ಗೃಹ ನಿರ್ಮಾಣ ಮಂಡಳಿಯಿಂದ ಅಂಗವಿಕಲರು, ವಿಧವೆಯರಿಗೆ ಶೇ.50 ರಿಯಾಯಿತಿಯಲ್ಲಿ ನಿವೇಶನ : ಸಚಿವ ವಿ.ಸೋಮಣ್ಣ

Update: 2020-11-13 10:19 GMT

ಮೈಸೂರು : ಕರ್ನಾಟಕ ಗೃಹ ನಿರ್ಮಾಣ ಮಂಡಳಿ ನಿರ್ಮಾಣ ಮಾಡುವ ಪ್ರತಿ ಬಡಾವಣೆಗಳಲ್ಲೂ ಅಂಗವಿಕಲರು, ವಿಧವೆಯರಿಗೆ ಶೇ.50ರ ರಿಯಾಯಿತಿ ದರದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ನಿವೇಶನ ನೀಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಘೋಷಿಸಿದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಕಡೆ ನಿರ್ಮಾಣ ಮಾಡುವ ಕೆ.ಎಚ್.ಬಿ.ಬಡಾವಣೆಗಳಲ್ಲಿ ವಿಧವೆಯರು, ವಿಶೇಷ ಚೇತನರಿಗೆ ಮಾರುಕಟ್ಟೆ ಬೆಲೆಯ ಅರ್ಧದಷ್ಟು ಕಡಿಮೆ ದರದಲ್ಲಿ ನಿವೇಶನ ಮತ್ತು ಮನೆಗಳನ್ನು ನೀಡಲಾಗುವುದು. ಜೊತೆಗೆ ಪತ್ರಕರ್ತರಿಗಾಗಿ ಪ್ರತ್ಯೇಕ ಬಡಾವಣೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯಾದ್ಯಂತ ಪ್ರಧಾನಮಂತ್ರಿ ಆವಾಸ್, ಬಸವ ಆವಾಸ್, ಅಂಬೇಡ್ಕರ್, ರಾಜೀವ್ ಗಾಂಧಿ, ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸುಮಾರು 9 ಲಕ್ಷ 26 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದರು.

ಗೃಹ ನಿಮಾರ್ಣ ಯೋಜನೆಯಲ್ಲಿ ಭೂಮಿ ಖರೀದಿಗೆ ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದರಿಂದ ಶೇ.50:50, ,40:60, ಅನುಪಾತದಲ್ಲಿ ಜಮೀನುಗಳನ್ನು ಖರೀದಿಸಿ ಹಂಚಿಕೆ ಮಾಡಲಾಗುವುದು‌. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ರಿಯಲ್ ಎಸ್ಟೇಟ್ ಮಾಫಿಯಾಗಳ ಆಡಳಿತಕ್ಕೆ ಪೆಟ್ಟು ಬೀಳಲಿದೆ ಎಂದು ಹೇಳಿದರು. ರಾಜ್ಯಾದ್ಯಂತ ,1.62 ಲಕ್ಷ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ 20 ಮನೆಗಳನ್ನು ನೀಡುವುದಾಗಿ ಹೇಳಿದರು.

ರಾಜ್ಯಾದ್ಯಂತ 2015 ಎಕರೆ ಪ್ರದೇಶದಲ್ಲಿ ರೂ.894 ಕೋಟಿ ಮೊತ್ತದಲ್ಲಿ16 ವಸತಿ ಯೋಜನೆಗಳು ಪ್ರಗತಿಯಲ್ಲಿವೆ. ಅವುಗಳಿಂದ 25,732 ನಿವೇಶನಗಳು ಮತ್ತು 70 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ದೇವರಾಜ ಅರಸು ಹೆಸರಿನಲ್ಲಿ 65 ಸಾವಿರ ನಿವೇಶನಗಳನ್ನು ಅಲೆಮಾರಿ ಕುಟುಂಬಕ್ಕೆ ಹಂಚಿಕೆ ಮಾಡಲಾಗುತ್ತಿದ್ದು, ರಾಜ್ಯದ ಯಾವೊಬ್ಬ ಬಡವನೂ ಸ್ವಂತ ಮನೆ ಇಲ್ಲದೆ ಇರಬಾರದು ಎಂದು ಹಲವು ಯೋಜನೆಗಳನ್ನು ಕೈಗೊಂಡಿರುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಚ್.ಬಿ ಮಂಡಳಿ ಅಧ್ಯಕ್ಷ ಅರಗ ಜ್ಞಾನೇಂದ್ರ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್‌.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾಸೋಮಶೇಖರ್, ಮಾಜಿ ಸಚಿವ ಶಿವಣ್ಣ, ಸಿ.ಎಚ್. ವಿಜಯಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News