ಚಿಕ್ಕಮಗಳೂರು: ನಾಲೆಯಲ್ಲಿ ಮುಳುಗಿ ಯುವಕ ಮೃತ್ಯು

Update: 2020-11-13 14:06 GMT

ಚಿಕ್ಕಮಗಳೂರು, ನ.13: ಸ್ನೇಹಿತರೊಂದಿಗೆ ನಾಲೆಯೊಂದರಲ್ಲಿ ಈಜಲು ತೆರಳಿದ್ದ ಯುವಕನೋರ್ವ ಸ್ನೇಹಿತರು, ಸಾರ್ವಜನಿಕರ ಕಣ್ಣೆದುರಿನಲ್ಲೇ ಸಹಾಯಕ್ಕಾಗಿ ಅಂಗಲಾಚುತ್ತಲೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ದೋರನಾಳು ಗ್ರಾಮದಲ್ಲಿ ವರದಿಯಾಗಿದೆ.

ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಯುವಕನನ್ನು ತರೀಕೆರೆ ತಾಲೂಕು ಕೋಡಿಕ್ಯಾಂಪ್ ನಿವಾಸಿ ವಿಶ್ವಾಸ್(18) ಎಂದು ಗುರುತಿಸಲಾಗಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಯುವಕನ ಶವವನ್ನು ನೀರಿನಿಂದ ಹೊರ ತೆಗೆದಿದ್ದಾರೆ.

ಶುಕ್ರವಾರ ಬೆಳಗ್ಗೆ ವಿಶ್ವಾಸ್ ತನ್ನ ನಾಲ್ವರು ಸ್ನೇಹಿತರೊಂದಿಗೆ ತರೀಕೆರೆ ಪಟ್ಟಣ ಸಮೀಪದ ದೋರನಾಳು ಗ್ರಾಮದಲ್ಲಿರುವ ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ವಿಶ್ವಾಸ್ ಈಜಲು ನಾಲೆಗೆ ಇಳಿದಿದ್ದು, ನಾಲೆಯಲ್ಲಿ ನೀರಿನ ಆಳ ಹಾಗೂ ನೀರಿನ ಹರಿವಿನ ಅರಿವಿರದೇ ನೀರಿನಲ್ಲಿ ತೇಲಿಕೊಂಡು ಹೋಗಿದ್ದಾನೆ. ಈ ವೇಳೆ ಯುವಕ ವಿಶ್ವಾಸ್ ನೀರಿನಲ್ಲಿ ಒದ್ದಾಡುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ಆತನ ಸ್ನೇಹಿತರು ನಾಲೆಯ ದಡದಲ್ಲಿ ನಿಂತು ಹಗ್ಗವೊಂದನ್ನು ನೀರಿಗೆ ಎಸೆದು ಮೇಲೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಹಗ್ಗ ಯುವಕನ ಕೈಗೆಟುಕದೇ ಕೆಲ ಹೊತ್ತು ಯುವಕ ನೀರಿನಲ್ಲಿ ಒದ್ದಾಡುತ್ತಲೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಯ ಸೇತುವೆ ಮೇಲಿದ್ದ ಕೆಲ ಸಾರ್ವಜನಿಕರು ಘಟನೆಯ ವಿಡಿಯೋ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಯುವಕನ ಸಹಾಯಕ್ಕೆ ಮುಂದಾಗದೇ ವಿಡಿಯೋ ಮಾಡಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News