನು ಒದಗಿಸಿ ಉಪನಗರ ರೈಲು ಯೋಜನೆಗೆ ಪೂರ್ಣಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮಾಧುಸ್ವಾಮಿ ಹೇಳಿದರು.

ಕೈಗಾರಿಕೆಗಳು ಭೂಮಿ ನೋಂದಣಿ ಹಾಗೂ 20 ಲಕ್ಷ ರೂ. ಹಾಗೂ ಅದಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್‍ಮೆಂಟ್ ಅಥವಾ ಫ್ಲಾಟ್ ಖರೀದಿ ಮೇಲಿನ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಶೇ. 5ರಿಂದ ಶೇ. 3ಕ್ಕೆ ಇಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯವು ನಿರ್ಭಯ ಯೋಜನೆಯಡಿ ಕೇಂದ್ರ ಮತ್ತು ರಾಜ್ಯದ 60:40 ಅನುಪಾತದಲ್ಲಿ ಮಂಜೂರು ಮಾಡಿರುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಲ್ಲಿ 40.92 ಕೋಟಿ ರೂ.ಗಳ ವೆಚ್ಚದಲ್ಲಿ ಮಹಿಳಾ ಸುರಕ್ಷತೆಯ ವೈಶಿಷ್ಟ್ಯತೆಯನ್ನು ಹೊಂದಿರುವ ಮೊಬೈಲ್ ಆ್ಯಪ್, ಇನ್-ಬಸ್ ಕಣ್ಣಾವಲು ವ್ಯವಸ್ಥೆ ಮತ್ತು ಬಸ್ ನಿಲುಗಡೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ (ಪಿಐಎಸ್) ಪ್ರದರ್ಶಕಗಳನ್ನು ಅನುಷ್ಠಾನಗೊಳಿಸುವ ಯೋಜನೆಗೆ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ಎಂದು ಮಾಧುಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಬಾಲ್ಯದ ಕೆರೆ ಮತ್ತು ಚುಂಚನಹಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್‍ಗಳಲ್ಲಿ ಒಟ್ಟು 32 ಎಕರೆ 18 ಗುಂಟೆ ಜಮೀನನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಶೈಕ್ಷಣಿಕ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಯ 130 ಕೋಟಿ ರೂ.ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ 95 ಗ್ರಾಮ ಪಂಚಾಯತ್‍ಗಳಲ್ಲಿನ 84 ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಕರೆಗಳನ್ನು ಬೇಡ್ತಿ ನದಿಯ ಉಪ ನದಿಯಾದ ಕವಳಗಿಹಳ್ಳದಿಂದ ತುಂಬಿಸುವ ಯೋಜನೆಗೆ 225 ಕೋಟಿ ರೂ.ಮೊತ್ತದ ಯೋಜನಾ ವರದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯ ಚರ್ಚ್ ಸ್ಟ್ರೀಟ್‍ನ್ನು ಟೆಂಡರ್ ಶ್ಯೂರ್ ಮಾದರಿಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯ 18.72 ಕೋಟಿ ರೂ.ಗಳ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಬಿಬಿಎಂಪಿಯ 12 ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಕಾರಿಡಾರ್‍ಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಕೆಆರ್‍ಡಿಸಿಎಲ್ ಬದಲಿಗೆ ಬಿಬಿಎಂಪಿಗೆ ವಹಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಯುವಿಸಿಇ ಬಾಲಕರ 'ಹಾಸ್ಟೆಲ್ ಹಾಗೂ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‍ಡಿ, ವಿದ್ಯಾರ್ಥಿಗಳ ವಸತಿ ನಿಲಯಗಳನ್ನು 30.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಹೊರ ಗುತ್ತಿಗೆ ನಿರ್ವಹಣೆಗೆ ಕೊಡಲು ನಿರ್ಧರಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನಲ್ಲಿ 80 ಎಕರೆ ಜಮೀನಿನಲ್ಲಿ ಮಣಿಪಾಲ ಅಕಾಡೆಮಿಯವರು ರಸ್ತೆ ನಿರ್ಮಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್ ಆದೇಶದನ್ವಯ ಸಂಸದೀಯ ಕಾರ್ಯದರ್ಶಿಗಳ ಹುದ್ದೆ ರದ್ದಾಗಿದ್ದು, ಈ ಹಿನ್ನೆಲೆ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ತೆ ಸಂಬಂಧಿತ ‘ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ತೆಗಳು ಮತ್ತು ಸಂಕೀರ್ಣ ಉಪಬಂಧಗಳ (ನಿರಸನಗೊಳಿಸುವ) ವಿಧೇಯಕ 2020’ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನಿಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News